Advertisement
ಬಿ.ಸಿ. ರೋಡ್ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಜೂ.6ರಂದು ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಬಹುತೇಕ ಇಲಾಖೆಗಳ ಹಿರಿಯ ಅಧಿಕಾರಿಗಳು ಗೈರಾಗಿ ಕಿರಿಯ ಅಧಿಕಾರಿಗಳು ಪ್ರತಿನಿಧಿಸಿದ ಸಂದರ್ಭದಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
“ನಾವಿಲ್ಲಿ ಸಭೆ ನಡೆಸುವುದು ಕಾಟಾಚಾರಕ್ಕೆ ಅಲ್ಲ’ ಎಂದ ಇಒ ಅವರು, ಪ್ರಗತಿ ಪರಿಶೀಲನೆಯ ಸಂದರ್ಭ ಕೆಳ ಮಟ್ಟದ ಅಧಿಕಾರಿಗಳಿಂದ ಸೂಕ್ತ ಮತ್ತು ಸ್ಪಷ್ಟ ಉತ್ತರ ಸಿಗದಿರುವುದರಿಂದ ಅಸಮಾಧಾನಗೊಂಡರು. ನಿಖರ ಮಾಹಿತಿ, ಲಿಖೀತ ದಾಖಲೆ, ವಿಚಾರದ ಬಗ್ಗೆ ಸಂಪೂರ್ಣ ಅರಿವು ಇಲ್ಲದವರು ಸಭೆಗೆ ಬಂದರೆ ಹಾಜರಿ ಹಾಕಿದಂತೆ ಆಗುತ್ತದೆ ಹೊರತು ಪ್ರಯೋಜನ ಆಗುವುದಿಲ್ಲ ಎಂದರು.ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಎಸ್ಸಿ-ಎಸ್ಟಿ ಸಭೆಗೂ ಹೆಚ್ಚಿನ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಾಗದೆ, ಕೆಳ ಹಂತದ ಅಧಿಕಾರಿಗಳನ್ನು ಕಳುಹಿಸಿದ್ದಾರೆ. ಈ ಸಭೆಯಲ್ಲೂ ಅದೇ ಪುನರಾವರ್ತನೆಗೊಂಡಿದೆ ಎಂದು ಇಒ ಹೇಳಿದರು. “ಇಲ್ಲಸಲ್ಲದ ಸಬೂಬು ಹೇಳಿ ತಾಲೂಕು ಮಟ್ಟದ ಅಧಿಕಾರಿಗಳು ಸಭೆಗಳಿಗೆ ತಪ್ಪಿಸುತ್ತಿರುವುದು ಹವ್ಯಾಸವಾಗಿಬಿಟ್ಟಿದೆ. ನೇರವಾಗಿ ಸಭೆಗೆ ಬರುವ ನಿಮ್ಮಲ್ಲಿ ಇಲಾಖೆಗಳ ಪ್ರಗತಿಯ ಯಾವುದೇ ಮಾಹಿತಿ ಇರುವುದಿಲ್ಲ. ಸಭೆಯಲ್ಲಿ ವ್ಯಕ್ತವಾದ ಪ್ರಶ್ನೆಗಳಿಗೆ ನಿಮ್ಮಿಂದ ಏನು ಉತ್ತರ ದೊರೆಯುತ್ತದೆ’ ಎಂದು ಪ್ರಶ್ನಿಸಿದರು.
Related Articles
Advertisement
ಸಭೆಯಲ್ಲಿ ಕೆಳ ಮಟ್ಟದ ಅಧಿಕಾರಿಯೊಬ್ಬರು ತಮ್ಮ ಇಲಾಖೆಯಲ್ಲಿ ನಡೆಸಿದ ಕಾರ್ಯಕ್ರಮವೊಂದನ್ನು ವಿವರಿಸುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಇಒ ಕಾರ್ಯಕ್ರಮದ ಮಾಹಿತಿ ಇಲ್ಲಿ ಆವಶ್ಯಕತೆ ಇಲ್ಲ. ಇಲಾಖೆಯಲ್ಲಿ ಆದ ಪ್ರಗತಿಯ ಬಗ್ಗೆ ಸಭೆಗೆ ಮಾಹಿತಿ ಕೊಡಿ ಎಂದಾಗ ಪ್ರಗತಿಯ ಬಗ್ಗೆ ಅಧಿಕಾರಿಯಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಇಒ ಇದೇ ಕಾರಣಕ್ಕೆ ಸಭೆಗೆ ನೀವು ಬರಬೇಡಿ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳೇ ಬರಬೇಕು ಎಂದು ಸ್ಪಷ್ಟನೆ ನೀಡಿದರು.
ಸೌಲಭ್ಯ ದೊರೆಯುವಂತೆ ಮಾಡಿ ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಪ್ರತಿಕ್ರಿಯಿಸಿದ ಇಒ ಅವರು, ಅರಣ್ಯ ಇಲಾಖೆಯಿಂದ ಲಭ್ಯವಾಗುವ
ಸೌಲಭ್ಯಗಳನ್ನು ಎಲ್ಲ ವರ್ಗಗಳ ಜನರಿಗೂ ತಲುಪುವಂತೆ ಮಾಡಿ. ವಲಯ ಅರಣ್ಯ ಇಲಾಖೆಯಲ್ಲಿ ಸಾರ್ವಜನಿಕರಿಗಾಗಿ ನೆಡುವುದಕ್ಕೆ ನೀಡಲು ಗಿಡ ಎಷ್ಟಿದೆ, ಅದರ ದಾಖಲೆಗಳೇನು, ಯಾವ ಗಿಡ ಎಷ್ಟು ಲಭ್ಯತೆಯಲ್ಲಿ ದೊರೆಯುತ್ತದೆ. ಎಲ್ಲೆಲ್ಲಿ ಗಿಡ ನೆಡುವುದಕ್ಕೆ ಗುರುತು ಮಾಡಿಕೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಅರಣ್ಯ ಇಲಾಖೆಯನ್ನು ಪ್ರತಿನಿಧಿಸಿದ ಅಧಿಕಾರಿ ಉತ್ತರಿಸಲು ತಡವರಿಸಿದರು. ಇದರಿಂದ ಅಸಮಾಧಾನಗೊಂಡ ಇಒ “ಅಂಕಿ ಅಂಶ ವಿವರಗಳಿಲ್ಲ, ಕೇಳಿದ ಪ್ರಶ್ನೆಗೆ ಅರ್ಹ ಉತ್ತರಗಳಿಲ್ಲ, ಒಟ್ಟಾರೆ ಸಭೆಗೆ ಬರುವುದು. ಸಭೆ ಮುಗಿದ ಅನಂತರ ಇನ್ನೊಂದು ಸಭೆಗೆ ಬರುವಾಗ ನೋಡಿಕೊಂಡರಾಯಿತು ಎಂಬ ಧೋರಣೆಯು ಸರಿಯಾದ ಕ್ರಮವಲ್ಲ ‘ ಎಂದು ಹೇಳಿದರು. ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ಟಾಸ್ ಅಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ ಉಪಸ್ಥಿತರಿದ್ದರು. 34 ಶಂಕಿತ ಡೆಂಗ್ಯೂ ಪ್ರಕರಣ
ಕೇಪು ಮತ್ತು ಪುಣಚ ಗ್ರಾಮಗಳಲ್ಲಿ ತಲಾ ಒಂದೊಂದು ಇಲಿ ಜ್ವರ, ಪುಣಚದಲ್ಲಿ 12 ಡೆಂಗ್ಯೂ ದೃಢೀಕರಣ, 34 ಶಂಕಿತ ಪ್ರಕರಣಗಳು ಪತ್ತೆಯಾಗಿವೆ. ಪುದು ಗ್ರಾಮದಲ್ಲಿ 2, ಬೆಂಜನಪದವಿನಲ್ಲಿ 1 ಮಲೇರಿಯಾ ಪ್ರಕರಣ ಪತ್ತೆಯಾಗಿದೆ. ರೋಗ ನಿಯಂತ್ರಣದ ಬಗ್ಗೆ ಆರೋಗ್ಯ ಕಾರ್ಯಕರ್ತೆಯರಿಂದ ಜಾಗƒತಿ ಮೂಡಿಸಲಾಗುತ್ತಿದೆ. ಭಯಪಡುವ ಆವಶ್ಯಕತೆ ಇಲ್ಲ ಎಂದು ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು ಹೇಳಿದರು.