“ಹಸಿರು ರಿಬ್ಬನ್’ ಎಂಬ ಚಿತ್ರದ ಮೂಲಕ ನಿರ್ದೇಶಕರಾದ ಹಿರಿಯ ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಈಗ ಸಿನಿಮಾ ಕ್ಷೇತ್ರದಲ್ಲಿ ಇನ್ನೂ ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ. “ಅಮೃತವಾಹಿನಿ’ ಎಂಬ ಚಿತ್ರದಲ್ಲಿ ಅವರು ಇದೇ ಮೊದಲ ಬಾರಿಗೆ ನಟಿಸುತ್ತಿದ್ದು, ಚಿತ್ರ ನಾಳೆ (ಮೇ 6) ದೊಡ್ಡ ಗಣಪತಿ ದೇವಸ್ಥಾನದ ಎದುರಿರುವ ನವ ಮಂತ್ರಾಲಯದಲ್ಲಿ ಪ್ರಾರಂಭವಾಗಲಿದೆ.
ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಕ್ಯಾಮೆರಾ ಚಾಲನೆ ಮಾಡಿದರೆ, ನಟ-ನಿರ್ದೇಶಕ ರಮೇಶ್ ಅವರವಿಂದ್ ಅವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುತ್ತಿದ್ದಾರೆ. ಅಂದಹಾಗೆ, ಎಚ್.ಎಸ್.ವಿ ಅವರು ನಟಿಸುವಂತೆ ಮಾಡುತ್ತಿರುವುದು ನಿರ್ದೇಶಕ ರೇಂದ್ರ ಬಾಬು. “ಓ ಗುಲಾಬಿಯೇ’, “ಪಲ್ಲಕ್ಕಿ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ನರೇಂದ್ರ ಬಾಬು, ಈಗ “ಅಮೃತವಾಹಿನಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ರಾಘವೇಂದ್ರ ಪಾಟೀಲರ ಕಥೆಯನ್ನಾಧರಿಸಿ ಈ ಚಿತ್ರ ಮಾಡಲಾಗುತ್ತಿದ್ದು, ನರೇಂದ್ರ ಬಾಬು ಚಿತ್ರಕಥೆ ರಚಿಸುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಡಾ.ಎಚ್.ಎಸ್.ವಿ. ಅವರೇ ಚಿತ್ರಕ್ಕೆ ನಾಲ್ಕು ಹಾಡುಗಳನ್ನು ರಚಿಸಿದ್ದು, ಶಿವಾನಂದ್ ಸಂಭಾಷಣೆ ರಚಿಸಿದ್ದಾರೆ. ಈ ಚಿತ್ರದಲ್ಲಿ ಸಾಹಿತಿಯೋರ್ವನ ಜೀವನಾನುಭವವೇ ಅವನ ಅಂತರಂಗದ ಅಭಿವ್ಯಕ್ತಿಯಾಗಿ ಮಾರ್ಪಟ್ಟಿದೆ.
ಇಲ್ಲಿ ಡಾ.ಎಚ್.ಎಸ್.ವಿ ಅವರು ಕವಿಯ ಪಾತ್ರ ಮಾಡುತ್ತಿದ್ದು, ಇದ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ಕಾಣಿಸುತ್ತಿರುವುದು ತಮ್ಮ ಪಾಲಿನ ರೋಚಕ ಅನುಭವ ಎಂದು ಎಚ್.ಎಸ್.ವಿ ಹೇಳಿಕೊಂಡಿದ್ದಾರೆ. “ಅಮೃತವಾಹಿನಿ’ ಚಿತ್ರದಲ್ಲಿ ಡಾ.ಎಚ್.ಎಸ್.ವಿ ಜೊತೆಗೆ, ಡಾ. ವತ್ಸಲಾ ಮೋಹನ್, ಭಾರ್ಗವಿ ನಾರಾಯಣ್, ಸ್ವಸ್ತಿಕ್ ಶಂಕರ್, ಜಯಪ್ರಕಾಶ್, ಸುಪ್ರಿಯಾ ರಾವ್, ಸಂತೋಷ್ ಕರ್ಕಿ, ಕಡೂರು ಪ್ರಶಾಂತ್ ಮುಂತಾದವರು ನಟಿಸುತ್ತಿದ್ದಾರೆ.
“ಹಸಿರು ರಿಬ್ಬನ್’ ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಉಪಾಸನಾ ಮೋಹನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಗಿರಿಧರ್ ದಿವಾನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರವನ್ನು ಯು.ವಿ. ಪ್ರೊಡಕ್ಷನ್ ಸಂಸ್ಥೆಯಡಿ ಕೆ. ಸಂಪತ್ ಕುಮಾರ್ ಅವರು ನಿರ್ಮಿಸುತ್ತಿದ್ದಾರೆ.