ಮುಂಬಯಿ : ನಿರಂತರ ನಾಲ್ಕನೇ ದಿನವೂ ತನ್ನ ಏರು ಗತಿಯನ್ನು ಕಾಯ್ದುಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರ 185 ಅಂಕಗಳ ಜಿಗಿತದೊಂದಿಗೆ ಸಾರ್ವಕಾಲಿಕ ದಾಖಲೆಯ 39,056 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 44.05 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 11,713.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ವ್ಯವಹಾರದ ನಡುವಿನಲ್ಲಿ ನಿಫ್ಟಿ ಇಂದು 11,729.35 ಅಂಕಗಳ ದಾಖಲೆಯ ಮಟ್ಟವನ್ನು ಏರಿ ಅನಂತರ ಅಲ್ಲಿಂದ ಹಿಂದೆ ಸರಿಯಿತು.
ಇಂದಿನ ವಹಿವಾಟಿನಲ್ಲಿ ಟಾಪ್ ಗೇನರ್ ಎನಿಸಿಕೊಂಡ ಟಾಟಾ ಮೋಟರ್ಸ್ ಶೇರು ಶೇ.8ರ ಜಿಗಿತವನ್ನು ಸಾಧಿಸಿತು.
ಇದನ್ನು ಅನುಸರಿಸಿ ಭಾರ್ತಿ ಏರ್‌ಟೆಲ್, ಟಿಸಿಎಸ್, ಬಜಾಜ್ ಫಿನಾನ್ಸ್, ಪವರ್ ಗ್ರಿಡ್, ಇಂಡಸ್ ಇಂಡ್ ಬ್ಯಾಂಕ್, ಎಸ್‌ಬಿಐ ಶೇರುಗಳು ಶೇ.5ರ ಏರಿಕೆಯನ್ನು ದಾಖಲಿಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,716 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,207 ಶೇರುಗಳು ಮುನ್ನಡೆ ಸಾಧಿಸಿದವು; 1,343 ಶೇರುಗಳು ಹಿನ್ನಡೆಗೆ ಗುರಿಯಾದವು; 146 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.