ಈಗಿನ ಕಾಲದ ಮಕ್ಕಳು ಎಷ್ಟು ಚೂಟಿ ಎಂಬುದನ್ನು ತಿಳಿದುಕೊಳ್ಳುವ ತವಕವಿದ್ದರೆ ಅವರ ಕೈಗೆ ಮೊಬೈಲ್ ಕೊಟ್ಟು ನೋಡಬೇಕು. ದೊಡ್ಡವರನ್ನೂ ಮೀರಿಸುವ ಮಟ್ಟಿಗೆ ಮೊಬೈಲ್ ಬಳಕೆಯಲ್ಲಿ ಪರಿಣಿತರಾಗಿರುತ್ತಾರೆ. ಆದರೆ ಅದರಿಂದಾಗುವ ಲಾಭವೇನು… ನಷ್ಟವೇನು..? ಮೊಬೈಲ್ ಬಳಕೆ ಮಕ್ಕಳ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತದೆ..? ಅದರಿಂದಾಗುವ ಅನಾಹುತಗಳೇನು… ಇತ್ಯಾದಿ ವಿಷಯಗಳ ಮೇಲೆ “ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಸಿನಿಮಾ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಮಧುಚಂದ್ರ.
ಪೋಷಕರಿಗೇ ಚಳ್ಳೆ ಹಣ್ಣು ತಿನ್ನಿಸುವಂಥ ಮಕ್ಕಳು. ಅವರ ಕೈಗೆ ಸಿಗದಂತೆ ದೂರವಿಟ್ಟರೂ ಅಪ್ಪ-ಅಮ್ಮನನ್ನೇ ಯಾಮಾರಿಸಿ ಮೊಬೈಲ್ ಎಗರಿಸುವ ಚಿಣ್ಣರು. ಅತ್ತ ಕೆಲಸ, ಇತ್ತ ಮಕ್ಕಳ ಪೇಚಾಟದಿಂದ ಬೇಸತ್ತ ಪೋಷಕ ವರ್ಗ… ಒಂದಾ.., ಎರಡಾ..?
ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಅದು ಎಲ್ಲದಕ್ಕೂ ಅನ್ವಯ. ಇಲ್ಲಿ ಮಕ್ಕಳಿಗೆ ಮೊಬೈಲ್ ಮಾರಕವಾಗಿದೆ. ಅದರ ಅಮಲು ಅವರ ತಲೆಯೊಳಗೆ ಎಷ್ಟರಮಟ್ಟಿಗೆ ಏರಿದೆ ಎಂಬುದಕ್ಕೆ ಹಲವಾರು ಸನ್ನಿವೇಶಗಳು ಬಂದು ಹೋಗುತ್ತವೆ. ಕೊನೆಗೆ ಅದರಿಂದ ಎದುರಾಗುವ ಸಂಕಟಗಳೇನು ಎಂಬುದನ್ನು, ಪಾರಾಗಲು ಇರುವ ಮಾರ್ಗವೇನು ಎಂಬುದರತ್ತ ಒಂದಷ್ಟು ಕಥೆ, ಉಪಕಥೆಗಳ ಮುಖೇನ ನೋಡುಗರಿಗೆ ದಾಟಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
ಇದನ್ನೂ ಓದಿ:ಯುವತಿಗೆ ಅಶ್ಲೀಲ ಮೆಸೇಜ್; ಯುವಕನಿಗೆ ಥಳಿಸಿ ಊರಲ್ಲಿ ಅರೆಬೆತ್ತಲೆ ಮೆರವಣಿಗೆ!
ಸೃಜನ್ ಲೋಕೇಶ್ ಹಾಗೂ ಮೇಘನಾ ರಾಜ್ ಸಾಮಾನ್ಯ ಪೋಷಕರ ಪ್ರತಿನಿಧಿಯಂತೆ ಪಾತ್ರವೇ ತಾವಾಗಿದ್ದಾರೆ. ಮಕ್ಕಳೂ ಕೂಡ ತಾವು ಯಾರಿಗೇನು ಕಡಿಮೆಯಿಲ್ಲ ಎಂಬಂತೆ ಪೈಪೋಟಿಗೆ ಬಿದ್ದು ಅಭಿನಯಿಸಿದ್ದಾರೆ. ಸಿನಿಮಾ ಕಥಾಹಂದರ ಚೆನ್ನಾಗಿದ್ದರೂ, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸುವ ಸಾಧ್ಯತೆಯನ್ನು ಚಿತ್ರತಂಡ ಬಳಸಿಕೊಂಡಂತಿಲ್ಲ.
ಚಿತ್ರದ ಕೆಲವು ಲೋಪಗಳನ್ನು ಗುರುತಿಸುವ ಮೊದಲೇ ಕಾಮಿಡಿ ಹಾಗೂ ಸೆಂಟಿಮೆಂಟ್ ದೃಶ್ಯಗಳು ಅವುಗಳನ್ನು ಮರೆಮಾಚುವಂತೆ ಬಂದು ಹೋಗುತ್ತವೆ. ತಾಂತ್ರಿಕತೆಯ ವಿಚಾರಕ್ಕೂ ಇದೇ ಮಾತು ಅನ್ವಯ. ಒಟ್ಟಾರೆ ಈಗಿನ ಪೀಳಿಗೆಯ ಮಕ್ಕಳು ತಂತ್ರಜ್ಞಾನದ ದಾಸರಾಗುವುದನ್ನು ತಪ್ಪಿಸಲು ಈ ಸಿನಿಮಾದಲ್ಲಿ ಕೆಲವು ಟಿಪ್ಸ್ ಸಿಗುವುದಂತೂ ದಿಟ..!
ರವಿಪ್ರಕಾಶ್ ರೈ