ಬೆಂಗಳೂರು: ಹಿರಿಯ ಪತ್ರಕರ್ತ, ಅಕ್ಷರ ಮಾಂತ್ರಿಕ ಎಂದೇ ಹೆಸರಾದ ರವಿ ಬೆಳಗೆರೆ ಅವರು ನ.12ರ ಮಧ್ಯರಾತ್ರಿ ನಿಧನ ಹೊಂದಿದರು.
ತಡರಾತ್ರಿ ಹೃದಯಾಘಾತಕ್ಕೆ ಒಳಗಾದ ಅವರನ್ನು ತಕ್ಷಣ ಆಸ್ಪತ್ರೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಪಾರ್ಥಿವ ಶರೀರವನ್ನು ಇಂದು ಅಂತಿಮ ದರ್ಶನಕ್ಕೆ ಇಡಲಾಗುವುದು.
ಇವರು ಪತ್ನಿಯರಾದ ಲಲಿತಾ, ಯಶೋಮತಿ, ಮಕ್ಕಳಾದ ಚೇತನಾ, ಭಾವನಾ, ಕರ್ಣ ಹಾಗೂ ಹಿಮವಂತ ಸೇರಿ ಅಪಾರ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
1995ರ ಸೆ. 25ರಂದು ‘ಹಾಯ್ ಬೆಂಗಳೂರ್’ ಪತ್ರಿಕೆಯನ್ನು ಆರಂಭಿಸಿದ ಅವರು ತನ್ನ ನೇರ ಬರವಣಿಗೆಯ ಮೂಲಕ ಭಾರಿ ಸಂಚಲನವನ್ನು ಮೂಡಿಸಿದ್ದರು. ‘ಹಿಮಾಗ್ನಿ’ ‘ಹೇಳಿ ಹೋಗು ಕಾರಣ’, ‘ನೀ ಹಿಂಗ ನೋಡಬ್ಯಾಡ ನನ್ನ’, ‘ಮಾಂಡೋವಿ’, ‘ಮಾಟಗಾತಿ’, ‘ಸರ್ಪ ಸಂಬಂಧ’ ‘ಇಂದಿರಾ ಮಗ ಸಂಜಯ’ ಮುಂತಾದ ಪ್ರಸಿದ್ದ ಕಾದಂಬರಿಗಳನ್ನು ಬರೆದಿದ್ದರು. ಯುವ ಓದುಗರನ್ನು ತನ್ನ ಅಕ್ಷರಗಳ ಮೂಲಕ ತನ್ನತ್ತ ಸೆಳೆದಿದ್ದ ರವಿ ಬೆಳಗೆರೆ ಅವರು ರಾಜ್ಯಾದ್ಯಂತ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದರು.