ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಕಂಡು ಬಂದ ಧನಾತ್ಮಕತೆಯನ್ನು ಅನುಸರಿಸಿದ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 100 ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು.
ಬೆಳಗ್ಗೆ 10.50 ರ ಹೊತ್ತಿಗೆ ಸೆನ್ಸೆಕ್ಸ್ 67.71 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 39,852.23 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 14.70 ಅಂಕಗಳ ಏರಿಕೆಯೊಂದಿಗೆ 11,937.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ನಿನ್ನೆ ಸೋಮವಾರದ ವಹಿವಾಟನ್ನು ಸೆನ್ಸೆಕ್ಸ್ 169 ಅಂಕಗಳ ಏರಿಕೆಯೊಂದಿಗೆ ಮತ್ತು ನಿಫ್ಟಿ 52 ಅಂಕಗಳ ಏರಿಕೆಯೊಂದಿಗೆ ಮುಗಿಸಿದ್ದವು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಟಾಪ್ ಗೇನರ್ ಗಳಾಗಿ ಮೂಡಿ ಬಂದ ಇಂಡಸ್ ಇಂಡ್ ಬ್ಯಾಂಕ್, ಎಚ್ ಸಿ ಎಲ್ ಟೆಕ್, ಒಎನ್‌ಜಿಸಿ, ಟಾಟಾ ಮೋಟರ್, ಟಿಸಿಎಸ್, ಟಾಟಾ ಸ್ಟೀಲ್ ಮತ್ತು ಇನ್‌ಫೋಸಿಸ್ ಶೇರುಗಳು ಶೇ.2 ರ ಏರಿಕೆಯನ್ನು ದಾಖಲಿಸಿದವು.
ಡಾಲರ್ ಎದುರು ರೂಪಾಯಿ ಇಂದು 16 ಪೈಸೆಗಳ ಏರಿಕೆಯನ್ನು ಕಂಡು 69.49 ರೂ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಬ್ರೆಂಟ್ ಕಚ್ಚಾತೈಲ ಶೇ.0.32ರ ಏರಿಕೆಯನ್ನು ದಾಖಲಿಸಿ ಬ್ಯಾರಲ್ ಗೆ 62.49 ಡಾಲರ್ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು.