Advertisement

ಬಡಗು ತಿಟ್ಟಿನ ಹಿರಿಯ ವೇಷಧಾರಿ ಅನಂತ ಕುಲಾಲ್ ವಿಧಿವಶ

12:33 PM Oct 13, 2021 | Team Udayavani |

ಕುಂದಾಪುರ: ಬಡಗು ತಿಟ್ಟು ಯಕ್ಷಗಾನ ರಂಗದ ಹಿರಿಯ ವೇಷಧಾರಿ ಅನಂತ ಕುಲಾಲ್ ಅವರು ಮಂಗಳವಾರ ತಡರಾತ್ರಿ ಮೊಳಹಳ್ಳಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 66 ವರ್ಷ ಪ್ರಾಯವಾಗಿತ್ತು.

Advertisement

ಐದು ದಶಕಗಳ ಕಾಲ ಯಕ್ಷಗಾನ ರಂಗದಲ್ಲಿ ಗೆಜ್ಜೆ ಸೇವೆ ಮಾಡಿ, ವೈವಿಧ್ಯಮಯ ವೇಷಗಳನ್ನು ನಿರ್ವಹಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಅನಂತ ಕುಲಾಲ್ ಅವರು ಪ್ರಸಿದ್ಧ ಮಾರಣಕಟ್ಟೆ ಕ್ಷೇತ್ರದ ಬಯಲಾಟ ಮೇಳಗಳಲ್ಲೇ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಕಳೆದ ಆರು ತಿಂಗಳಿನಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಪುರುಷ ವೇಷಧಾರಿಯಾಗಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದ ಅವರು ಅಮೃತೇಶ್ವರಿ, ಹಿರಿಯಡಕ, ಸಾಲಿಗ್ರಾಮ, ಪೆರ್ಡೂರು, ಹಾಲಾಡಿ ಮೇಳಗಳಲ್ಲೂ ಕಲಾಸೇವೆಗೈದಿದ್ದರು.

ಯಕ್ಷಗಾನ ಕಲಾರಂಗದ ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’, ಎಮ್. ಎಮ್. ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಸನ್ಮಾನಗಳಿಗೆ ಭಾಜನರಾಗಿದ್ದರು.

ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅನಂತ್ ಕುಲಾಲ್ ಅವರ ನಿಧನಕ್ಕೆ ಗಣ್ಯರು, ಸಹಕಲಾವಿದರು ಸೇರಿದಂತೆ ಅಪಾರ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next