Advertisement

ಹಿರಿಯ ಸಾಹಿತಿ  ಬಿ. ಎಸ್‌. ಕುರ್ಕಾಲ್‌ ಇನ್ನಿಲ್ಲ

05:06 PM Nov 13, 2017 | |

ಮುಂಬಯಿ: ಹಿರಿಯ ಶಿಕ್ಷಕ, ಸಂಪಾದಕ, ಕವಿ, ಸಾಹಿತಿ, ಲಕ್ಷ್ಮೀಛಾಯಾ ವಿಚಾರ ವೇದಿಕೆ ಮುಂಬಯಿ ಸಂಚಾಲಕ, ಹಿರಿಯ ಹಾಡು ಕವಿ ಎಂದೇ ಪ್ರಸಿದ್ಧರಾಗಿರುವ   ಬಿ. ಎಸ್‌. ಕುರ್ಕಾಲ್‌ ಪ್ರಸಿದ್ಧಿಯ ಭುಜಂಗ ಶೆಟ್ಟಿ ಕುರ್ಕಾಲ್‌ (85) ಅವರು ನ. 12ರಂದು ಬೊರಿವಲಿ ಪೂರ್ವದ ಎಂ. ಜಿ. ರೋಡ್‌,  ಸಂಜಯ್‌ ಗಾಂಧಿ  ನ್ಯಾಷನಲ್‌ ಪಾರ್ಕ್‌ ಸಮೀಪದ ಶಾಂತಿವನದ  ಧರಂ ಪ್ಯಾಲೇಸ್‌ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

Advertisement

ಮೃತರು ಪುತ್ರ, ಪುತ್ರಿಯನ್ನು ಸೇರಿದಂತೆ  ಅಪಾರ ಬಂಧು ಬಳಗ, ಸಾಹಿತ್ಯಾಭಿಮಾನಿ, ಶಿಷ್ಯವರ್ಗವನ್ನು ಅಗಲಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮುಖವಾಣಿ ಅಕ್ಷಯ ಮಾಸಿಕ  ಕೊಡಮಾಡಿದ ಅಕ್ಷಯದ ಮಾಜಿ ಗೌರವ ಪ್ರಧಾನ ಸಂಪಾದಕ ಎಂ. ಬಿ. ಕುಕ್ಯಾನ್‌ ಪ್ರಾಯೋಜಿತ “ಶ್ರಿ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ 2017’ಯೊಂದಿಗೆ ಗೌರವಿಸಲ್ಪಟ್ಟಿದ್ದರು.

1932ರ ಜುಲೈ  17ರಂದು ಕುರ್ಕಾಲು ಗಣಪಯ್ಯ ಶೆಟ್ಟಿ ಮತ್ತು ಬೋಳ ಲಕ್ಷ್ಮೀ ಶೆಡ್ತಿ ದಂಪತಿ ಪುತ್ರರಾಗಿ ಕುರ್ಕಾಲು  ಕುಂಜಾರುಗಿರಿಯಲ್ಲಿ ಜನಿಸಿದ ಇವರು, ತಂದೆಯವರ ಗಿರಿಜಾ ಶಾಲೆಯಲ್ಲಿ ಅಕ್ಷರಾಭ್ಯಾಸ ಆರಂಭಿಸಿ ಮುಂದೆ ಇನ್ನಂಜೆಯ ಹೈಸ್ಕೂಲಿನಲ್ಲಿ ಶಿಕ್ಷಣವನ್ನು ಪೂರೈಸಿ, ತಮ್ಮದೇ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದರು.

1953 ರಲ್ಲಿ ಮಂಗಳೂರುನ ಶಿಕ್ಷಕ ತರಬೇತಿ ಶಾಲೆಯಲ್ಲಿ ತರಬೇತುಗೊಂಡು ಮತ್ತೆ ಶಿಕ್ಷಕರಾಗಿ ಮುಂದುವರಿದರು. 1966ರಲ್ಲಿ ಮುಂಬಯಿಗೆ ಆಗಮಿಸಿ ವಡಾಲದ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ಹಗಲು ಶಿಕ್ಷಕರಾಗಿ, ರಾತ್ರಿ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಸಂಚಾಲಿತ ಗುರುನಾರಾಯಣ ರಾತ್ರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿ ಎರಡೂ ಶಾಲೆಯಲ್ಲಿ ಸುಮಾರು ಎರಡೂವರೆ ದಶಕಗಳ ಕಾಲ ದೀರ್ಘಾವಧಿಯ ಶಿಕ್ಷಕರಾಗಿ ಸೇವೆಗೈದರು. ರಂಗಕರ್ಮಿ ಆಗಿದ್ದು, ಹಲವಾರು ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಅಭಿನಯಿಸಿ ಭಾರೀ ಜನಮನ್ನಣೆಗೆ ಪಾತ್ರರಾಗಿದ್ದರು.

ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ನ “ಪತ್ರಪುಷ್ಪ’ ಮಾಸಿಕದ ಸಂಪಾದಕರಾಗಿ ಹತ್ತು ವರ್ಷ ಸೇವೆ ಸಲ್ಲಿಸಿದ ಇವರು ಕಾವ್ಯ, ಚುಟುಕು, ಶಿಶುಗೀತೆ, ಅಂಕಣಬರಹ, ನಾಟಕ, ವ್ಯಕ್ತಿಚಿತ್ರ, ರಸಚಿತ್ರ, ಚಿತ್ರಕಥಾ, ಮುಂತಾದ ಪ್ರಕಾರಗಳಲ್ಲಿ ಸುಮಾರು 26 ಕ್ಕೂ ಮಿಕ್ಕಿದ ಕೃತಿಗಳನ್ನು ಪ್ರಕಟಿಸಿದ್ದಾರೆ. ಸುಮಾರು 10 ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ಕುರ್ಕಾಲರ ಗೌರವ ಗ್ರಂಥ ನಿಧಿಯಿಂದ ಈವರೆಗೆ ವಿವಿಧ ಲೇಖಕರ 8 ಕೃತಿಗಳು ಪ್ರಕಟವಾಗಿವೆ. ಹತ್ತಾರು ಕೃತಿಗಳು ಪ್ರಕಟನೆಯ ಹಂತದಲ್ಲಿವೆ.  ಇವರು ಸ್ಥಾಪಿಸಿರುವ ಲಕ್ಷ್ಮೀಛಾಯಾ ವಿಚಾರ ವೇದಿಕೆಯಿಂದ ಪತ್ನಿ  ದಿ| ಜಯಂತಿ ಕುರ್ಕಾಲರ ಹೆಸರಿನಲ್ಲಿ  22 ಮಂದಿ ಸಾಹಿತಿಗಳಿಗೆ ಸಾಹಿತ್ಯ ಪ್ರಶಸ್ತಿ ಪ್ರದಾನಿಸ ಲಾಗಿದೆ. ಕುರ್ಕಾಲ್‌ ಅಭಿಮಾನಿ ಬಳಗ, ನೂರಾರು ವಿದ್ಯಾರ್ಥಿಗಳು, ಅಪಾರ ಸಂಖ್ಯೆಯ ಹಿತೈಷಿಗಳು ಅವರ 77ರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿ ಗಿರಿಜಾತ ಗೌರವ ಗ್ರಂಥ ಸಮರ್ಪಿಸಿದ್ದರು.

Advertisement

ಅನೇಕ ವರ್ಷಗಳಿಂದ ಚೆಂಬೂರು ಗೋವಂಡಿಯ ಸ್ವನಿವಾಸದಲ್ಲೇ ವಾಸ್ತವ್ಯವಾಗಿದ್ದರೂ ಸದ್ಯ ನಿವೃತ್ತ ಜೀವನದಲ್ಲಿ  ಬೊರಿವಲಿ ಪೂರ್ವದ ಶಾಂತಿವನ್‌ನ ಧರಂ ಪ್ಯಾಲೇಸ್‌ ನಿವಾಸದಲ್ಲಿ ಪುತ್ರನ ಜತೆ ವಾಸವಾಗಿದ್ದರು. ಸಂಜೆ ವೇಳೆಗೆ ಪಾರ್ಥೀವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದು ರಾತ್ರಿ ಬೊರಿವಿಲಿಯ ರುದ್ರಭೂಮಿಯಲ್ಲಿ  ಅಂತ್ಯಕ್ರಿಯೆ   ನೆರವೇರಿಸಲಾಯಿತು.

ಸಂತಾಪ

ಬಿ. ಎಸ್‌. ಕುರ್ಕಾಲ್‌ ನಿಧನಕ್ಕೆ ಅವರ ಪರಮ ಶಿಷ್ಯರ ಲ್ಲೋರ್ವ ನ್ಯಾಚುರಲ್‌ ಐಸ್‌ಕ್ರೀಂ ಸಂಸ್ಥೆಯ ರಘುನಂದನ ಕಾಮತ್‌, ಬಿಲ್ಲವರ ಅಸೋಸಿಯೇಶನ್‌ನ ರೂವಾರಿ ಜಯ ಸಿ. ಸುವರ್ಣ, ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ಹಿರಿಯ ಪತ್ರಕರ್ತ ಎಂ. ಬಿ. ಕುಕ್ಯಾನ್‌, ಡಾ| ವ್ಯಾಸರಾವ್‌ ನಿಂಜೂರು, ಸಾಹಿತಿ, ವಿದ್ವಾಂಸ, ರಾಣಿ ಅಬ್ಬಕ್ಕ ತುಳು ಸಂಶೋಧನಾ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಪ್ರೊ| ತುಕಾರಾಮ ಪೂಜಾರಿ, ನ್ಯಾಯವಾದಿ ಬಿ. ಮೊಯಿದ್ದೀನ್‌ ಮುಂಡ್ಕೂರು, ಡಾ| ಸುನೀತಾ ಎಂ. ಶೆಟ್ಟಿ, ಚಂದ್ರಶೇಖರ ಪಾಲೆತ್ತಾಡಿ, ನ್ಯಾಯವಾದಿ  ವಸಂತ ಎಸ್‌. ಕಲಕೋಟಿ, ಡಾ| ಕರುಣಾಕರ ಶೆಟ್ಟಿ ಪಣಿಯೂರು, ಸಾ. ದಯಾ, ನ್ಯಾಯವಾದಿ  ಕಡಂದಲೆ ಪರಾರಿ ಪ್ರಕಾಶ್‌ ಎಲ್‌. ಶೆಟ್ಟಿ, ಪೇತೆಮನೆ ಪ್ರಕಾಶ್‌ ಶೆಟ್ಟಿ, ಡಾ| ಜಿ. ಡಿ. ಜೋಶಿ, ಡಾ| ಆಶಾಲತಾ ಸುವರ್ಣ, ಸಾ. ದಯಾ, ಕಡಂದಲೆ  ಸುರೇಶ್‌ ಭಂಡಾರಿ, ಡಾ| ವಿಶ್ವನಾಥ ಕಾರ್ನಾಡ್‌, ಕೆ. ಮಂಜುನಾಥಯ್ಯ, ಡಾ| ಮಂಜುನಾಥ್‌, ಡಾ| ಜಿ. ಎನ್‌. ಉಪಾಧ್ಯ, ಎಚ್‌. ಬಿ. ಎಲ್‌. ರಾವ್‌, ಶಿಮುಂಜೆ ಪರಾರಿ, ಮೋಹನ್‌ ಮಾರ್ನಾಡ್‌, ರಾಮಮೋಹನ ಶೆಟ್ಟಿ ಬಳುRಂಜೆ, ಎಸ್‌. ಕೆ. ಸುಂದರ್‌, ಡಾ| ಈಶ್ವರ ಅಲೆವೂರು, ಹರೀಶ್‌ ಜಿ. ಪೂಜಾರಿ ಕೊಕ್ಕರ್ಣೆ, ಹರೀಶ್‌ ಹೆಜ್ಮಾಡಿ, ಪಂಡಿತ್‌ ನವೀನ್‌ ಚಂದ್ರ ಆರ್‌. ಸನೀಲ್‌, ಪತ್ರಕರ್ತ ದಯಾಸಾಗರ್‌ ಚೌಟ, ಪೇತ್ರಿ ವಿಶ್ವನಾಥ ಶೆಟ್ಟಿ  ಸೇರಿದಂತೆ ಅನೇಕ ಗಣ್ಯರು ಹಾಗೂ ಮಹಾನಗರದಲ್ಲಿನ ಬಹುತೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ತುಳು ಕನ್ನಡಾಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next