ಶಿರಸಿ : ನನಗೆ ಆರೋಗ್ಯವಿದೆ, ಯಾವುದೇ ಕಪ್ಪು ಚುಕ್ಕೆ ಇಲ್ಲ, ಸಣ್ಣ ಗ್ರಾಮ ಪಂಚಾಯತ್ ನಿಂದ ಎಲ್ಲ ಕಡೆ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ನನಗೆ ವಯಸ್ಸೂ ಇದೆ. ಯಾಕೆ ಟಿಕೆಟ್ ಕೊಟ್ಟಿಲ್ಲ ಎಂದು ಕೇಳಿದರೂ ಹೇಳಿಲ್ಲ. ಆ ನೋವಿದೆ. ಮೂಲ ಬಿಜೆಪಿಗರನ್ನು ಹೊರಗೆ ಹಾಕಲಾಗುತ್ತಿದೆ. ಮೂಲ ಮನೆಯಿಂದ ಹೊರ ಹೋಗುವ ನೋವು ನನಗೂ ಇದೆ. ಆದರೆ, ಹುಬ್ಬಳ್ಳಿಯಿಂದ ಸ್ಪರ್ಧಿಸುವುದು ಖಚಿತ. ಆದರೆ, ಹೇಗೆ ಎಂಬುದನ್ನು ಹುಬ್ಬಳ್ಳಿಗೆ ತೆರಳಿ ಸಮಾಲೋಚನೆ ನಡಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಬಿಜೆಪಿಗೆ ರಾಜಿನಾಮೆ ನೀಡಿದ ಜಗದೀಶ್ ಶೆಟ್ಟರ್ ಹೇಳಿದರು.
ಭಾನುವಾರ (ಎ.16) ಶಿರಸಿಯ ಸ್ಪೀಕರ್ ಕಚೇರಿಗೆ ಅಗಮಿಸಿದ ಶೆಟ್ಟರ್ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಯಡಿಯೂರಪ್ಪ ಅವರು ನನಗೆ ಹುದ್ದೆ, ಅಧಿಕಾರ ನೀಡಲಾಗಿತ್ತು ಎಂದಿದ್ದರೆ, ಟಿಕೆಟ್ ಸಲುವಾಗಿ ನನ್ನ ಪರವಾಗಿ ಆಗ ಮಾತಾಡಿ ಈಗ ಹೀಗೆ ಹೇಳಿದರೆ ಹೇಗೆ? ಹಿಂದೆ ಕೆಜೆಪಿ ಯಾಕೆ ಹೋಗಿದ್ದರು ಎಂದೂ ಕೇಳಿದ ಅವರು ಟಿಕೆಟ್ ಕೊಡದೇ ಇರಲು ಕೆಲವರ ಸ್ವಾರ್ಥ ಕಾರಣ ಎಂದರು.
ಶನಿವಾರ ಬಿಜೆಪಿ ಪ್ರಮುಖರು ಸೇರಿ ಹುಬ್ಬಳ್ಳಿಯಲ್ಲಿ ಶೆಟ್ಟರ್ ಜೊತೆ ಮಾತುಕತೆ ನಡೆಸಿದ್ದು, ಸಂಧಾನ ವಿಫಲವಾಗಿತ್ತು. ರವಿವಾರ ಬೆಳಿಗ್ಗೆ 11.10ಕ್ಕೆ ಶಿರಸಿಗೆ ಬಂದ ಶೆಟ್ಟರ್ ಅವರ ಜೊತೆ ಗಂಟೆಗಳಿಗೂ ಅಧಿಕ ಕಾಲ ಸ್ಪೀಕರ್ ಜೊತೆ ಮಾತುಕತೆ ನಡೆಸಿ ನಂತರ ರಾಜೀನಾಮೆ ನೀಡಿದರು.
ಆರ್‌ಎಸ್‌ಎಸ್ ಮೂಲಕ ರಾಜಕೀಯಕ್ಕೆ ಬಂದ ಜಗದೀಶ್ ಶೆಟ್ಟರ್ 1990ರಲ್ಲಿ ಹುಬ್ಬಳ್ಳಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕವಾದರು. ಅಲ್ಲಿಂದ ಪಕ್ಷದ ಬಲವರ್ಧನೆಗೆ ಇನ್ನಷ್ಟು ಕೊಡುಗೆ ಆರಂಭಿಸಿದ್ದರು. ಕಾರ್ಯಕರ್ತರಾಗಿ ಸೇರಿ ನಾಯಕರಾಗಿ ಬೆಳೆದಿದ್ದ ಶೆಟ್ಟರ, 1994 ರಿಂದ 2023 ತನಕ 6 ಅವಧಿಗೆ ಶಾಸಕರಾಗಿದ್ದರು.
ಸಚಿವರಾಗಿ ವಿಧಾನಸಭಾ ಸ್ಪೀಕರ್, ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿ ಸ್ಥಾನಕ್ಕೆ ಡಿ. ವಿ. ಸದಾನಂದ ಗೌಡ ರಾಜೀನಾಮೆ ನೀಡಿದ ಬಳಿಕ ಜಗದೀಶ್ ಶೆಟ್ಟರ್ ರಾಜ್ಯದ 21ನೇ ಮುಖ್ಯಮಂತ್ರಿಯಾಗಿ 10 ತಿಂಗಳು ಕಾರ್ಯ ಮಾಡಿದ್ದರು.
ಪಕ್ಷದಲ್ಲೂ ಹಿರಿತನ ಸಾಧಿಸಿದ್ದರು. ಕೇಂದ್ರ ಬಿಜೆಪಿಯ ಟಿಕೆಟ್ ಆಯ್ಕೆ ಸಮಿತಿಯಲ್ಲಿ ಕೂಡ ಇದ್ದರು. ಆದರೆ, ಇವರಿಗೇ ಟಿಕೆಟ್ ಸಿಗದೇ ಇದ್ದಾಗ ಸಿಡಿದೆದಿದ್ದರು.
ಪ್ರಮುಖರಾದ ತವನಪ್ಪ ಅಷ್ಟಗಿ, ಎಸ್.ಐ.ಚಿಕ್ಕನಗೌಡ ಇತರರು ಇದ್ದರು.