ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಸೋಮವಾರ ಶೇ.0.36ರ ಏರಿಕೆಯನ್ನು ದಾಖಲಿಸಿ ಹೊಸ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ಏರಿದವು.
ಬ್ಯಾಂಕಿಂಗ್, ಎನರ್ಜಿ ಮತ್ತು ಟೆಲಿಕಾಂ ಶೇರುಗಳು ಇಂದು ಉತ್ತಮ ಖರೀದಿಯನ್ನು ಕಂಡದ್ದೇ ಸೆನ್ಸೆಕ್ಸ್ ಮತ್ತು ನಿಫ್ಟಿಯ ಹೊಸ ದಾಖಲೆಯ ವಿಕ್ರಮಕ್ಕೆ ಕಾರಣವಾಯಿತು.
ಸೆನ್ಸೆಕ್ಸ್ ಇಂದು ಸೋಮವಾರದ ವಹಿವಾಟನ್ನು 135.73 ಅಂಕಗಳ ಏರಿಕೆಯೊಂದಿಗೆ 37,691.89 ಅಂಕಗಳ ಮಟ್ಟದ ಸಾರ್ವಕಾಲಿಕ ಎತ್ತರದಲ್ಲಿ ಕೊನೆಗೊಳಿಸಿತು. ಇದೇ ರೀತಿ ನಿಫ್ಟಿ 26.30 ಅಂಕಗಳ ಏರಿಕೆಯೊಂದಿಗೆ ಐತಿಹಾಸಿಕ ಎತ್ತರದ 11,387.10 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು. ನಿಫ್ಟಿ ಕಳೆದ ಶುಕ್ರವಾರ 1,360.80 ಅಂಕಗಳ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ತಲುಪಿತ್ತು. ಇಂದು ಆ ದಾಖಲೆ ಅಳಿಸಿ ಹೋಯಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,920 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,599 ಶೇರುಗಳು ಮುನ್ನಡೆ ಸಾಧಿಸಿದವು; 1,124 ಶೇರುಗಳು ಹಿನ್ನಡೆಗೆ ಗುರಿಯಾದವು; 197 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದ ಸ್ಥಿರತೆ, ನಿರೀಕ್ಷೆಗೆ ಮೀರಿದ ಜೂನ್ ತ್ತೈಮಾಸಿಕ ಫಲಿತಾಂಶ, ಡಾಲರ್ ಎದುರು ರೂಪಾಯಿ ಚೇತರಿಕೆ ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಇಂದು ತೇಜಿ ಕಂಡಿದೆ.