Advertisement

ಡಿಸಿಎಂ ವಿರುದ್ಧ ತಿರುಗಿ ಬಿದ್ದ ಹಿರಿಯ ಶಾಸಕರು

06:30 AM Jun 08, 2018 | Team Udayavani |

ಬೆಂಗಳೂರು: ಸಂಪುಟದಲ್ಲಿ ಅವಕಾಶ ತಪ್ಪಿದ ಹಿರಿಯ ಶಾಸಕರು ಉಪ ಮುಖ್ಯಮಂತ್ರಿ ಪರಮೇಶ್ವರ್‌ ವಿರುದ್ಧ ತಿರುಗಿ ಬಿದ್ದಿದ್ದಾರೆ.

Advertisement

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಐದು ವರ್ಷ ಸಚಿವರಾಗಿ ಅಧಿಕಾರ ಅನುಭವಿಸಿದವರು ಹಾಗೂ ಪಕ್ಷ ಮತ್ತು
ಸರ್ಕಾರದ ವಿಷಯ ಬಂದಾಗ ಸಿದ್ದರಾಮಯ್ಯ ಪರವಾಗಿ ಮಾತನಾಡಿದ್ದ ಹಿರಿಯ ನಾಯಕರನ್ನು ಜಾಣತನದಿಂದಲೇ
ಸಂಪುಟದಿಂದ ಹೊರಗಿಟ್ಟು, ಹಿಂದಿನ ಸರ್ಕಾರದ ಅವಧಿಯಲ್ಲಿ ತಮಗಾದ ಅವಮಾನಕ್ಕೆ ಪರಮೇಶ್ವರ್‌ ಪ್ರತಿಕಾರ
ತೀರಿಸಿಕೊಂಡಿದ್ದಾರೆಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಹಿರಿಯ ಶಾಸಕರಾಗಿರುವ ರಾಮಲಿಂಗಾರೆಡ್ಡಿ, ರೋಷನ್‌ ಬೇಗ್‌, ಎಚ್‌.ಕೆ. ಪಾಟೀಲ್‌, ಶಾಮನೂರು ಶಿವಶಂಕರಪ್ಪ,
ಎಂ.ಬಿ. ಪಾಟೀಲ್‌ ಹಾಗೂ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಪರ ಮಾತನಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಸಚಿವ ಸ್ಥಾನ ಕೈ ತಪ್ಪಲು ಉಪ ಮುಖ್ಯಮಂತ್ರಿ ಪರಮೇಶ್ವರ್‌ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಿಂದಿನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಲು ಪರಮೇಶ್ವರ್‌ ಪ್ರಯತ್ನ ನಡೆಸಿದಾಗ ಸರ್ಕಾರದಲ್ಲಿ ಉಪ
ಮುಖ್ಯಮಂತ್ರಿ ಸ್ಥಾನ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಪರವಾಗಿ ಬಲವಾಗಿ ನಿಂತಿದ್ದರು, ಆ ಕಾರಣಕ್ಕಾಗಿ ಈಗ ಅವರನ್ನು ಸಂಪುಟದಿಂದ ದೂರ ಇಡುವಲ್ಲಿ ಪರಮೇಶ್ವರ್‌ ಯಶಸ್ವಿಯಾಗಿದ್ದಾರೆ. ಹಿರಿಯರನ್ನು ಸಂಪುಟದಿಂದ ಕೈ ಬಿಟ್ಟು ಪಕ್ಷದ ಕೆಲಸಕ್ಕೆ ತೊಡಗಿಸಿಕೊಳ್ಳಲಾಗುವುದು ಎಂದು ಪರಮೇಶ್ವರ್‌ ಹೇಳಿದಾಗ ಮೊದಲು ಅವರು ಸಚಿವ ಸ್ಥಾನ ಬಿಡಲಿ ಎಂದು ಎಚ್‌.ಕೆ.ಪಾಟೀಲ್‌ ಹೇಳಿದ್ದರು. ಹೀಗಾಗಿ, ಎಚ್‌. ಕೆ.ಪಾಟೀಲ್‌ ಅವರಿಗೂ ತಪ್ಪಿಸಲಾಗಿದೆ. ಅದೇ ರೀತಿ, ಸಿದ್ದರಾಮಯ್ಯ ಅವರನ್ನು ಬಲವಾಗಿ ಸಮರ್ಥಿಸಿದ್ದ ರಾಮಲಿಂಗಾ ರೆಡ್ಡಿಯವರಿಗೂ ಸಚಿವ ಸ್ಥಾನ ತಪ್ಪಿಸಿದ್ದಾರೆ.

ಚುನಾವಣೆಗೂ ಮೊದಲು ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲು ಪಕ್ಷದ ಕಾರ್ಯಕಾರಿಣಿಯಲ್ಲಿಯೇ ರೋಷನ್‌ ಬೇಗ್‌ ಬಹಿರಂಗವಾಗಿ ವಿರೋಧ ಮಾಡಿದ್ದರು. ದಿನೇಶ್‌ ಗುಂಡೂರಾವ್‌ ಕೂಡ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಚುನಾವಣೆಗೂ ಮೊದಲೇ ಬಹಿರಂಗವಾಗಿಯೇ ಹೇಳಿದ್ದರು.

Advertisement

ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡಿದ್ದ ಪರಮೇಶ್ವರ್‌ ಈ ಬಾರಿ ಜಾಣತನದಿಂದ ಸಿದ್ದರಾಮಯ್ಯ ಆಪ್ತರನ್ನು ಸಂಪುಟದಿಂದ ಹೊರಗಿಡುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

ಇದೀಗ ಹಿರಿಯ ಶಾಸಕರು ಡಾ.ಜಿ.ಪರಮೇಶ್ವರ್‌ ಅವರ ವಿರುದ್ಧ ತಿರುಗಿ ಬಿದ್ದಿದ್ದು ಉಪ ಮುಖ್ಯಮಂತ್ರಿಯಾಗಿರುವ
ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next