ಮಧ್ಯಪ್ರದೇಶ: ಸೆಲ್ಫಿ ತೆಗೆದುಕೊಳ್ಳುತ್ತಿರುವ ವೇಳೆಯಲ್ಲಿ ಏಕಾಏಕಿ ನೀರು ಹರಿದುಬಂದ ಕಾರಣ ಇಬ್ಬರು ಯುವತಿಯರು ನದಿಯ ಮಧ್ಯಭಾಗದಲ್ಲಿ ಸಿಲುಕಿಕೊಂಡು ಭಯಭೀತರಾದ ಘಟನೆ ಚಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ.
ಜುನಾರ್ಡೋದಿಂದ ಆರು ಯುವತಿಯರ ತಂಡ ಚಿಂದ್ವಾರ ಜಿಲ್ಲೆಯಲ್ಲಿರುವ ಪೆಂಚ್ ನದಿ ದಡಕ್ಕೆ ಪ್ರವಾಸ ಕೈಗೊಂಡಿದ್ದರು. ಇವರಲ್ಲಿ ಮೇಘಾ ಜಾವ್ರೆ ಮತ್ತು ವಂದಾನಾ ತ್ರಿಪಾಠಿ ಎಂಬ ಯುವತಿಯರು ಸೆಲ್ಫಿ ಕ್ಲಿಕ್ಕಿಸಲೆಂದು ನದಿಯ ಮಧ್ಯಭಾಗಕ್ಕೆ ತೆರಳಿದ್ದ ವೇಳೆ ಏಕಾಏಕಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದ ದಡಕ್ಕೆ ಬರಲು ಸಾಧ್ಯವಾಗದೆ ನದಿಯಲ್ಲಿದ್ದ ಬಂಡೆಯೊಂದರ ಮೇಲೆ ನಿಲ್ಲುತ್ತಾರೆ ಮಾತ್ರವಲ್ಲದೆ ಭಯಾತಂಕದಿಂದ ಚೀರಾಡುತ್ತಾರೆ.
ಇದರಿಂದ ದಡದಲ್ಲಿದ್ದ ಉಳಿದ ನಾಲ್ವರು ಸ್ನೇಹಿತೆಯರು ಬೆಚ್ಚಿಬಿದ್ದು ಪೊಲೀಸರಿಗೆ ಕರೆಮಾಡುತ್ತಾರೆ. ಕೂಡಲೇ ಕಾರ್ಯಾಚರಣೆಗಿಳಿದ 12 ಪೊಲೀಸ್ ಸಿಬ್ಬಂದಿ, ಜಿಲ್ಲಾಡಳಿತ ಮತ್ತು ಸ್ಥಳೀಯರ ಸಹಕಾರದೊಂದಿಗೆ ಯುವತಿಯರನ್ನು ರಕ್ಷಿಸುತ್ತಾರೆ.
ಜಗತ್ತಿನಲ್ಲಿ ಹಲವರು ಏಕಾಏಕಿಯಾಗಿ ಪ್ರಸಿದ್ದರಾಗಲು ಅಪಾಯಕಾರಿಯಾದ ಸೆಲ್ಪಿ ತೆಗೆದುಕೊಳ್ಳಲು ಯತ್ನಿಸುತ್ತಾರೆ. 2018 ರಲ್ಲಿ ಕೂಡ ಯುವಕನೊಬ್ಬ ಹೈದರಾಬಾದ್ ನಲ್ಲಿ ಬರುತ್ತಿರುವ ರೈಲಿನ ಎದುರುಗಡೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದ.