Advertisement
ಈ ಸಂಬಂಧ ಹಳೇ ಹುಬ್ಬಳ್ಳಿ ಮೂಲದ ಮಹಿಳೆಯ ಪತಿ ಹಲಸೂರು ಪೊಲೀಸ್ ಠಾಣೆಯಲ್ಲಿ ಹಲಸೂರಿನ ಸ್ಟೆಲ್ಲಾ (50) ಎಂಬ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಪತಿಯ ನಿರಂತರ ಹೋರಾಟ ಹಾಗೂ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಶ್ರಮದಿಂದ ಶಾರ್ಜಾದ “ನರಕ’ದಲ್ಲಿದ್ದ ಗರ್ಭಿಣಿ ಮಹಿಳೆ ಇದೇ ಜೂನ್ 25ರಂದು ತವರಿಗೆ ಮರಳಿದ್ದಾರೆ. ಗರ್ಭದಲ್ಲಿರುವ ಮಗು ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Related Articles
Advertisement
ಊಟ ಕೊಡದೆ ಚಿತ್ರಹಿಂಸೆ: ದುಡಿಮೆಗೆಂದು ಹೋದ ಪತ್ನಿ ನಿಜವಾಗಲೂ “ನರಕ’ಯಾತನೆ ಅನುಭವಿಸಿದ್ದಾಳೆ. ಮೊಬೈಲ್ ಬಳಸಿದರೆ ಮಾಲೀಕರು ಬೈಯುತ್ತಿದ್ದರಂತೆ. ಈ ನಡುವೆ ತನ್ನ ಸಹೋದ್ಯೋಗಿ ಮಹಿಳೆಯೊಬ್ಬರ ಮೊಬೈಲ್‌ನಿಂದ ಕರೆ ಮಾಡಿ, “ನನಗೆ ತುಂಬ ಹಿಂಸೆಯಾಗುತ್ತಿದೆ. ಗರ್ಭಿಣಿ ಎಂದು ಗೊತ್ತಿದ್ದರೂ ಸರಿಯಾಗಿ ಊಟ ಕೊಡುವುದಿಲ್ಲ. ಹಸಿವಿನಿಂದ ಒದ್ದಾಡಿದರೆ ಎರಡು ಪೀಸು ಬ್ರೇಡ್ ಕೊಟ್ಟು ನಿಂದಿಸುತ್ತಾರೆ. ದೈಹಿಕವಾಗಿಯೂ ಹಲ್ಲೆ ನಡೆಸುತ್ತಿದ್ದಾರೆ. ಆರೋಗ್ಯ ಹದಗೆಡುತ್ತಿದೆ. ದಯವಿಟ್ಟು ನನ್ನನ್ನು ಕರೆದುಕೊಂಡು ಹೋಗಿ’ ಎಂದು ಪತ್ನಿ ಫೋನ್‌ನಲ್ಲಿಯೇ ಕಣ್ಣಿರು ಹಾಕಿದಳು ಎಂದು ಮಹಿಳೆಯ ಪತಿ “ಉದಯವಾಣಿ’ ಜತೆ ಮಾತನಾಡುವಾಗ ಭಾವುಕರಾದರು.
ಭಾರತೀಯ ರಾಯಭಾರ ಕಚೇರಿ ನೆರವು: “ಪತ್ನಿಯ ಕರೆಯನ್ನಾಧರಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಹಾಗೂ ಬೆಂಗಳೂರಿನ ಪೂರ್ವ ವಿಭಾಗದ ಡಿಸಿಪಿಯವರನ್ನು ಸಂಪರ್ಕಿಸಿದ್ದೆ. ಉತ್ತಮವಾಗಿ ಸ್ಪಂದಿಸಿದರು. ಬಳಿಕ ಕೋರಮಂಗಲದಲ್ಲಿರುವ ಪಾಸ್‌ಪೋರ್ಟ್ ಕಚೇರಿಗೆ ದೂರು ನೀಡಿದಾಗ, ಕೂಡಲೇ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳನ್ನು ಇ-ಮೇಲ್ ಮೂಲಕ ಸಂಪರ್ಕಿಸಿದರು. ಬಳಿಕ ಶಾರ್ಜಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ಪತ್ನಿಯನ್ನು ಜೂನ್ 25ರಂದು ತವರಿಗೆ ಕಳುಹಿಸಿದರು’ ಎಂದು ಅವರು ವಿವರಿಸಿದರು.
1.30 ಲಕ್ಷಕ್ಕೆ ಮಹಿಳೆ ಮಾರಾಟ!?: “ಪತ್ನಿ ಗರ್ಭಿಣಿಯಾಗಿದ್ದಾಳೆಂದು ತಿಳಿಯುತ್ತಿದ್ದಂತೆ ಕೂಡಲೇ ಸೂಪರ್ ಮಾರ್ಕೆಟ್ ಮಾಲೀಕನ ಮೊಬೈಲ್ ನಂಬರ್ ಪಡೆದು ಕರೆ ಮಾಡಿ ಕಳುಹಿಸುವಂತೆ ಕೇಳಿದೆ. ಆದರೆ, ಈಕೆಯನ್ನು ಕರೆಸಿಕೊಳ್ಳಲು ಸ್ಟೆಲ್ಲಾಗೆ 1.30 ಲಕ್ಷ ರೂ. ಕೊಟ್ಟಿದ್ದೇನೆ. ಆ ಹಣ ಕೊಟ್ಟು ಕರೆದೊಯ್ಯುವಂತೆ ಧಮ್ಕಿ ಹಾಕಿದ್ದ. ಈ ಬಗ್ಗೆ ಸ್ಟೆಲ್ಲಾ ಕೂಡ ತಮಗೆ ಹೇಳಿರಲಿಲ್ಲ. ಪತ್ನಿಗೆ 2 ತಿಂಗಳ ವೇತನ ಕೊಟ್ಟಿಲ್ಲ. ಅದನ್ನು ವಜಾ ಮಾಡಿಕೊಂಡು ಕೂಡಲೇ ಕಳುಹಿಸುವಂತೆ ಬೇಡಿಕೊಂಡೆ. ಆತ ಕರಗಲಿಲ್ಲ. ಕೊನೆಗೆ ಪೊಲೀಸರು, ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಸಹಾಯದಿಂದ ಪತ್ನಿ ಮನೆಗೆ ಬಂದಿದ್ದಾಳೆ ಎಂದು ಪತಿ ವಿವರಿಸಿದರು.
ವಿದೇಶಕ್ಕೆ ಕಳುಹಿಸುವುದಾಗಿ ವಂಚನೆ ಹಾಗೂ ಪತ್ನಿಯನ್ನು ಅಕ್ರಮವಾಗಿ ಶಾರ್ಜಾಗೆ ಕಳುಹಿಸಿದ ಸ್ಟೆಲ್ಲಾ ಎಂಬಾಕೆ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರುದಾರ ಹೇಳಿದ್ದಾರೆ. ಹೀಗಾಗಿ ಮಹಿಳೆ ಬಂದ ನಂತರ ಆಕೆಯ ಹೇಳಿಕೆ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗುತ್ತದೆ.- ಭೀಮಾಶಂಕರ್ ಗುಳೇದ್, ಪೂರ್ವ ವಿಭಾಗದ ಡಿಸಿಪಿ
ಮೋಹನ್ ಭದ್ರಾವತಿ