Advertisement

ನಾಡು, ಗಡಿಯನ್ನೂ ಮೀರಿ ನಿಂತ ಬಿ.ಕೆ.ಎಸ್‌.ವರ್ಮಾ

09:31 PM Feb 06, 2023 | Team Udayavani |

ಬೆಂಗಳೂರು: ಚಿತ್ರಕಲಾ ಲೋಕದಲ್ಲಿ “ಆಧುನಿಕ ರವಿಮರ್ಮ’ ಎಂದೇ ಖ್ಯಾತಿ ಪಡೆದಿರುವ ಬಿ.ಕೆ.ಎಸ್‌.ವರ್ಮಾ ಅವರ ವರ್ಣ ಚಿತ್ರಗಳು ನಾಡು, ಗಡಿಯನ್ನೂ ಮೀರಿ ವಿಶ್ವಖ್ಯಾತಿ ಪಡೆದಿವೆ.

Advertisement

ವರ್ಮಾ ಅವರ ಕಲಾಸಿರಿವಂತಿಕೆಯಲ್ಲಿ ಜೀವ ತಳೆದಿರುವ ರಾಘವೇಂದ್ರ ಸ್ವಾಮಿಗಳ ಬೃಹತ್‌ ವರ್ಣಚಿತ್ರಗಳಿಗೆ ಮನಸೋಲದವರೇ ಇಲ್ಲ. ಸಿನಿರಂಗದ ಹಲವು ಹಿರಿಯ ನಟ-ನಟಿಯರ ಮನೆಗಳಲ್ಲಿ ವರ್ಮಾ ಅವರ ಕಲಾಸಿರಿಯಲ್ಲಿ ಅರಳಿರುವ ರಾಘವೇಂದ್ರ ಸ್ವಾಮಿಗಳ ಚಿತ್ರಗಳಿವೆ.

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರಿಗೆ ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ (ಬಿ.ಕೆ.ಎಸ್‌ ವರ್ಮಾ )ಅವರ ಚಿತ್ರಗಳೆಂದರೆ ಪಂಚಪ್ರಾಣ.

ಅದರಲ್ಲೂ ಅವರ ಕೈಯಲ್ಲಿ ಕಲಾ ಜೀವಂತಿಕೆ ಪಡೆದಿರುವ ಶ್ರೀರಾಘವೇಂದ್ರ ಸ್ವಾಮಿಗಳ ಬೃಹತ್‌ ವರ್ಣಚಿತ್ರ ಎಂದರೆ ಮತ್ತಷ್ಟು ಅಕ್ಕರೆ. ಹೀಗಾಗಿ, ರಜನಿಕಾಂತ್‌ ಅವರು ರಾಘವೇಂದ್ರ ಸ್ವಾಮಿಗಳ ಬೃಹತ್‌ ವರ್ಣಚಿತ್ರವನ್ನು ಇವರಿಂದಲೇ ಕೇಳಿ ಬರೆಸಿಕೊಂಡಿದ್ದರು ಎನ್ನುತ್ತಾರೆ ವರ್ಮಾ ಅವರ ಒಡನಾಡಿ ಮತ್ತು ಹೆಸರಾಂತ ಮರಳು ಕಲಾಕೃತಿ ಕಲಾವಿದ ರಾಘವೇಂದ್ರ ಹೆಗಡೆ.

ರಜನಿಕಾಂತ್‌ ಅವರಂತೆಯೇ ತೆಲುಗಿನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಕೂಡ ದೈವಭಕ್ತರಾಗಿದ್ದು, ವರ್ಮಾ ಅವರಿಂದ ತಿರುಪತಿ ವೆಂಕಟೇಶ್ವರನ ಬೃಹತ್‌ ವರ್ಣಚಿತ್ರ ಬರೆಯಿಸಿಕೊಂಡಿದ್ದಾರೆ. ವರ್ಮಾ ಅವರ ಕಲಾಕೃತಿಗೆ ವಾದ್ಯ ಮೇಳದ ಮೂಲಕ ಸ್ವಾಗತವನ್ನೂ ನೀಡಿದ್ದರು ಎಂಬುದು ವಿಶೇಷ.

Advertisement

ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾಡಿಕೊಟ್ಟ ತಾಯಿ ಭುವನೇಶ್ವರಿ ಕಲಾಕೃತಿ ಈಗಲೂ ಜನಮನ್ನಣೆ ಗಳಿಸಿದೆ. 2 ನಿಮಿಷದಲ್ಲಿ ಚಿತ್ರಗಳನ್ನು ಬರೆಯಬಲ್ಲ ಅತಿವೇಗದ ಕಲಾವಿದ ಕೂಡ ಹೌದು. ಹಲವು ದಶಕಗಳ ಹಿಂದೆ ವರ್ಮಾ ಅವರು ವೇಗದ ಚಿತ್ರ ಬಿಡಿಸುವುದಕ್ಕೆ ಖ್ಯಾತಿ ಪಡೆದಿದ್ದರು ಎನ್ನುತ್ತಾರೆ ಹಿರಿಯ ಕಲಾವಿದ ಮತ್ತು ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ.

ನೃತ್ಯಗಾನ ಕುಂಚದಲ್ಲಿ ಕೂಡ ವರ್ಮಾ ಸಿದ್ಧಹಸ್ತರು. ಸದಾ ಹೊಸತನ್ನು ಬಯಸುತ್ತಿದ್ದ ಅವರು ಶತಾವಧಾನಿ ಆರ್‌.ಗಣೇಶ್‌ ಅವರೊಂದಿಗೆ ಸೇರಿ ಕಾವ್ಯ-ಚಿತ್ರಗಳನ್ನು ಬಿಡಿಸಿ ಕಲಾಲೋಕದಲ್ಲಿ ಮತ್ತೊಂದು ಯಶೋಗಾಥೆ ಬರೆದರು.

ರಾಮಾಂಜನೇಯ ಗುಡ್ಡದ ಹಿಂದಿನ ಕಲ್ಪನಾಶಕ್ತಿ: ಬೆಂಗಳೂರಿನ ಹನುಮಂತನಗರದ ರಾಮಾಂಜನೇಯ ಗುಡ್ಡದ ಸೃಷ್ಟಿಯ ಹಿಂದೆ ವರ್ಮಾ ಅವರ ಕಲ್ಪನಾಶಕ್ತಿಯಿದೆ. ಪ್ರಕೃತಿ ಆರಾಧಕರಾಗಿದ್ದ ಅವರು ತಮ್ಮ ಕುಂಚದ ಮೂಲಕ ಮರಗಳಿಗೆ ದೇವತೆ ರೂಪ ನೀಡಿದರು. ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಮಲೆನಾಡು ಇವರ ಪ್ರೀತಿಯ ಸ್ಥಳಗಳಾಗಿದ್ದವು. ಬಸವನಗುಡಿ ದೊಡ್ಡಗಣಪತಿ ದೇವಸ್ಥಾನ ವರ್ಮಾ ಅವರಿಗೆ ಬಲು ಇಷ್ಟದ ಸ್ಥಳ.

ಕಲಾನಿರ್ದೇಶಕರಾಗಿ ಕೂಡ ಸಿನಿರಂಗದಲ್ಲಿ ಛಾಪು ಮೂಡಿಸಿದ್ದರು. 1967ರಲ್ಲಿ ಬಾಲಿವುಡ್‌ನ‌ಲ್ಲಿ ತೆರೆಕಂಡ “ಆದ್ಮಿ” ಸಿನಿಮಾಕ್ಕೆ ಸಹಾಯಕ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ವಿಷ್ಣುವರ್ಧನ್‌ ಅಭಿನಯದ ಬಂಗಾರದ ಜಿಂಕೆ, ನಿನಗಾಗಿ ನಾನು, ರಾಜೇಶ್ವರಿ ಮತ್ತು ಚದುರಿದ ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಹೆಸರು ಬದಲಿಸಿಕೊಂಡರು: ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ (ಬಿ.ಕೆ.ಎಸ್‌ ವರ್ಮಾ )ಅವರು ಮೈಸೂರಿನ ಜಗನ್ಮೋಹನ ಅರಮನೆಗೆ ತೆರಳಿದ್ದಾಗ ರಾಜಾ ರವಿವರ್ಮ ಅವರ ಚಿತ್ರಕಲೆಯನ್ನು ನೋಡಿ ಪ್ರೇರಿತರಾಗಿ ತಮ್ಮ ಮೂಲ ಹೆಸರಾದ ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ್‌ ಜತೆಗೆ ವರ್ಮಾ ಎಂಬ ಹೆಸರನ್ನೂ ಸೇರಿಸಿಕೊಂಡರು. ನಂತರ ಅವರ ಕಲಾ ಜಗತ್ತಿನ ದಿಕ್ಕೇ ಬದಲಾಯಿತು ಎನ್ನುತ್ತಾರೆ ಅವರ ಒಡನಾಡಿಗಳು.

ಕಲೆಯಲ್ಲಿ ಪ್ರಕೃತಿ ಮೂಡಿಸಿದ ಕಲಾವಿದ
ಅತ್ತಿಬೆಲೆ ಬಳಿಯ ಕರ್ನೂರ್‌ನಲ್ಲಿ ಡಾ.ಜಯಲಕ್ಷ್ಮಮ್ಮ ಮತ್ತು ಪಂಡಿತ್‌ ಕೃಷ್ಣಾಚಾರ್‌ ಅವರು ಪುತ್ರರಾಗಿ 1949 ಫೆ.6ರಂದು ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ (ಬಿ.ಕೆ.ಎಸ್‌.ವರ್ಮಾ) ಜನಿಸಿದರು.

ಚಿಕ್ಕವಯಸ್ಸಿನಲ್ಲೇ ಚಿತ್ರಕಲೆಯ ಬಗ್ಗೆ ಆಸಕ್ತಿ ಮೊಳೆತ ಹಿನ್ನೆಲೆಯಲ್ಲಿ ಕಲಾಲೋಕದತ್ತ ಮುಖ ಮಾಡಿದರು. ಎ.ಎನ್‌.ಸುಬ್ಬರಾವ್‌ ಕಲಾಮಂದಿರದಲ್ಲಿ ಚಿತ್ರಕಲಾಭ್ಯಾಸ ಮಾಡಿದರು. ತಾಯಿ ಭುವನೇಶ್ವರಿ, ರಾಘವೇಂದ್ರ ಸ್ವಾಮಿ, ಗಣಪತಿ ಚಿತ್ರಗಳ ಮೂಲಕ ದೇಶ ವಿದೇಶಗಳಲ್ಲೂ ಜನಜನಿತರಾದರು. ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

2011ರಲ್ಲಿ ಬೆಂಗಳೂರು ವಿವಿಯು ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ.

ಸಿಎಂ ಸೇರಿದಂತೆ ಗಣ್ಯರ ಕಂಬನಿ: ಬಿಕೆಎಸ್‌ ವರ್ಮಾ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಚಿವ ಸುನಿಲ್‌ ಕುಮಾರ್‌, ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬ್ಲೇಡಿನಿಂದ, ಉಗುರಿನಿಂದ, ಎಂಬಾಸಿಂಗ್‌, ಥ್ರೆಡ್ ಪೇಂಟಿಂಗ್‌ ಮಾಡಿ ಕಲಾಲೋಕದಲ್ಲಿ ಗಮನಸೆಳೆದಿದ್ದರು. ತಮ್ಮ ಎರಡೂ ಕೈಗಳ ಬೆರೆಳುಗಳನ್ನೆ ಉಪಯೋಗಿಸಿ ಸುಂದರವಾದ ಚಿತ್ತಾರಗಳನ್ನು ಮೂಡಿಸುವ ಅವರ ಕಲಾಪರಿ ಅನನ್ಯವಾಗಿತ್ತು. ಅವರು ಬಿಡಿಸಿದ ‘ಓಂಗಣೇಶ ಚಿತ್ತಾರ’ ಜನರ ಆಸಕ್ತಿಯನ್ನು ಕೆರಳಿಸಿತ್ತು. ಎರಡೇ ನಿಮಿಷಗಳಲ್ಲಿ ಸುಂದರವಾದ ಚಿತ್ರಕಲೆಯನ್ನು ಬಿಡಿಸುವ ಮೂಲಕ ಚಿತ್ರಕಲಾ ಕ್ಷೇತ್ರದಲ್ಲೆ ಬೆರಗು ಮೂಡಿಸುವಂತೆ ಮಾಡಿದರು.

ವರನಟ ಡಾ.ರಾಜ್‌ಕುಮಾರ್‌, ಸೂಪರ್‌ ಸ್ಟಾರ್‌ ರಜನಿಕಾಂತ್‌, ಸುಪ್ರಸಿದ್ಧ ಕಲಾವಿದ ಡಾ.ರೋರಿಕ್‌, ಮತ್ತು ದೇವಿಕಾರಾಣಿ ದಂಪತಿಗಳು ವರ್ಮಾ ಅವರ ಕಲಾ ಸಿರಿವಂತಿಕೆಗೆ ಮನಸೋತಿದ್ದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next