Advertisement

ಸಿದ್ದು ಸವದಿ ವಿರುದ್ದ ಅಸಮಾಧಾನ: ಬಿಜೆಪಿಗೆ ಹಿರಿಯ ಪುರಸಭೆ ಸದಸ್ಯ ರಾಜಿನಾಮೆ

08:19 PM Mar 13, 2022 | Team Udayavani |

ಮಹಾಲಿಂಗಪುರ: ಪಟ್ಟಣದ 13ನೇ ವಾರ್ಡಿನ ಬಿಜೆಪಿ ಸದಸ್ಯ, ಪುರಸಭೆಯ ಮಾಜಿ ಅಧ್ಯಕ್ಷ ಶೇಖರ ಅಂಗಡಿಯವರು ರವಿವಾರ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ.

Advertisement

ಬಿಜೆಪಿ ನಗರ ಘಟಕ ಅಧ್ಯಕ್ಷ ಶ್ರೀಮಂತ ಹಳ್ಳಿ ಅವರಿಗೆ ಮುಂಜಾನೆ ರಾಜಿನಾಮೆ ಪತ್ರ ಸಲ್ಲಿಸಿದ ಬಿಜೆಪಿ ಹಿರಿಯ ಸದಸ್ಯ ಶೇಖರ ಅಂಗಡಿಯವರು ರವಿವಾರ ಸಂಜೆ ಜಿಎಲ್‌ಬಿಸಿ ಅತಿಥಿ ಗೃಹದಲ್ಲಿ ವಾರ್ಡಿನ ಮತದಾರರು, ಕಾರ್ಯಕರ್ತರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ, ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಖಚಿತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನನ್ನ ವಾರ್ಡ ಮತ್ತು ಪಟ್ಟಣದ ಅಭಿವೃದ್ದಿಗಾಗಿ, ಪ್ರಗತಿಪರ ವಿಚಾರಗಳಿಗಾಗಿ ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿಯವರಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದು, ಇದಕ್ಕೆ ಶಾಸಕರು ಸರಿಯಾಗಿ ಸ್ಪಂದಿಸುತ್ತಿಲ್ಲ. ಅಲ್ಲದೇ ಸರಿಯಾದ ವಿವರಣೆಯನ್ನು ನೀಡುತ್ತಿಲ್ಲ. ಇವೆಲ್ಲ ಬೆಳವಣಿಗೆಗಳಿಂದಾಗಿ ಬೇಸತ್ತಿದ್ದೇನೆ. ನಾನು ಪುರಸಭೆಯಲ್ಲಿ ಐದು ಅವಧಿಗೆ ಚುನಾಯಿತನಾಗಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಹಿಂದಿನ ಅವಧಿಯಲ್ಲಿ 8 ತಿಂಗಳು ಅಧ್ಯಕ್ಷನಾಗಿ ಪಟ್ಟಣದ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಅದಕ್ಕಾಗಿ ಮನನೊಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಲಿಂಗ ಶಿವಣಗಿ, ನಾಗಲಿಂಗ ಬಡಿಗೇರ, ಸದಾಶಿವ ಬಡಿಗೇರ, ಶಿವಾನಂದ ಕಂಪುನವರ, ದುಂಡಪ್ಪ ಮಡಿವಾಳರ, ನಾಗೇಶ ಮೇಗಾಡಿ, ಅಬೂಬಕರ ಬೂದಿಹಾಳ, ರಮೇಶ ಬಡಿಗೇರ, ಎಸ್.ಬಿ.ಮೇಣಸಿನಕಾಯಿ, ಪುರಸಭೆ ನಾಮನಿರ್ದೇಶಿತ ಸದಸ್ಯ ತಿಪ್ಪಣ್ಣ ಬಂಡಿವಡ್ಡರ ಪತ್ರಿಕಾಗೋಷ್ಟಿಯಲ್ಲಿ ಇದ್ದರು.

ಪಕ್ಷವು ಸೂಕ್ತ ಕ್ರಮ ಕೈಗೊಳ್ಳುತ್ತದೆ

Advertisement

ಭಾರತೀಯ ಜನತಾ ಪಕ್ಷವು ಕೋಟ್ಯಂತರ ಜನರು ರಕ್ತ, ಬೆವರು ಸುರಿಸಿ ಕಟ್ಟಿದ ಪಕ್ಷವಾಗಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಬಿಜೆಪಿ ಪಕ್ಷವು ಇಂದು ವಿಶ್ವದಲ್ಲೇ ಬಲಿಷ್ಠ ಮತ್ತು ಬಹುದೊಡ್ಡ ರಾಷ್ಟೀಯ ಪಕ್ಷವಾಗಿದೆ. ಪಕ್ಷವು ನಮಗೆ ಅನಿವಾರ್ಯವೇ ಹೊರತು ಪಕ್ಷಕ್ಕೆ ನಾವು ಅನಿವಾರ್ಯವಲ್ಲ. ಆದಾಗ್ಯೂ ಕೆಲವು ಸ್ವಾರ್ಥಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ರಾಜೀನಾಮೆ ನಾಟಕದಂತಹ ಗಿಮಿಕ್‌ಗಳಲ್ಲಿ ತೊಡಗಿರುತ್ತಾರೆ. ಪಕ್ಷದ ಶಿಸ್ತು ಸಮಿತಿಯು ಇದನ್ನೆಲ್ಲ ಗಮನಿಸುತ್ತಿರುತ್ತದೆ. ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಇಂಥವರ ವಿರುದ್ಧ ಪಕ್ಷವು ಸೂಕ್ತಕ್ರಮವನ್ನು ಕೈಗೊಳ್ಳಲಿದೆ ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಶ್ರೀಮಂತ ಹಳ್ಳಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next