ಬಾಗಲಕೋಟೆ: ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ಚಟುವಟಿಕೆಯಲ್ಲಿ ತೊಡಗಿದ ಜನ ಸದಾ ಉತ್ಸಾಹಿಗಳಾಗಿ ಯುವಕರಂತೆ ಕಾರ್ಯ ನಿರ್ವಹಿಸುತ್ತಿರುವುದನ್ನು ಗಮನಿಸಿದಾಗ ಉತ್ಸಾಹಕ್ಕೆ ವಯಸ್ಸು ಅಡ್ಡಿಯಾಗದೆಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಆಶ್ರಯದಲ್ಲಿ ಹಿರಿಯ ನಾಗರಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕ್ರೀಡಾ ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಸಾರ, ಉದ್ಯೋಗ ಜಂಜಾಟದಿಂದ ಇತ್ತೀಚಿನ ದಿನಗಳಲ್ಲಿ ಅತಿ ಸಣ್ಣ ವಯಸ್ಸಿನಲ್ಲಿಯೇ ಮುಪ್ಪು ಆವರಿಸಿಕೊಂಡು ನಿರುತ್ಸಾಹಿಗಳಾಗುತ್ತಿರುವುದು ಕಂಡುಬರುತ್ತಿದೆ ಎಂದರು.
ಕ್ರೀಡೆ, ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ಯುವಜನಾಂಗಕ್ಕೆ ಸೀಮಿತವಾಗಿಲ್ಲ. ನಾವು ಪರಿಸರದಲ್ಲಿ ಪ್ರಾಣಿ-ಪಕ್ಷಿಗಳಲ್ಲಿಯೂ ಕೂಡಾ ಮನರಂಜನೆ ಗಮನಿಸಬಹುದಾಗಿದೆ. ಹಿರಿಯರು ಮತ್ತು ವಯೋವೃದ್ಧರು ಕೂಡಾ ಯುವಕರಂತೆ ಉತ್ಸಾಹಿಗಳಾಗಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಿದೆ. ಇದರ ಉಪಯೋಗವನ್ನು ಹಿರಿಯ ಜೀವಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಉತ್ಸಾಹಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲಿ ಹಿರಿಯರಿಗಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದರು.
ಎಂ.ಎಸ್. ಕುಬಕಡ್ಡಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ಬಸವರಾಜ ಶಿರೂರ ಅಧ್ಯಕ್ಷತೆ ವಹಿಸಿದ್ದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ.ವಿ. ಗುತ್ತಿ ಸೇರಿದಂತೆ ಆಯಾ ತಾಲೂಕು ಎಂ.ಆರ್.ಡಬ್ಲೂ, ವಿ.ಆರ್.ಬಡ್ಲೂ ಹಾಗೂ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು. ಗೀತಾ ಪಾಟೀಲ ಸ್ವಾಗತಿಸಿದರು. ಎಸ್.ಎನ್. ಕೋರವಾರ ನಿರೂಪಿಸಿದರು. ಸುರೇಖಾ ಚೆನ್ನಿ ವಂದಿಸಿದರು.