Advertisement

ಎ.ಜಿ. ಕೊಡ್ಗಿ ಪಂಚಭೂತಗಳಲ್ಲಿ ಲೀನ: ಗಣ್ಯರು, ಸಹಸ್ರಾರು ಜನರಿಂದ ನಮನ

01:23 AM Jun 15, 2022 | Team Udayavani |

ಕುಂದಾಪುರ: ಸೋಮವಾರ ನಿಧನ ಹೊಂದಿದ ಮಾಜಿ ಶಾಸಕ, ಮೂರನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ, ಅಮಾಸೆಬೈಲ್‌ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಎ.ಜಿ. ಕೊಡ್ಗಿ (93) ಅವರ ಅಂತ್ಯಕ್ರಿಯೆಯು ಮಂಗಳವಾರ ಮಧ್ಯಾಹ್ನ ಅಮಾಸೆಬೈಲಿನ ಅವರ ಮನೆ ಸಮೀಪದ ತೋಟದಲ್ಲಿ ಬ್ರಾಹ್ಮಣ ಪದ್ಧತಿಯಂತೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.

Advertisement

ಪತ್ನಿ ಸುನಂದಾ, ಪುತ್ರರಾದ ಅಶೋಕ್‌ ಕುಮಾರ್‌ ಕೊಡ್ಗಿ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ, ಆನಂದ ಕೊಡ್ಗಿ, ಕುಮಾರ ಕೊಡ್ಗಿ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ ಕುಮಾರ್‌ ಕೊಡ್ಗಿ, ಪುತ್ರಿ ಶಶಿ, ಸಹೋದರ ಅನಂತಕೃಷ್ಣ ಕೊಡ್ಗಿ ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಅದಕ್ಕೂ ಅಮಾಸೆಬೈಲಿನ ಗೋಕುಲ್‌ ಫ‌ುಡ್‌ಇಂಡಸ್ಟ್ರೀಸ್‌ನ ಆವರಣದಲ್ಲಿ ಕೊಡ್ಗಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಅಮಾಸೆಬೈಲು ಗ್ರಾಮಸ್ಥರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆಗ ಳಿಂದ ಜನ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಅಮಾಸೆಬೈಲು ಪೇಟೆ ಬಂದ್‌
ಮೃತರ ಗೌರವಾರ್ಥ ಅಮಾಸೆ ಬೈಲು ಪೇಟೆ ಮಂಗಳವಾರ ಸಂಪೂರ್ಣ ಬಂದ್‌ ಆಗಿತ್ತು. ಶಾಲೆಗಳಿಗೂ ರಜೆ ನೀಡಲಾಗಿತ್ತು.

ಗೌರವ ರಕ್ಷೆ
ಮಾಜಿ ಶಾಸಕ ಹಾಗೂ 3ನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷರಾಗಿದ್ದ ಎ.ಜಿ ಕೊಡ್ಗಿಯವರಿಗೆ ರಾಜ್ಯ ಸರಕಾರದ ಪರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಗೌರವ ರಕ್ಷೆ ನೀಡಲಾಯಿತು. ಪೊಲೀಸ್‌ ಇಲಾಖೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವತಿಯಿಂದ ಗಾಳಿಯಲ್ಲಿ 3 ಬಾರಿ ಕುಶಾಲು ತೋಪುಗ ಳನ್ನು ಸಿಡಿಸಲಾಯಿತು. ಪಾರ್ಥಿವ ಶರೀರಕ್ಕೆ ಹೊದೆಸಲಾದ ತ್ರಿವರ್ಣ ಧ್ವಜವನ್ನು ಕುಂದಾಪುರದ ಸಹಾಯಕ ಆಯುಕ್ತ ಕೆ. ರಾಜು ಅವರು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು.

Advertisement

ಕೊಡ್ಗಿ ಕೊಡುಗೆ ಅಪಾರ
ಪಂಚಾಯತ್‌ ರಾಜ್‌ ವ್ಯವಸ್ಥೆ ಯನ್ನು ಬಲಪಡಿಸಲು ಅಪಾರ ಕೊಡುಗೆ ನೀಡಿರುವ ಕೊಡ್ಗಿ ಅವರನ್ನು ಕಳೆದುಕೊಂಡು ನಾಡು ಬರಡಾಗಿದೆ. ಸರಕಾರ ಅವರ ಕೊಡುಗೆಯನ್ನು ಗೌರವಿಸಲಿದೆ. ಹಣಕಾಸು ಆಯೋಗದ ಅಧ್ಯಕ್ಷರಾಗಿ ಸ್ಮರಣೀಯ ಕಾರ್ಯ ಮಾಡಿದ್ದಾರೆ. ತೀರ್ಥಹಳ್ಳಿಗೂ ಅವರಿಗೂ ಅವಿನಾ ಭಾವ ಸಂಬಂಧವಿದ್ದು, ನನ್ನ ಮಾರ್ಗ ದರ್ಶಕರಾಗಿದ್ದರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಮರಿಸಿದರು.

ಗಣ್ಯರಿಂದ ಗೌರವ ನಮನ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್‌. ಅಂಗಾರ, ಸಂಸದ ಬಿ.ವೈ. ರಾಘವೇಂದ್ರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ವಿಧಾನ ಪರಿಷತ್‌ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್‌, ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಮಾಜಿ ಸಚಿವರಾದ ವಿನಯ ಕುಮಾರ್‌ ಸೊರಕೆ, ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಡಾ| ಜಿ. ಶಂಕರ್‌, ಉದ್ಯಮಿ ಆನಂದ ಕುಂದರ್‌, ಜಿಲ್ಲಾಧಿಕಾರಿ ಕೂರ್ಮಾರಾವ್‌, ಜಿಲ್ಲಾ ಎಸ್‌ಪಿ ಎನ್‌. ವಿಷ್ಣುವರ್ಧನ, ಉದ್ಯಮಿ ಗುರ್ಮೆ ಸುರೇಶ್‌ ಶೆಟ್ಟಿ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗಡೆ, ಉದಯ ಕುಮಾರ್‌ ಶೆಟ್ಟಿ ಮೊದಲಾದ ಗಣ್ಯರು ಅಂತಿಮ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next