ನವದೆಹಲಿ:ಭಾರೀ ಪ್ರಮಾಣದ ವಿದೇಶಿ ಬಂಡವಾಳದ ಒಳಹರಿವು ಹಾಗೂ ಜಾಗತಿಕ ಷೇರು ಮಾರುಕಟ್ಟೆಯ ಬೆಳವಣಿಗೆ ಹಿನ್ನೆಲೆಯಲ್ಲಿ ಮುಂಬೈ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಸೋಮವಾರ (ಜನವರಿ 11, 2021) ಆರಂಭಿಕ ವಹಿವಾಟಿನಲ್ಲಿಯೇ ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕ 49,000 ಅಂಕಗಳ ಗಡಿ ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ಸ್ಥಾಪಿಸಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಬಾಂಬೆ ಷೇರುಪೇಟೆ ಸೂಚ್ಯಂಕ (ಬಿಎಸ್ಇ) 49.252 ಅಂಕಗಳ ಗಡಿ ದಾಟಿದ್ದು, ಎನ್ ಎಸ್ ಇ ನಿಫ್ಟಿ 14,400 ಗಡಿ ತಲುಪಿರುವುದಾಗಿ ವರದಿ ತಿಳಿಸಿದೆ.
ಸೆನ್ಸೆಕ್ಸ್ ಸೂಚ್ಯಂಕ ಏರಿಕೆಯಿಂದ ಇನ್ಫೋಸಿಸ್, ಎಚ್ ಸಿಎಲ್ ಟೆಕ್, ಟಿಸಿಎಸ್, ಭಾರ್ತಿ ಏರ್ ಟೆಲ್, ಟೆಕ್ ಮಹೀಂದ್ರಾ ಮತ್ತು ಮಹೀಂದ್ರಾ ಆ್ಯಂಡ್ ಮಹೀಂದ್ರಾದ ಶೇರುಗಳು ಶೇ.3.45ರಷ್ಟು ಲಾಭಗಳಿಸಿವೆ. ಆಲ್ಟ್ರಾ ಸೆಮ್ಕೋ, ಸನ್ ಫಾರ್ಮಾ, ಆ್ಯಕ್ಸಿಸ್ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು 0.99ರಷ್ಟು ನಷ್ಟ ಅನುಭವಿಸಿವೆ.
ಜಾಗತಿಕ ಷೇರುಪೇಟೆ ಬೆಳವಣಿಗೆಗಳು ಮುಂಬೈ ಷೇರುಪೇಟೆ ಮೇಲೆ ಪರಿಣಾಮ ಬೀರಿದ್ದು, ಶುಕ್ರವಾರ(ಜನವರಿ 08, 2021) ಸೆನ್ಸೆಕ್ಸ್ ಸೂಚ್ಯಂಕ ದಾಖಲೆಯ ಏರಿಕೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿತ್ತು.
ಬಾಂಬೆ ಷೇರುಪೇಟೆ ಸೂಚ್ಯಂಕ (ಬಿಎಸ್ ಇ) 689.19 ಅಂಕಗಳ ಜಿಗಿತದೊಂದಿಗೆ 48,782.51 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಂಡಿತ್ತು. ಇದು ಇತ್ತೀಚೆಗಿನ ದಿನದ ದಾಖಲೆಯ ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದರು.