Advertisement

ಯುವ ಕ್ರೀಡಾಪಟುಗಳಿಗೆ ಮಾದರಿಯಾದ ಹಿರಿಯ ಕ್ರೀಡಾಪಟುಗಳು

10:52 AM Apr 15, 2018 | |

ಮಹಾನಗರ: ಭಾರತೀಯ ಮಾಸ್ಟರ್‌ ಆ್ಯತ್ಲೆಟಿಕ್ಸ್‌ ಅನುಮೋದನೆಯೊಂದಿಗೆ ಜಿಲ್ಲಾ ಹಿರಿಯರ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಹಾಗೂ ಕರ್ನಾಟಕ ಮಾಸ್ಟರ್‌ ಆ್ಯತ್ಲೆಟಿಕ್‌ ಅಸೋಸಿಯೇಶನ್‌ ಆಶ್ರಯದಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಮಾಸ್ಟರ್‌ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ ಶನಿವಾರವೂ ಮುಂದುವರಿಯಿತು.

Advertisement

ವಯಸ್ಸಾದರೂ ಉತ್ಸಾಹವೇನೂ ಕಡಿಮೆಯಾಗಿಲ್ಲ ಎಂಬ ರೀತಿಯಲ್ಲಿ ಹಿರಿಯ ಕ್ರೀಡಾಳುಗಳು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.

ಬಿಸಿಲಿನಿಂದ ಆಟದ ಸಮಯ ಬದಲಾವಣೆ
ನಗರದಲ್ಲಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ಆಟದ ಸಮಯಗಳನ್ನು ಬದಲಾವಣೆ ಮಾಡಲಾಗಿದೆ. ದಿನವಿಡೀ ಸ್ಪರ್ಧೆಯ ಬದಲು ಬೆಳಗ್ಗೆ 6.30ರಿಂದ 11.30ರ ವರೆಗೆ ಸಂಜೆ 3.30ರಿಂದ 6.30ರ ವರೆಗೆ ವಿವಿಧ ಸ್ಪರ್ಧೆಗಳು ನಡೆಸಲಾಗುತ್ತಿದೆ. ಈ ಸಮಯದಿಂದ ಬಿಸಿಲಿನ ತಾಪ ಕೊಂಚ ಕಡಿಮೆ ಇರುತ್ತದೆ ಎಂಬುದು ಆಯೋಜಕರ ಯೋಚನೆ.

ಮಂಗಳೂರು ಶೈಲಿ ಊಟ
ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ, ಸಂಜೆ ಚಹಾ ವ್ಯವಸ್ಥೆ ಇದ್ದು, ಮಂಗಳೂರು ಶೈಲಿ ಊಟ ನೀಡಲಾಗುತ್ತದೆ. ನಗರದ ಕ್ಯಾಟರಿಂಗ್‌ ಸಂಸ್ಥೆಯ ಮೂಲಕ ಸ್ಪರ್ಧಿಗಳಿಗೆ ಊಟ ನೀಡಲಾಗುತ್ತದೆ. ಹಾಕಿ ಮೈದಾನದ ಪಕ್ಕದಲ್ಲಿ ನಾಲ್ಕು ಕಡೆ ಕೌಂಟರ್‌ ನಿರ್ಮಿಸಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಇಡ್ಲಿ ಸಾಂಬಾರು ಸೇರಿದಂತೆ ಬೇರೆ ಬೇರೆ ತಿಂಡಿಗಳು, ಮಧ್ಯಾಹ್ನ ಬೆಳ್ತಿಗೆ ಅಕ್ಕಿ ಅನ್ನ ಸಾರು, ಚಾಪತಿ, ಗಸಿ ಹೊರ ರಾಜ್ಯದ ಆ್ಯತ್ಲೆಟಿಕ್ಸ್‌ಗಳಿಂದಲೂ ಮೆಚ್ಚುಗೆಗೆ ಪಾತ್ರವಾಯಿತು.

100ಕ್ಕೂ ಅಧಿಕ ತೀರ್ಪುಗಾರರು
ಹಿರಿಯರ ಕ್ರೀಡೆಯ ತೀರ್ಪುಗಳನ್ನು ಯುವ ತೀರ್ಪುಗಾರರು ನೀಡುವುದು ವಿಶೇಷವಾಗಿತ್ತು. ಮಂಗಳೂರು ವಿಶ್ವವಿದ್ಯಾ ನಿಲಯ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ 40 ಮಂದಿ ತೀರ್ಪುಗಾರರಿದ್ದರೆ, ಇನ್ನುಳಿಂದಂತೆ ವಿವಿಧ ರಾಜ್ಯಗಳ 100ಕ್ಕೂ ಅಧಿಕ ಯುವ ತೀರ್ಪುಗಾರರು ತೀರ್ಪು ನೀಡುತ್ತಿದ್ದರು. 

Advertisement

ಇಂದು ಸಮಾರೋಪ
38ನೇ ರಾಷ್ಟ್ರೀಯ ಮಾಸ್ಟರ್‌ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ನ ಸಮಾರೋಪ ಎ. 15ರಂದು ನಡೆಯಲಿದೆ.

85ರ ನಿವೃತ್ತ ಯೋಧನಿಗೆ ಇನ್ನೂ ಹರೆಯದ ಸ್ಫೂರ್ತಿ
21 ವರ್ಷಗಳ ಕಾಲ ವಾಯುಸೇನೆಯಲ್ಲಿ ದುಡಿದು ನಿವೃತ್ತಿ ಹೊಂದಿರುವ ಛತ್ತೀಸ್‌ಗಡ್‌ನ‌ ಜೋಗಿಂಧರ್‌ ಸಿಂಗ್‌ ಅವರು 85 ವರ್ಷ ವಿಭಾಗದ ಜಾವಲಿನ್‌, ಶಾಟ್‌ಪುಟ್‌, ಡಿಸ್ಕಸ್‌ ತ್ರೋನಲ್ಲಿ ಭಾಗವಹಿಸಿದ್ದಾರೆ. ಶಾಟ್‌ಪುಟ್‌ನಲ್ಲಿ ಬೆಳ್ಳಿ ಪದಕ ಪಡೆದ ಸಿಂಗ್‌ ಕರಾವಳಿ ಜನರಿಗೆ ಹಾಗೂ ತಿಂಡಿಗೆ ಮನಸೋತಿದ್ದೇನೆ ಎನ್ನುತ್ತಾರೆ. ಇದೇ ವೇಳೆ ಸುದಿನಕ್ಕೆ ಪ್ರತಿಕ್ರಿಯೆ ನೀಡಿದ ಸಿಂಗ್‌ ಅವರು, ‘ನನಗೆ ಸರಕಾರದ ವತಿ ಯಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಆದರೆ ನನ್ನ ಸ್ವಂತ ಖರ್ಚಿನಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತೇನೆ. ಯಾಕೆಂದರೆ ನನ್ನ ಖುಷಿ ಹಾಗೂ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವ ಉದ್ದೇಶ ನನ್ನದು’ ಎಂದು ತಿಳಿಸಿದ್ದಾರೆ.

ಕರಾವಳಿಗೆ ಬಂದ ಶ್ರೀಲಂಕಾ ಕ್ರೀಡಾಪಟು
ಸಾಧಿಸಬೇಕು ಎನ್ನುವ ಛಲ ಇದ್ದರೆ ತಲುಪಬೇಕಾದ ದಾರಿ ತಲುಪುತ್ತೇವೆ ಎನ್ನುವುದಕ್ಕೆ ಶ್ರೀಲಂಕಾದ ಕ್ರೀಡಾಪಟು ಶ್ರೀಲಾಲ್‌ ಅಲಗೊನ್‌ ಸಾಕ್ಷಿ. 100 ಮೀ. 200 ಮೀ. 400 ಮೀ. ಓಟದಲ್ಲಿ ಸತತ ಮೂರು ಚಿನ್ನಗಳಿಸಿದ ಶ್ರೀಲಾಲ್‌ಗೆ ಕರಾವಳಿಯ ಜನರೆಂದರೆ ಅಚ್ಚುಮೆಚ್ಚು. ಇಲ್ಲಿನ ಜನ ತುಂಬಾ ಪ್ರೋತ್ಸಾಹ ನೀಡು ತ್ತಾರೆ. ಅವರ ಮುಖದಲ್ಲಿ ಸದಾ ನಗು ಇರುತ್ತದೆ ಅದನ್ನು ನೋಡಿದರೆ ಯಾರಿಗೂ ಸಂತೋಷವಾಗುತ್ತದೆ. ಮುಂದೆ ಇಲ್ಲಿ ನಡೆಯುವ ಯಾವುದೇ ಕ್ರೀಡೆಗಳನ್ನು ನಾನು ಮಿಸ್‌ ಮಾಡಿಕೊಳ್ಳುವುದಿಲ್ಲ ಎನ್ನುತ್ತಾರೆ. 

ಪ್ರೋತ್ಸಾಹವೇ ಬಹುಮಾನ 
ನಾವು ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಷ್ಟೇ ಖುಷಿ ಕ್ರೀಡಾಪ್ರೇಮಿಗಳು ಪ್ರೋತ್ಸಾಹ ನೀಡಿದಾಗ ಸಿಗುತ್ತದೆ ಎಂದು ಹೇಳುತ್ತಾರೆ ದಾವಣಗೆರೆಯ 64 ವರ್ಷದ ಲಕ್ಷ್ಮಣ್‌ ರಾವ್‌ ಸಲಂಕೆ. 

Advertisement

Udayavani is now on Telegram. Click here to join our channel and stay updated with the latest news.

Next