ಮುಂಬಯಿ: ದೇಶದಲ್ಲಿ ಕೋವಿಡ್ 19 ಸೋಂಕಿನ ಎರಡನೇ ಅಲೆಯಿಂದಾಗಿ ಆರ್ಥಿಕ ಅಭಿವೃದ್ಧಿ ಮೇಲಾಗುವ ಪರಿಣಾಮದ ಹಿನ್ನೆಲೆಯಲ್ಲಿ ಮುಂಬಯಿ ಷೇರುಮಾರುಕಟ್ಟೆಯ ಸಂವೇದಿ ಸೂಚ್ಯಂಕ ಅಲ್ಪ ಪ್ರಮಾಣದ ಏರಿಕೆಯೊಂದಿಗೆ ಮಂಗಳವಾರ(ಏಪ್ರಿಲ್ 06)ದ ವಹಿವಾಟು ಅಂತ್ಯಗೊಂಡಿದೆ.
ಇದನ್ನೂ ಓದಿ:ಆನ್ ಲೈನ್ ಗ್ಯಾಂಬ್ಲಿಂಗ್ ನಿಷೇಧ ಕಾನೂನು ಜಾರಿಗೆ ಕಾಯ್ದೆ: ಬೊಮ್ಮಾಯಿ
ಮುಂಬಯಿ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 42.07 ಅಂಕಗಳಷ್ಟು ಅಲ್ಪ ಚೇತರಿಕೆಯೊಂದಿಗೆ 49,201.39 ಅಂಕಗಳ ಗಡಿ ತಲುಪಿ ವಹಿವಾಟು ಮುಕ್ತಾಯಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 45.70 ಅಂಕ ಏರಿಕೆಯಾಗಿ 14,683.50 ಅಂಕದ ಗಡಿ ತಲುಪಿದೆ.
ಏಷ್ಯನ್ ಪೇಂಟ್ಸ್, ಸನ್ ಫಾರ್ಮಾ, ಎಚ್ ಯುಎಲ್, ಎಚ್ ಡಿಎಫ್ ಸಿ, ಡಾ.ರೆಡ್ಡೀಸ್, ನೆಸ್ಲೆ ಇಂಡಿಯಾ ಮತ್ತು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಷೇರುಗಳು ಲಾಭ ಗಳಿಸಿವೆ. ಮತ್ತೊಂದೆಡೆ ಪವರ್ ಗ್ರಿಡ್, ಆ್ಯಕ್ಸಿಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಆಲ್ಟ್ರಾ ಟೆಕ್ ಸಿಮೆಂಟ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಮತ್ತು ಕೆಲವು ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಿಸಿರುವುದು ಹೂಡಿಕೆದಾರರ ಮೇಲೆ ಪರಿಣಾಮ ಬೀರುವಂತಾಗಿದೆ. ಮುಂದಿನ ದಿನಗಳಲ್ಲಿಯೂ ಮುಂಬಯಿ ಷೇರು ಮಾರುಕಟ್ಟೆ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ವಹಿವಾಟು ಹಾವು-ಏಣಿಯಾಟದಂತಾಗಲಿದೆ ಎಂದು ನಿರೀಕ್ಷಿಸಲಾಗಿದೆ.