Advertisement

ದುಪ್ಪಟ್ಟು ಬೆಲೆಗೆ ಅಗತ್ಯ ವಸ್ತುಗಳ ಮಾರಾಟ

06:00 PM Apr 20, 2020 | mahesh |

ಮಂಡ್ಯ: ದೇಶಾದ್ಯಂತ ಲಾಕ್‌ಡೌನ್‌ ಆಗಿರುವ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ತುರ್ತು ಪರಿಸ್ಥಿತಿಯನ್ನೇ ಲಾಭಮಾಡಿಕೊಂಡು ಕೆಲ ವರ್ತಕರು ಆಹಾರ ಪದಾರ್ಥಗಳಿಗೆ ದುಪ್ಪಟ್ಟು ಬೆಲೆ ವಿಧಿಸಿ ಮಾರಾಟ ಮಾಡುತ್ತಾ ಹಗಲು ದರೋಡೆಯಲ್ಲಿ ತೊಡಗಿದ್ದಾರೆ.

Advertisement

ಅಗತ್ಯ ವಸ್ತುಗಳ ದರಪಟ್ಟಿಯನ್ನು ಅಂಗಡಿ ಎದುರು ನಮೂದಿಸುವಂತೆ ಜಿಲ್ಲಾಡಳಿತ ವರ್ತಕರಿಗೆ ಸೂಚಿಸಿ ಸುಮ್ಮನಾಗಿದೆ. ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೇ ದಾಸ್ತಾನು ಕೊರತೆಯ ನೆಪವೊಡ್ಡಿ ಎಂಆರ್‌ಪಿ ದರಕ್ಕಿಂತಲೂ 20ರಿಂದ 30 ರೂ. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ದುಪ್ಪಟ್ಟು ದರ: 1200 ರೂ. ಬೆಲೆಯ 25 ಕೆ.ಜಿ.ಅಕ್ಕಿಗೆ 1500 ರೂ., 36 ರೂ. ಇದ್ದ ಕೆ.ಜಿ.ಸಕ್ಕರೆಗೆ 44 ರೂ., ಕೆ.ಜಿ.ಗೆ 150 ರೂ. ಇದ್ದ ಚೋಟು ಮೆಣಸಿನಕಾಯಿ ಬೆಲೆ 260 ರೂ., ಸೋಪುಗಳ ಬೆಲೆಯಲ್ಲೂ 5ರಿಂದ 10 ರೂ. ಬೆಲೆ ವಿಧಿಸಲಾಗಿದೆ. ಬೇಳೆ ಕಾಳುಗಳ ಬೆಲೆಯೂ 15 ರೂ.ನಿಂದ, 20 ರೂ. ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ.

ದರಪಟ್ಟಿ ಹಾಕಿಲ್ಲ: ಯಾವುದೇ ದಿನಸಿ ಅಂಗಡಿಗಳ ಎದುರು ದರಪಟ್ಟಿ ಹಾಕಿಲ್ಲ. ಅಗತ್ಯ ವಸ್ತುಗಳಿಗೆಲ್ಲಾ ಮನಸೋ ಇಚ್ಛೆ ದರಕ್ಕೆ ಮಾರುತ್ತಿದ್ದಾರೆ. ಗ್ರಾಹಕರು ಈ ಬಗ್ಗೆ ಪ್ರಶ್ನೆ
ಮಾಡಿದರೆ, ಮುಂದೆ ಪದಾರ್ಥ ಸಿಗುವುದು ಕಷ್ಟ. ಬೇಕಿದ್ದರೆ ತೆಗೆದುಕೊಳ್ಳಿ, ಇಲ್ಲದಿದ್ದರೆ ಹೋಗಿ ಎಂದೂ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ.

ಮಾಹಿತಿ ಕೊರತೆ: ನಗರ, ಪಟ್ಟಣದಲ್ಲಿ ಬಹುತೇಕ ಕಡೆ ಎಂಆರ್‌ಪಿ ಬೆಲೆಗೆ ಆಹಾರ ಪದಾರ್ಥ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಹೆಚ್ಚಿನ ದರ ಕೇಳಿದರೆ ಜಿಲ್ಲಾಡಳಿತಕ್ಕೆ ದೂರು ಕೊಡಬಹುದೆಂಬ ಭಯ  ವ್ಯಾಪಾರಸ್ಥರಲ್ಲಿದೆ. ಆದರೂ ಕೆಲವರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ವ್ಯಾಪಾರಸ್ಥರಿಗೆ ಕಡಿವಾಣ ಹಾಕುವವರಿಲ್ಲ. ಜಿಲ್ಲಾಡಳಿತದ
ಆದೇಶ ಹಳ್ಳಿಗೆ ಮುಟ್ಟುತ್ತಿಲ್ಲ. ಇದರ ಬಗ್ಗೆ ಗ್ರಾಮೀಣರಿಗೂ ಮಾಹಿತಿ ಸಿಗುತ್ತಿಲ್ಲ.

Advertisement

ಲಾಕ್‌ಡೌನ್‌ ದುರ್ಬಳಕೆ
ವ್ಯಾಪಾರಸ್ಥರು ನಗರದಿಂದ ತರಕಾರಿ ತಂದು ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ತರಕಾರಿ ಮಾರುಕಟ್ಟೆ ದರಕ್ಕಿಂತಲೂ ಅಧಿಕವಾಗಿದೆ. 5 ರೂ. ಕೊತ್ತಂಬರಿ ಸೊಪ್ಪು ಕಟ್ಟಿಗೆ 20 ರೂ., 10 ರೂ. ಇರುವ ಕೆಜಿ ಟೊಮೆಟೋ ಬೆಲೆ 30 ರೂ., ಎಲ್ಲಾ ಸೊಪ್ಪುಗಳ ಬೆಲೆ 20 ರೂ. ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದರೂ ಇದಕ್ಕೆ ಕಡಿವಾಣ ಹಾಕುವವರೇ ಇಲ್ಲ ದಂತಾಗಿದೆ. ಲಾಕ್‌ಡೌನ್‌ ಸಮಯವನ್ನು ವ್ಯಾಪಾರಸ್ಥರು ದುರ್ಬಳಕೆ ಮಾಡಿಕೊಂಡು ಭರ್ಜರಿ ಹಣ ಗಳಿಸುತ್ತಿದ್ದಾರೆ. ಜಿಲ್ಲಾಡಳಿತ ತ್ವರಿತ ಕ್ರಮ ವಹಿಸಬೇಕಿದೆ.

ಆಹಾರ ಇಲಾಖೆಯವರಿಗೆ ಎಲ್ಲಾ ಮಾದರಿಯ ಆಹಾರ ಪದಾರ್ಥಗಳ ಬೆಲೆಯನ್ನು ವಿವರವಾಗಿ ಪ್ರಕಟಿಸಿ ವ್ಯಾಟ್ಸಾಪ್‌ ಗ್ರೂಪ್‌ಗಳಿಗೆ ರವಾನಿಸಲು ವ್ಯವಸ್ಥೆ ಮಾಡಲಾಗುವುದು. ತೋಟಗಾರಿಕೆ ಇಲಾಖೆ ಉತ್ಪನ್ನಗಳಿಗೂ ಇದೇ ವ್ಯವಸ್ಥೆ ಜಾರಿಗೊಳಿಸುವಂತೆ ಕ್ರಮ ವಹಿಸುತ್ತೇನೆ.
● ಯಾಲಕ್ಕೀಗೌಡ, ಜಿಲ್ಲಾ ನೋಡಲ್‌ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next