ಢಾಕಾ(ಬಾಂಗ್ಲಾದೇಶ): ಪದಚ್ಯುತ ಪ್ರಧಾನಿ ಶೇಖ್ ಹಸೀನಾ(Sheikh Hasina) ಅವರನ್ನು ಢಾಕಾಕ್ಕೆ ವಾಪಸ್ ಕಳುಹಿಸಬೇಕೆಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ(Interim Government) ಭಾರತಕ್ಕೆ ರಾಜತಾಂತ್ರಿಕ ಮನವಿ ಕಳುಹಿಸಿದೆ ಎಂದು ವರದಿ ತಿಳಿಸಿದೆ.
16 ವರ್ಷಗಳ ಕಾಲ ಆಡಳಿತ ನಡೆಸಿದ್ದ ಅವಾಮಿ ಲೀಕ್ ನಾಯಕಿ ಶೇಖ್ ಹಸೀನಾ ವಿರುದ್ಧ ಭಾರೀ ಪ್ರತಿಭಟನೆ, ಹಿಂಸಾಚಾರ ನಡೆದ ನಂತರ ಶೇಖ್ ಹಸೀನಾ ಆಗಸ್ಟ್ 5ರಂದು ಬಾಂಗ್ಲಾದೇಶದಿಂದ ಪರಾರಿಯಾಗಿ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದರು.
ಹತ್ಯಾ*ಕಾಂಡ ಮತ್ತು ಹಿಂಸಾಚಾರ ನಡೆಸಿದ ಆರೋಪದ ಮೇಲೆ ಢಾಕಾದ ಅಂತಾರಾಷ್ಟ್ರೀಯ ಕ್ರೈ*ಮ್ಸ್ ಟ್ರಿಬ್ಯೂನಲ್ (ICT) ಶೇಖ್ ಹಸೀನಾ, ಆಕೆಯ ಸಂಪುಟದ ಸಚಿವರುಗಳು, ಸಲಹೆಗಾರರು, ಮಾಜಿ ಸೇನಾ ಅಧಿಕಾರಿಗಳ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿತ್ತು.
“ ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸುವ ನಿಟ್ಟಿನಲ್ಲಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸುವಂತೆ ನಾವು ಭಾರತ ಸರ್ಕಾರಕ್ಕೆ ರಾಜತಾಂತ್ರಿಕ ಸಂದೇಶವನ್ನು ಕಳುಹಿಸಿದ್ದೇವೆ” ಎಂದು ಮಧ್ಯಂತರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹೀದ್ ಹುಸೈನ್ ತಿಳಿಸಿದ್ದಾರೆ.
ಶೇಖ್ ಹಸೀನಾ ಅವರನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುವಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರವನ್ನು ಕಳುಹಿಸಲಾಗಿದೆ ಎಂದು ಈ ಮೊದಲು ಗೃಹ ಖಾತೆ ಸಲಹೆಗಾರ ಜಹಾಂಗೀರ್ ಅಲಾಂ ತಿಳಿಸಿದ್ದರು.