ಮುಂಬಯಿ : ನಿರ್ಣಾಯಕ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯುತ್ತಿರುವಂತೆಯೇ ಏಳು ಬೀಳಿನ ಹಾದಿಯಲ್ಲಿ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಎಚ್ಚರಿಕೆಯ ನಡೆ ತೋರಿ 21.66 ಅಂಕಗಳ ಅಲ್ಪ ಏರಿಕೆಯನ್ನು ದಾಖಲಿಸಿ 38,607.01 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಮುಗಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 12.40 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,596.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನ ಟಾಪ್ ಲೂಸರ್ ವೇದಾಂತ ಶೇರು ಶೇ.3.72ರ ಕುಸಿತವನ್ನು ಕಂಡಿತು. ಇದನ್ನು ಅನುಸರಿಸಿ ಎಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ, ಇನ್‌ಫೋಸಿಸ್, ಪವರ್ ಗ್ರಿಡ್, ಐಸಿಐಸಿಐ ಬ್ಯಾಂಕ್, ಟಿಸಿಎಸ್, ಎಚ್‌ಸಿಎಲ್ ಟೆಕ್, ಟಾಟಾ ಸ್ಟೀಲ್, ಕೋಟಕ್ ಬ್ಯಾಂಕ್, ಎಚ್ ಡಿ ಎಫ್ ಸಿ, ಇಂಡಸ್ ಇಂಡ್ ಬ್ಯಾಂಕ್ ಮತ್ತು ಮಾರುತಿ ಶೇರು ಶೇ.1.46ರ ಕುಸಿತವನ್ನು ಕಂಡವು.
ಡಾಲರ್ ಎದುರು ರೂಪಾಯಿ ಇಂದು 11 ಪೈಸೆಯ ಚೇತರಿಕೆಯನ್ನು ಕಂಡು 69 ರೂ.ಮಟ್ಟದಲ್ಲಿ ವಹಿವಾಟು ನಿರತವಾಗಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,693 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,164 ಶೇರುಗಳು ಮುನ್ನಡೆ ಸಾಧಿಸಿದವು; 1,340 ಶೇರುಗಳು ಹಿನ್ನಡೆಗೆ ಗುರಿಯಾದವು; 189 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.