Advertisement

ಪತ್ರಕರ್ತ ರವಿ ಬೆಳಗೆರೆಗೆ ಐಸಿಯುನಲ್ಲಿ ಚಿಕಿತ್ಸೆ

06:00 AM Dec 15, 2017 | Team Udayavani |

ಬೆಂಗಳೂರು: ಸುಪಾರಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹಾಯ್‌ ಬೆಂಗಳೂರು ವಾರ ಪತ್ರಿಕೆಯ ಸಂಪಾದಕ ರವಿಬೆಳಗೆರೆಗೆ ಗುರುವಾರ ಬಿಡುಗಡೆ ಭಾಗ್ಯವಿಲ್ಲ.

Advertisement

ಪ್ರಕರಣ ಸಂಬಂಧ ಬುಧವಾರ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಷರತ್ತು ಬದ್ಧ ಮಧ್ಯಂತರ ಜಾಮೀನು ನೀಡಿದ್ದರೂ ಇದುವರೆಗೂ ಜೈಲಿನ ಅಧಿಕಾರಿಗಳಿಗೆ ನ್ಯಾಯಾಲಯದಿಂದ ಅಧಿಕೃತವಾಗಿ ಮಾಹಿತಿ ರವಾನೆಯಾಗದ ಹಿನ್ನೆಲೆಯಲ್ಲಿ ಜೈಲಿನ ಸಿಬ್ಬಂದಿ ಸುಪರ್ದಿಯಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದೆ.

ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ತೀವ್ರ ಅಸ್ವಸ್ಥಗೊಂಡಿರುವ ರವಿ ಬೆಳಗೆರೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಬೆಳಗ್ಗೆ ರವಿಬೆಳಗೆರೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲಾಗಿದ್ದು, ವೈದ್ಯರಾದ ಡಾ.ಆಶಾ ಮತ್ತು ನಾಗೇಶ್‌ ಚಿಕಿತ್ಸೆ ನೀಡುತ್ತಿದ್ದಾರೆ. ಇದೇ ವೇಳೆ ಇಬ್ಬರು ಪೇದೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಈ ಮಧ್ಯೆ ಪ್ರಕರಣ ಸಂಬಂಧ  ಪತ್ರಕರ್ತ ಸುನಿಲ್‌ ಹೆಗ್ಗರವಳ್ಳಿ ಗುರುವಾರ ಮೆಯೋ ಹಾಲ್‌ನಲ್ಲಿರುವ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಸಿಆರ್‌ಪಿಸಿ 164ರ ಪ್ರಕಾರ  ನ್ಯಾ.ಗೋಪಾಲಕೃಷ್ಣ ಭಟ್‌ ಅವರ ಎದುರು ಹೇಳಿಕೆ ದಾಖಲಿಸಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸುನಿಲ್‌ ಹೆಗ್ಗರವಳ್ಳಿ, ರವಿಬೆಳಗೆರೆ ಮತ್ತು ನಿಮ್ಮ ನಡುವೆ ಎಷ್ಟು ವರ್ಷದ ಪರಿಚಯ ಹಾಗೂ ನಿಮಗೆ ಸುಪಾರಿ ನೀಡಲು ಕಾರಣವೇನು ಎಂಬಂತೆ ಇತರೆ ಪ್ರಮುಖ ಪ್ರಶ್ನೆಗಳನ್ನು ನ್ಯಾಯಾಧೀಶರು ಕೇಳಿದ್ದಾರೆ. ಅದಕ್ಕೆ ಸೂಕ್ತ ಉತ್ತರ ನೀಡಲಾಗಿದೆ ಎಂದಷ್ಟೇ ತಿಳಿಸಿದ್ದಾರೆ.

Advertisement

ರವಿ ಬೆಳಗೆರೆ ವಿರುದ್ಧ ಬಾಡಿ ವಾರಂಟ್‌ ಜಾರಿ
ಸಾಗರ:
ಪತ್ರಕರ್ತ ರವಿ ಬೆಳಗೆರೆ ಅವರಿಗೆ ಶಿವಮೊಗ್ಗ ಜಿಲ್ಲೆಯ ಸಾಗರದಿಂದಲೂ ಸಂಕಷ್ಟ ಎದುರಾಗಿದ್ದು, ಇಲ್ಲಿನ ನ್ಯಾಯಾಲಯ ಅವರ ವಿರುದ್ಧ ಬಾಡಿ ವಾರೆಂಟ್‌ ಜಾರಿಗೊಳಿಸಿದೆ. 2009ರಲ್ಲಿ ಬೆಳಗೆರೆ ತಮ್ಮ ಪತ್ರಿಕೆಯಲ್ಲಿ ಬರೆದ ಲೇಖನವೊಂದಕ್ಕೆ ಸಂಬಂ ಧಿಸಿದಂತೆ ನಗರದ ದಸಂಸ ಲಿಂಗರಾಜ್‌ ಅದೇ ವರ್ಷ ಇಲ್ಲಿನ ಹೆಚ್ಚುವರಿ ಜೆಎಂಎಫ್‌ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಗೆ ಬೆಳಗೆರೆ ಗೈರುಹಾಜರಾಗಿದ್ದರು. ನೊಟೀಸ್‌ ನೀಡಿದ್ದರೂ ಹಾಜರಾಗದ್ದರಿಂದ ಬೆಳಗೆರೆ ವಿರುದ್ಧ ಕ್ರಮಕ್ಕೆ ಅರ್ಜಿದಾರರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ  ನ್ಯಾಯಾಲಯ ಡಿ. 12ರಂದು ಬಾಡಿ ವಾರಂಟ್‌ ಜಾರಿ ಮಾಡಿದೆ.

ಈಗಾಗಲೇ ಪ್ರಕರಣವೊಂದರ ಆರೋಪ ಹೊತ್ತು ಬೆಂಗಳೂರಿನ ಜೈಲಿನಲ್ಲಿರುವ ಬೆಳಗೆರೆಯವರನ್ನು ಸುಪರ್ದಿಗೆ ತೆಗೆದುಕೊಳ್ಳಬಹುದು ಎಂದು ನ್ಯಾಯಾಲಯ ಸ್ಥಳೀಯ ಪೊಲೀಸರಿಗೆ ಆದೇಶಿಸಿತ್ತು. ರವಿ ಬೆಳಗೆರೆ ಪರ ವಕೀಲರು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದು, ಬೆಳಗೆರೆ ಅವರಿಗೆ ಆರೋಗ್ಯ ಸರಿ ಇಲ್ಲದ ಹಿನ್ನೆಲೆಯಲ್ಲಿ ಬಾಡಿ ವಾರಂಟ್‌ನ್ನು ರದ್ದುಗೊಳಿಸಬೇಕು ಎಂದು ವಿನಂತಿಸಿದ್ದಾರೆ.  ಇದರ ವಿಚಾರಣೆ ನಡೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next