Advertisement
ವರ್ಮಾ ಅವರ ಕಲಾಸಿರಿವಂತಿಕೆಯಲ್ಲಿ ಜೀವ ತಳೆದಿರುವ ರಾಘವೇಂದ್ರ ಸ್ವಾಮಿಗಳ ಬೃಹತ್ ವರ್ಣಚಿತ್ರಗಳಿಗೆ ಮನಸೋಲದವರೇ ಇಲ್ಲ. ಸಿನಿರಂಗದ ಹಲವು ಹಿರಿಯ ನಟ-ನಟಿಯರ ಮನೆಗಳಲ್ಲಿ ವರ್ಮಾ ಅವರ ಕಲಾಸಿರಿಯಲ್ಲಿ ಅರಳಿರುವ ರಾಘವೇಂದ್ರ ಸ್ವಾಮಿಗಳ ಚಿತ್ರಗಳಿವೆ.
Related Articles
Advertisement
ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾಡಿಕೊಟ್ಟ ತಾಯಿ ಭುವನೇಶ್ವರಿ ಕಲಾಕೃತಿ ಈಗಲೂ ಜನಮನ್ನಣೆ ಗಳಿಸಿದೆ. 2 ನಿಮಿಷದಲ್ಲಿ ಚಿತ್ರಗಳನ್ನು ಬರೆಯಬಲ್ಲ ಅತಿವೇಗದ ಕಲಾವಿದ ಕೂಡ ಹೌದು. ಹಲವು ದಶಕಗಳ ಹಿಂದೆ ವರ್ಮಾ ಅವರು ವೇಗದ ಚಿತ್ರ ಬಿಡಿಸುವುದಕ್ಕೆ ಖ್ಯಾತಿ ಪಡೆದಿದ್ದರು ಎನ್ನುತ್ತಾರೆ ಹಿರಿಯ ಕಲಾವಿದ ಮತ್ತು ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ.
ನೃತ್ಯಗಾನ ಕುಂಚದಲ್ಲಿ ಕೂಡ ವರ್ಮಾ ಸಿದ್ಧಹಸ್ತರು. ಸದಾ ಹೊಸತನ್ನು ಬಯಸುತ್ತಿದ್ದ ಅವರು ಶತಾವಧಾನಿ ಆರ್.ಗಣೇಶ್ ಅವರೊಂದಿಗೆ ಸೇರಿ ಕಾವ್ಯ-ಚಿತ್ರಗಳನ್ನು ಬಿಡಿಸಿ ಕಲಾಲೋಕದಲ್ಲಿ ಮತ್ತೊಂದು ಯಶೋಗಾಥೆ ಬರೆದರು.
ರಾಮಾಂಜನೇಯ ಗುಡ್ಡದ ಹಿಂದಿನ ಕಲ್ಪನಾಶಕ್ತಿ: ಬೆಂಗಳೂರಿನ ಹನುಮಂತನಗರದ ರಾಮಾಂಜನೇಯ ಗುಡ್ಡದ ಸೃಷ್ಟಿಯ ಹಿಂದೆ ವರ್ಮಾ ಅವರ ಕಲ್ಪನಾಶಕ್ತಿಯಿದೆ. ಪ್ರಕೃತಿ ಆರಾಧಕರಾಗಿದ್ದ ಅವರು ತಮ್ಮ ಕುಂಚದ ಮೂಲಕ ಮರಗಳಿಗೆ ದೇವತೆ ರೂಪ ನೀಡಿದರು. ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಮಲೆನಾಡು ಇವರ ಪ್ರೀತಿಯ ಸ್ಥಳಗಳಾಗಿದ್ದವು. ಬಸವನಗುಡಿ ದೊಡ್ಡಗಣಪತಿ ದೇವಸ್ಥಾನ ವರ್ಮಾ ಅವರಿಗೆ ಬಲು ಇಷ್ಟದ ಸ್ಥಳ.
ಕಲಾನಿರ್ದೇಶಕರಾಗಿ ಕೂಡ ಸಿನಿರಂಗದಲ್ಲಿ ಛಾಪು ಮೂಡಿಸಿದ್ದರು. 1967ರಲ್ಲಿ ಬಾಲಿವುಡ್ನಲ್ಲಿ ತೆರೆಕಂಡ “ಆದ್ಮಿ” ಸಿನಿಮಾಕ್ಕೆ ಸಹಾಯಕ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ವಿಷ್ಣುವರ್ಧನ್ ಅಭಿನಯದ ಬಂಗಾರದ ಜಿಂಕೆ, ನಿನಗಾಗಿ ನಾನು, ರಾಜೇಶ್ವರಿ ಮತ್ತು ಚದುರಿದ ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.ಹೆಸರು ಬದಲಿಸಿಕೊಂಡರು: ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ (ಬಿ.ಕೆ.ಎಸ್ ವರ್ಮಾ )ಅವರು ಮೈಸೂರಿನ ಜಗನ್ಮೋಹನ ಅರಮನೆಗೆ ತೆರಳಿದ್ದಾಗ ರಾಜಾ ರವಿವರ್ಮ ಅವರ ಚಿತ್ರಕಲೆಯನ್ನು ನೋಡಿ ಪ್ರೇರಿತರಾಗಿ ತಮ್ಮ ಮೂಲ ಹೆಸರಾದ ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ್ ಜತೆಗೆ ವರ್ಮಾ ಎಂಬ ಹೆಸರನ್ನೂ ಸೇರಿಸಿಕೊಂಡರು. ನಂತರ ಅವರ ಕಲಾ ಜಗತ್ತಿನ ದಿಕ್ಕೇ ಬದಲಾಯಿತು ಎನ್ನುತ್ತಾರೆ ಅವರ ಒಡನಾಡಿಗಳು. ಕಲೆಯಲ್ಲಿ ಪ್ರಕೃತಿ ಮೂಡಿಸಿದ ಕಲಾವಿದ
ಅತ್ತಿಬೆಲೆ ಬಳಿಯ ಕರ್ನೂರ್ನಲ್ಲಿ ಡಾ.ಜಯಲಕ್ಷ್ಮಮ್ಮ ಮತ್ತು ಪಂಡಿತ್ ಕೃಷ್ಣಾಚಾರ್ ಅವರು ಪುತ್ರರಾಗಿ 1949 ಫೆ.6ರಂದು ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ (ಬಿ.ಕೆ.ಎಸ್.ವರ್ಮಾ) ಜನಿಸಿದರು. ಚಿಕ್ಕವಯಸ್ಸಿನಲ್ಲೇ ಚಿತ್ರಕಲೆಯ ಬಗ್ಗೆ ಆಸಕ್ತಿ ಮೊಳೆತ ಹಿನ್ನೆಲೆಯಲ್ಲಿ ಕಲಾಲೋಕದತ್ತ ಮುಖ ಮಾಡಿದರು. ಎ.ಎನ್.ಸುಬ್ಬರಾವ್ ಕಲಾಮಂದಿರದಲ್ಲಿ ಚಿತ್ರಕಲಾಭ್ಯಾಸ ಮಾಡಿದರು. ತಾಯಿ ಭುವನೇಶ್ವರಿ, ರಾಘವೇಂದ್ರ ಸ್ವಾಮಿ, ಗಣಪತಿ ಚಿತ್ರಗಳ ಮೂಲಕ ದೇಶ ವಿದೇಶಗಳಲ್ಲೂ ಜನಜನಿತರಾದರು. ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2011ರಲ್ಲಿ ಬೆಂಗಳೂರು ವಿವಿಯು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಸಿಎಂ ಸೇರಿದಂತೆ ಗಣ್ಯರ ಕಂಬನಿ: ಬಿಕೆಎಸ್ ವರ್ಮಾ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್, ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಬ್ಲೇಡಿನಿಂದ, ಉಗುರಿನಿಂದ, ಎಂಬಾಸಿಂಗ್, ಥ್ರೆಡ್ ಪೇಂಟಿಂಗ್ ಮಾಡಿ ಕಲಾಲೋಕದಲ್ಲಿ ಗಮನಸೆಳೆದಿದ್ದರು. ತಮ್ಮ ಎರಡೂ ಕೈಗಳ ಬೆರೆಳುಗಳನ್ನೆ ಉಪಯೋಗಿಸಿ ಸುಂದರವಾದ ಚಿತ್ತಾರಗಳನ್ನು ಮೂಡಿಸುವ ಅವರ ಕಲಾಪರಿ ಅನನ್ಯವಾಗಿತ್ತು. ಅವರು ಬಿಡಿಸಿದ ‘ಓಂಗಣೇಶ ಚಿತ್ತಾರ’ ಜನರ ಆಸಕ್ತಿಯನ್ನು ಕೆರಳಿಸಿತ್ತು. ಎರಡೇ ನಿಮಿಷಗಳಲ್ಲಿ ಸುಂದರವಾದ ಚಿತ್ರಕಲೆಯನ್ನು ಬಿಡಿಸುವ ಮೂಲಕ ಚಿತ್ರಕಲಾ ಕ್ಷೇತ್ರದಲ್ಲೆ ಬೆರಗು ಮೂಡಿಸುವಂತೆ ಮಾಡಿದರು. ವರನಟ ಡಾ.ರಾಜ್ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್, ಸುಪ್ರಸಿದ್ಧ ಕಲಾವಿದ ಡಾ.ರೋರಿಕ್, ಮತ್ತು ದೇವಿಕಾರಾಣಿ ದಂಪತಿಗಳು ವರ್ಮಾ ಅವರ ಕಲಾ ಸಿರಿವಂತಿಕೆಗೆ ಮನಸೋತಿದ್ದರು.