ರಾಯಚೂರು: ಪ್ರಸಿದ್ಧ ಕಂಪನಿಗಳ ಚಿಹ್ನೆಗಳನ್ನು ನಕಲಿ ವಸ್ತುಗಳ ಮೇಲೆ ಅಳವಡಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಸಿರವಾರ ಠಾಣೆ ಪೊಲೀಸರು, ಬಂಧಿತನಿಂದ ಸುಮಾರು 16 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬಾಲಾಜಿ ಕ್ಯಾಂಪ್‌ನಲ್ಲಿ ರತನ್ ಸಿಂಗ್ ಎಂಬಾತ ಕೆಲ ಸಹಚರರ ಜತೆಗೂಡಿ ಈ ದಂಧೆ ಮಾಡುತ್ತಿದ್ದ ಎಂದು ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖೀಲ್ ಬಿ., ಬಾಲಾಜಿ ಕ್ಯಾಂಪ್‌ನ ಹಳೆಯ ರೆಸಿಡೆನ್ಸಿಯನ್ ವಸತಿ ಶಾಲೆಯ ರೂಮ್‌ಗಳಲ್ಲಿ 3, 4 ತಿಂಗಳು ಹಿಂದಿನಿಂದ ನಕಲಿ ವಸ್ತುಗಳ ಮಾರಾಟ ಮಾಡುತ್ತಿದ್ದ. ವಿವಿಧ ಪ್ಯಾಕಿಂಗ್ ಮಷೀನ್‌ಗಳಿಂದ ಮೂಲ ಕಂಪನಿಯ ಚಿಹ್ನೆಗಳಂತೆ ನಕಲಿ ಚಿಹ್ನೆಗಳನ್ನು ತಯಾರಿಸಿ ಅದನ್ನು ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ನಕಲಿ ವಸ್ತುಗಳ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಕೃತ್ಯದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇನ್ನು ಅನೇಕರು ತಲೆ ಮರೆಸಿಕೊಂಡಿದ್ದಾರೆ. ತನಿಖೆ ಮುಂದುವರಿಸಲಾಗಿದೆ ಎಂದು ವಿವರಿಸಿದರು.
ಸಿಂಧನೂರು ಡಿವೈಎಸ್‌ಪಿ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಸಿರವಾರ ಸಿಪಿಐ ಎಂ. ಶಶಿಕಾಂತ, ಪಿ.ಎಸ್.ಐ ಗಿತಾಂಜಲಿ ಶಿಂಧೆ ಸಿಬ್ಬಂದಿಯಾದ ಮೌನೇಶ, ವೀರೇಶ, ಅಮರೇಶ, ವಿಜಯ ತಂಡ ದಾಳಿ ನಡೆಸಿದೆ. ಅಸಲಿ ವಸ್ತುಗಳಂತೆ ಕಾಣಿಸುವ ನಕಲಿ ವಸ್ತುಗಳಾದ ಪ್ಯಾರಚೂಟ್ ಕೊಬ್ಬರಿ ಎಣ್ಣೆ ಡಬ್ಬಿಗಳು, ರೆಡ್‌ಲೇಬಲ್ ಚಹಪುಡಿ, ತ್ರಿರೋಸಸ್ ಚಹಪುಡಿ ಪ್ಯಾಕೆಟ್‌ಗಳು, ಸರೆಕ್ಸಲ್ ಸಾಬೂನು ಪೌಡರ್, ಫೆವಿಕ್ವಿಕ್ ಪ್ಯಾಕೆಟ್‌ಗಳು ಇವುಗಳನ್ನು ತಯಾರಿಸಲು ಬಳಸುವ 4 ಮಷೀನ್‌ಗಳು, ಕೊಬ್ಬರಿ ಎಣ್ಣೆ ತುಂಬಿದ ನಕಲಿ ಬಾಟಲ್‌ಗಳು, ಕೊಬ್ರಿ ಎಣ್ಣೆಯ ಬಾಟಲಿಯ ಮೇಲೆ ಕಂಪನಿಯ ಹೆಸರು ಹಾಕುವ ಮಷೀನ್, ವಿವಿಧ ಬಣ್ಣಗಳು ಹಾಗೂ ಇವೆಲ್ಲ ವಸ್ತುಗಳನ್ನು ಸರಬರಾಜು ಮಾಡಲು ಬೊಲೆರೊ ಪಿಕಪ್ ವಾಹನ, ಕಚ್ಚಾ ಎಣ್ಣೆ, ಬ್ಯಾರಲ್‌ಗಳು ಸಹ ಸಿಕ್ಕಿವೆ. ಎಲ್ಲ ಸೇರಿ ಒಟ್ಟು 16 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಬಗ್ಗೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ತಿಳಿಸಿದರು. ಸಾರ್ವಜನಿಕರು ದಿನಬಳಕೆ ವಸ್ತುಗಳನ್ನು ಖರೀದಿಸುವಾಗ ವಸ್ತುಗಳ ನೈಜತೆಯ ಬಗ್ಗೆ ಪರೀಕ್ಷಿಸಿ ಎಚ್ಚರ ವಹಿಸುವಂತೆ ಮನವಿ ಮಾಡಿದ್ದಾರೆ.