Advertisement

ನುಡಿನಮನ: ಸಾಂಸ್ಕೃತಿಕ ಮಾಂತ್ರಿಕ ಆಚಾರ್ಯ

11:41 PM Dec 07, 2020 | mahesh |

ಸ್ವಾತಂತ್ರ್ಯಪೂರ್ವ ಮತ್ತು ಉತ್ತರದ ಸಾಂಸ್ಕೃತಿಕ ಲೋಕದ ಸಾಕ್ಷೀಭಾವದಂತಿದ್ದ ಭಾವಜೀವಿ ಪ್ರೊ| ಉದ್ಯಾವರ ಮಾಧವ ಆಚಾರ್ಯ ಅಗಲಿದ್ದಾರೆ. 1941ರಲ್ಲಿ ಜನಿಸಿದ್ದ ಆಚಾರ್ಯರು ಈ ಶತಮಾನದ ಆಧುನಿಕ ಮಜಲುಗಳನ್ನು ಕಂಡೂ ಹಳೆಯ ತಲೆ ಮಾರಿನ ಜೀವನಶೈಲಿ, ಸಂಸ್ಕೃತಿಯನ್ನು ಬಹುವಾಗಿ ಪ್ರೀತಿಸಿದವರು. ಆಚಾರ್ಯರು ಪ್ರಬುದ್ಧತೆಗೆ ತಲುಪಿ ಆಧುನಿಕ ವೆಂದು ಕರೆಯಲ್ಪಡುವ ವೈಚಾರಿಕತೆ ಯನ್ನು ಅರ್ಥೈಸಿಕೊಂಡಿದ್ದರೂ ಕೆಲವೊಮ್ಮೆ ಬಿತ್ತರಿಸುತ್ತಿದ್ದರೂ, ಪ್ರಾಕ್ತನ ಜೀವನಪ್ರೀತಿಯನ್ನು ಹೃದಯಂಗಮವಾಗಿ ತೋರುತ್ತಿ ದ್ದರು ಎಂದರೆ ತಪ್ಪಲ್ಲ.

Advertisement

ಸಾಹಿತ್ಯ, ಸಂಸ್ಕೃತಿ ಪ್ರೇಮ
1970-80ರ ದಶಕಗಳೆಂದರೆ ಕೇವಲ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮಾತ್ರವಲ್ಲ, ನಾಡಿನ ಎಲ್ಲ ಕಾಲೇಜುಗಳೂ ಮಾಧವಾಚಾರ್ಯರಂಥ ಕೆಲವು ಸಾಹಿತ್ಯ, ಸಂಸ್ಕೃತಿಪ್ರೇಮಿಗಳಿಂದ ಕಂಗೊಳಿಸುತ್ತಿತ್ತು. ಇಂಥವರು ಜೀವನ ನಿರ್ವಹಣೆಗೆ ಆರಿಸಿ ಕೊಂಡ ಪಾಠ ಯಾವುದೇ ಇರಲಿ ಅವರಲ್ಲಿ ಒಬ್ಬ ಕಲಾರಸಿಕ ಹುದುಗಿಕೊಳ್ಳುತ್ತಿದ್ದ. ಆಚಾರ್ಯರು ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರೂ ನಿಜಜೀವನದಲ್ಲಿ “ಅರ್ಥಶಾಸ್ತ್ರಿ’ ಗಳಾಗಿರದೆ, “ಕಲಾಶಾಸ್ತ್ರಿ”ಗಳಾಗಿದ್ದರು.  ಜಯಂತಿಯವರ ತಾಯಿಪ್ರೀತಿ ಭಾವಜೀವಿಗಳು ಎದುರಿಸುವ ಸಮಸ್ಯೆಗಳನ್ನು ಮಾಧವ ಆಚಾರ್ಯರೂ ಎದುರಿಸಿದ್ದರು. ಒಮ್ಮೆ ಭಾವೋದ್ವೇಗಕ್ಕೆ ಒಳಗಾದ ಆಚಾರ್ಯರು ರಾಜೀನಾಮೆ ಸಲ್ಲಿಸಿದರು. ಕೂಡಲೇ ವಿದ್ಯಾರ್ಥಿಗಳು ಮುಷ್ಕರ ಹೂಡಿ ತಮ್ಮ ಆಚಾರ್ಯರ ರಾಜೀನಾಮೆಯನ್ನು ಹಿಂದೆಗೆಯುವಂತೆ ಮಾಡಿದರು. ಇದಕ್ಕೆ ಕಾರಣ ಅವರು ಹೆಣ್ಣು ಮಕ್ಕಳಾಗಲೀ, ಗಂಡು ಮಕ್ಕಳಾಗಲೀ ಎಲ್ಲರನ್ನೂ ಸಾಂಸ್ಕೃತಿಕ ಲೋಕದಲ್ಲಿ ತೊಡಗಿಸುವಂತೆ ಮಾಡುತ್ತಿದ್ದುದು. ಆಚಾರ್ಯರಿಗಿಂತ ಅವರ ಪತ್ನಿ ಜಯಂತಿಯವರು ನೃತ್ಯರೂಪ ಗಳಲ್ಲಿ ಪಾತ್ರ ವಹಿಸುತ್ತಿದ್ದ ಹೆಣ್ಣು ಮಕ್ಕಳಿಗೆ ತೋರಿಸುತ್ತಿದ್ದ ತಾಯಿಪ್ರೀತಿ ಅದ್ಭುತ. ರಾತ್ರಿ ಮಕ್ಕಳನ್ನು ಮನೆಗೆ ಬಿಟ್ಟು ಬರುವುದು, ತಮ್ಮ ಮನೆಯಲ್ಲಿಯೇ ಉಳಿಸಿಕೊಂಡು ಅವರಿಗೆ ಊಟೋ ಪಚಾರ ನೀಡುವುದನ್ನು ಅನುಭವಿಸಿದ ಯಾರಿಗೆ ತಾನೆ ಹೃದ ಯಸ್ಪರ್ಶಿಯಾಗುವುದಿಲ್ಲ ಎಂದು ಪ್ರಶ್ನಿಸು ತ್ತಾರೆ ಕಣ್ಣಾರೆ ಕಂಡ ಸಹೋದ್ಯೋಗಿ ಡಾ|ಎ.ಪಿ.ಭಟ್‌.

ಗೀತೆಯ “ವಿಶ್ವರೂಪ’ ದರ್ಶನ
ನೃತ್ಯರೂಪಕಗಳಲ್ಲಿ ಎದ್ದು ಕಾಣುವಂಥದ್ದು ಭಗವ ದ್ಗೀತೆ, ಅದು “ವಿಶ್ವರೂಪ’ವಲ್ಲವೆ? 1993ರ ಡಿಸೆಂಬರ್‌ 3ರಂದು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಪರ್ಯಾಯದಲ್ಲಿ ಗೀತಾಮಂದಿರವನ್ನು ನೇಪಾಲದ ದೊರೆ ಬೀರೇಂದ್ರ ಉದ್ಘಾಟಿಸಿದಾಗ ಮಾಧವ ಆಚಾರ್ಯರು ವಿದ್ವಾಂಸ ಡಾ|ಬನ್ನಂಜೆ ಗೋವಿಂದಾಚಾರ್ಯರ ಗೀತೆಯ ಕನ್ನಡ ಅನುವಾದ ಕೃತಿಯನ್ನು ಆಧರಿಸಿದ ನೃತ್ಯರೂಪಕ ಪ್ರದರ್ಶಿಸಿದ್ದನ್ನು ಇಂದಿಗೂ ನೆನಪಿಸಿಕೊಳ್ಳುವವರಿದ್ದಾರೆ. ಗೀತಾ ಮಂದಿ ರದ ಮೆಟ್ಟಿಲುಗಳನ್ನೇ ವೇದಿಕೆಯಾಗಿ ಮಾರ್ಪಡಿಸಿ ನೃತ್ಯರೂಪಕವನ್ನು ನಿರ್ದೇಶಿಸಲಾಯಿತು. ಪ್ರೊ| ಎಂ. ಎಲ್‌. ಸಾಮಗ, ಭಾಸ್ಕರಾನಂದಕುಮಾರ್‌, ಬನ್ನಂಜೆ ಸಂಜೀವ ಸುವರ್ಣ, ಮಧೂರು ಬಾಲಸುಬ್ರಹ್ಮಣ್ಯಂ, ಚಂದ್ರಶೇಖರ ಕೆದ್ಲಾಯ, ಡಾ|ಶ್ರೀಕಾಂತ ಸಿದ್ಧಾಪುರ ಮೊದಲಾದ 80 ಕಲಾವಿದರನ್ನು ಸೇರಿಸಿಕೊಂಡು ಅರ್ಜುನನಿಗೆ ಶ್ರೀಕೃಷ್ಣ ಬೋಧಿಸಿದ ಗೀತೆಯನ್ನು ರೂಪಕವಾಗಿ ತೋರಿಸಿದರು.

ಧಾರಾವಾಹಿ ನಟನೆ
1990ರಲ್ಲಿ ಗಿರೀಶ್‌ ಕಾಸರವಳ್ಳಿಯವರ ನಿರ್ಮಾಪಕತ್ವದಲ್ಲಿ ಸದಾನಂದ ಸುವರ್ಣರು ನಿರ್ದೇಶಿಸಿದ “ಗುಡ್ಡದ ಭೂತ’ವನ್ನು ದೂರದರ್ಶನ ಟಿವಿ ಧಾರಾವಾಹಿಯಾಗಿ ಬಿತ್ತರಿಸಿದಾಗ ಅದರಲ್ಲಿ ಆಚಾರ್ಯರು ಬ್ಯಾಂಕ್‌ ಉದ್ಯೋಗಿ ಗಿರಿಯಪ್ಪಣ್ಣನ ಪಾತ್ರದಲ್ಲಿ ನಟಿಸಿದ್ದರು.

ಚಿಂತಕರೂ ಆಗಿದ್ದರು
ಆಚಾರ್ಯರು ಕೇವಲ ಕಲಾರಸಿಕರಾಗಿರದೆ ಚಿಂತ ಕರೂ ಆಗಿದ್ದರು. ಯಕ್ಷಗಾನ ಅರ್ಥಗಾರಿಕೆಗೆ ಶ್ರುತಿ ಬೇಕೋ? ಬೇಡವೋ? ಎಂದು ಚರ್ಚೆ ಹುಟ್ಟಿದಾಗ ಅರ್ಥಧಾರಿಗಳನ್ನು ಮನೆಗೆ ಕರೆಸಿ ಚರ್ಚಿಸಿದ್ದರು ಎಂಬುದನ್ನು ಕಲಾವಿದರೂ ಆದ ಡಾ|ಶ್ರೀಕಾಂತ ಸಿದ್ಧಾಪುರ ನೆನಪಿಸಿಕೊಳ್ಳುತ್ತಾರೆ.

Advertisement

ಸಾಧಕರು ಇಹಲೋಕ ತ್ಯಜಿಸಿದಾಗ ಈ ತೆರನಾಗಿ ನೆನಪಿಸಿಕೊಳ್ಳುವ ಪರಿಪಾಠ ಬೆಳೆದಿದೆ. ಆಚಾರ್ಯ ರಜನೀಶ್‌ ಎಲ್ಲ ಮಹಾಪುರುಷರನ್ನೂ ಮಹಾತ್ಮರು ಎಂದು ಹೇಳಿ ನಾವು ನಮ್ಮಷ್ಟಕ್ಕಿದ್ದು ಕೈತೊಳೆದುಕೊಳ್ಳುವುದನ್ನು ವಿರೋಧಿಸುತ್ತಾರೆ. ಇದರ ಬದಲು ಪ್ರತಿಯೊಬ್ಬರಿಗೂ ಅಂತಹ ಸುವರ್ಣಾವಕಾಶವಿದೆ, ನಾವೂ ಹಾಗೆಯೇ ಆಗಬೇಕು. ಅದಕ್ಕಾಗಿ ನಾವು ನಮ್ಮೊಳಗಿನ ಕಣ್ಣು ತೆರೆದುಕೊಳ್ಳಬೇಕು ಎನ್ನುತ್ತಾರೆ.

ಕಥೆಗಾರರು, ರಂಗಕಲಾವಿದರು
ಆಚಾರ್ಯರು “ರಾಧೆ ಎಂಬ ಗಾಥೆ’ ಎಂಬ ಕಾವ್ಯವನ್ನು ರಚಿಸಿದ್ದರು. ಅವರ ಕಥೆ “ಬಾಗಿದ ಮರ’ಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದ್ದರೆ, “ಬಾಗ ದೊಡ್ಡಮ್ಮನ ಕಥೆ’ ಪದವಿ ಕನ್ನಡ ಭಾಷಾ ವಿಷಯಕ್ಕೆ ಪಠ್ಯಕ್ರಮವಾಯಿತು. “ಬೆಳಕಿನೆಡೆಗೆ’, “ಹಾದಿ’, “ನೀಡು ಪಾತೇಯವನು’ ಇತರ ಕಥೆಗಳು. “ರಂಗಪ್ರಬಂಧ’, “ನೃತ್ಯ ಪ್ರಬಂಧ’, “ಯಕ್ಷಪ್ರಬಂಧ’ ಇವು ಪ್ರಬಂಧ ತ್ರಯಗಳು. “ಇದ್ದಕ್ಕಿದ್ದಂತೆ ನಾಟಕ’ ನಾಟ ಕವನ್ನು ಬರೆದರೆ, ಆಕಾಶವಾಣಿಗಾಗಿ ಬರೆದ ನಾಟಕ “ರಾಣಿ ಅಬ್ಬಕ್ಕ’. ಪು.ತಿ. ನರಸಿಂಹಾಚಾರ್ಯರ “ಗೋಕುಲ ನಿರ್ಗಮನ’, “ಅಹಲ್ಯೆ’, “ಶ್ರೀಹರಿಚರಿತೆ’, ರಾಘವಾಂಕನ “ಸತ್ಯಹರಿಶ್ಚಂದ್ರ’, “ನಳದಮಯಂತಿ’ ನೃತ್ಯ ರೂಪಕಗಳಿಗೆ ನಿರ್ದೇಶನವಿತ್ತರು. ಇದಲ್ಲದೆ ಭಸ್ಮಾಸುರ, ಪಾಂಚಾಲಿ, ಗಾಂಧಾರಿ, ಅಂಬೆ, ಸೀತೆಯ ಸ್ವಗತ, ಜ್ವಾಲೆ ಇತ್ಯಾದಿ ಹತ್ತಾರು ನೃತ್ಯರೂಪಕಗಳಿಗೆ ನಿರ್ದೇಶನ ನೀಡಿದರು. ಯಕ್ಷಗಾನ ಆಧರಿಸಿಯೂ ರೂಪಕಗಳು ಹೊರಹೊಮ್ಮುತ್ತಿದ್ದವು. ಇವರಿಂದ ಪ್ರೇರಿತರಾದ ಪುತ್ರಿ ಬ್ರಾಮರಿಯವರೂ ಅನೇಕ ಪ್ರಯೋಗಗಳನ್ನು ಪ್ರದರ್ಶಿಸಿದ್ದರು.

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next