ಬೆಂಗಳೂರು: ಲಾಕ್ ಡೌನ್ ನಿಂದ ಹಣ್ಣು ತರಕಾರಿ ಬೆಳೆದು ಕಷ್ಟಕ್ಕೆ ಸಿಲುಕಿದ್ದ ರೈತರಿಗೆ ನೆರವಾಗಲು ತೋಟಗಾರಿಕೆ ಇಲಾಖೆ ಹಾಪ್ ಕಾಮ್ಸ್ ಮೂಲಕ 28 ದಿನಗಳಲ್ಲಿ ರಾಜ್ಯದಲ್ಲಿ 9500 ಸಾವಿರ ಟನ್ ಹಣ್ಣು ತರಕಾರಿ ಮಾರಾಟ ಮಾಡಿದೆ. ಆದರೆ, ಇನ್ನೂ 15 ಸಾವಿರ ಟನ್ ತರಕಾರಿ, ಸುಮಾರು ಒಂದು ಲಕ್ಷ ಟನ್ ಹಣ್ಣಿಗೆ ಬೇಡಿಕೆ ಇಲ್ಲದಂತಾಗಿದೆ. ಇದೀಗ ಲಾಕ್ ಡೌನ್ ಸಡಲಿಕೆಯಡಿ ಕಾರ್ಗೋ ವಿಮಾನ ಹಾಗೂ ಗೂಡ್ಸ್ ರೈಲು ಸೇವೆ ಆರಂಭವಾಗಿರುವುದರಿಂದ ಹೊರ ದೇಶ ಹಾಗೂ ರಾಜ್ಯಕ್ಕೆ ಹಣ್ಣು ಮತ್ತು ತರಕಾರಿ ಕಳುಹಿಸಬಹುದು ಎಂದು ರೈತರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಾಗಿದೆಯಾದರೂ ತಮ್ಮ ನಿರೀಕ್ಷೆಗೆ ತಕ್ಕಂತೆ ಬೇಡಿಕೆ ಬರಲಿದೆಯೋ ಇಲ್ಲವೋ ಎಂಬ ಚಿಂತೆಯೂ ಇದೆ.
ಪ್ರತಿ ವಾರ ಅಮೆರಿಕ, ಲಂಡನ್, ಆಸ್ಟ್ರೇಲಿಯಾ ಸೇರಿ ಹತ್ತು ರಾಜ್ಯಗಳಿಗೆ 220 ಟನ್ ಹಣ್ಣು ತರಕಾರಿ ರಫ್ತು ಆಗುತ್ತಿತ್ತು. ಅದೇ ರೀತಿ ಹೊರ ರಾಜ್ಯಗಳಿಗೆ ಕರ್ನಾಟಕದಿಂದ 5 ರಿಂದ 8 ಸಾವಿರ ಹಣ್ಣು ತರಕಾರಿ ವಾರಕ್ಕೆ ರವಾನಿಸಲಾಗುತ್ತಿದ್ದು, ಒಂದು ತಿಂಗಳಿನಿಂದ ನಿಂತಿದೆ. ಈಗ ಕೇಂದ್ರದ ಸಹಕಾರದೊಂದಿಗೆ ಕಾರ್ಗೋ ವಿಮಾನ ಸೇವೆ ದರ ಕಡಿಮೆ ಮಾಡಿಸಿ ರಫ್ತು ಮಾಡಿಸಲು,
ಸರಕು ಸಾಗಣೆ ರೈಲು ಮೂಲಕವೂ ಹೊರ ರಾಜ್ಯಗಳಿಗೆ ಸಾಗಣೆಗೆ ಸಿದ್ಧತೆ ಮಾಡಲಾಗಿದೆ.
ಆದರೆ, ಸಾವಿರಾರು ಟನ್ ಹಣ್ಣು ತರಕಾರಿ ಬೇಡಿಕೆ ಇಲ್ಲದ ಕಾರಣ ಹೊಲ-ತೋಟಗಳಲ್ಲೇ ಕೊಳೆಯುವಂತಾಗಿದೆ. ಹೂಕೋಸು , ಎಲೆ ಕೋಸು, ಕ್ಯಾರೆಟ್ , ದಪ್ಪ ಮೆಣಸಿನಕಾಯಿ, ಬೀಟ್ ರೋಟ್, ಬೂದು ಕುಂಬಳಕಾಯಿ ಸೇರಿ ಇತರೆ 15 ಸಾವಿರ ಟನ್ ತರಕಾರಿಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಅದೇ ರೀತಿ ದ್ರಾಕ್ಷಿ, ಸಪೋಟ, ಕಲ್ಲಂಗಡಿ, ಕಬೂìಜ , ದಾಳಿಂಬೆಗೂ ಬೇಡಿಕೆ
ಇಲ್ಲದಂತಾಗಿದೆ. ಕಬೂìಜ 5 ಸಾವಿರ ಹೆಕ್ಟೇರ್ ನಲ್ಲಿ 75 ಸಾವಿರ ಟನ್ ಬೆಳೆದಿದ್ದು ಐದು ಸಾವಿರ ಟನ್ ಮಾರಾಟವಾಗಿದೆ. ಕಲ್ಲಂಗಡಿ 1 ಲಕ್ಷ ಟನ್ ಬೆಳೆದಿದ್ದು 10 ಸಾವಿರ ಟನ್ ಮಾತ್ರ ಮಾರಾಟವಾಗಿದೆ. 12894 ಹೆಕ್ಟೇರ್ ಪ್ರದೇಶದಲ್ಲಿ 10 ಸಾವಿರ ಟನ್ ದ್ರಾಕ್ಷಿ ಬೆಳೆಯ ಲಾಗಿದೆ. ಒಂದು ಸಾವಿರ ಟನ್ ಸಹ ಮಾರಾಟ ಆಗಿಲ್ಲ.
●ಎಸ್. ಲಕ್ಷ್ಮಿನಾರಾಯಣ