Advertisement

ಹುಷಾರು, ಸೆಲ್ಫಿ ಸಾವಿಗೆ ಇನ್ಮುಂದೆ ವಿಮಾ ಪರಿಹಾರ ಸಿಗಲ್ಲ!

10:05 AM Dec 20, 2017 | |

ಬೆಂಗಳೂರು: ಡೇಂಜರ್‌ ಸ್ಪಾಟ್‌ಗಳಲ್ಲಿ ನಿಂತು “ಸೆಲ್ಫಿ’ ಕ್ಲಿಕ್ಕಿಸುವ ಮುನ್ನ ಒಮ್ಮೆ ಯೋಚಿಸಿ. ಯಾಕೆಂದರೆ, ಸೆಲ್ಫಿ ಸಾಹಸಗಳಿಂದಾಗುವ ಸಾವು-ನೋವು ಪ್ರಕರಣಗಳಿಗೆ ವಿಮಾ ಕಂಪನಿಗಳು ಪರಿಹಾರ ನೀಡದಿರಲು ಚಿಂತನೆ ನಡೆಸಿವೆ.

Advertisement

ಬೆಟ್ಟದ ತುದಿಯಲ್ಲಿ ನಿಂತು, ಜಲಾಶಯದ ಹಿನ್ನೀರಿನ ಬದಿಯಲ್ಲಿ ಮೈಮರೆತು ಸೆಲ್ಫಿ ತೆಗೆದು ಕೊಳ್ಳುವುದು, ನಂತರ ಅದನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಡುವುದು ಈಗ ಸರ್ವೇ ಸಾಮಾನ್ಯ. ಆದರೆ, ಇದರ ಬೆನ್ನಲ್ಲೇ ಸೆಲ್ಫಿ ಸಾವು- ನೋವುಗಳು ಕೂಡ ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಇಂತಹ ಗೀಳಿಗೆ ಪ್ರೋತ್ಸಾಹ ನೀಡದಿರಲು ಬಹುತೇಕ ವಿಮಾ ಕಂಪನಿಗಳು ಮುಂದಾಗಿವೆ. ಇತ್ತೀಚಿನ ದಿನಗಳಲ್ಲಿ ಸೆಲ್ಫಿ ಗೀಳು ವಿಪರೀತವಾಗಿದ್ದು, ಇದಕ್ಕೆ ಯುವಕರೇ ಹೆಚ್ಚಾಗಿ ಬಲಿ ಯಾಗುತ್ತಿದ್ದಾರೆ. ಕಳೆದೊಂದು ವರ್ಷದಲ್ಲಿ ದೇಶದಲ್ಲಿ 50ಕ್ಕೂ ಹೆಚ್ಚು ಸಾವುಗಳು ಈ ಸೆಲ್ಫಿಯಿಂದ ಸಂಭವಿ ಸಿವೆ. ಅಷ್ಟೇ ಅಲ್ಲ, ಹಲವು ಅನಾಹುತಗಳಿಗೂ ಇದು ಕಾರಣವಾಗಿದೆ. ಹಾಗಾಗಿ, ಇಂತಹ ಅಪಘಾತಗಳಲ್ಲಿ ಗಾಯಗೊಂಡವರು ಅಥವಾ ಸಾವನ್ನಪ್ಪಿದ ಕುಟುಂಬಗಳಿಗೆ ಪರಿಹಾರ ನೀಡದಿರಲು ವಿಮಾ ಕಂಪನಿಗಳು ಚಿಂತನೆ ನಡೆಸಿವೆ.

ವೆಬ್‌ಸೈಟ್‌ನಲ್ಲೇ ಪ್ರಕಟ: ಐಸಿಐಸಿಐ ಲೊಂಬಾರ್ಡ್‌ ಸ್ಟೇಟ್ಸ್‌, ಸೆಲ್ಫಿಯಿಂದ ಸಾವನ್ನಪ್ಪಿದವರು ಎಷ್ಟು ಎಂಬುದರ ಬಗ್ಗೆ ಇದುವರೆಗೆ ಅಧಿಕೃತವಾದ ಮಾಹಿತಿ ಇಲ್ಲ. ಆದರೆ, ದೇಶದಲ್ಲಿ ಕನಿಷ್ಠ 54 ಜನ ಸೆಲ್ಫಿ ತೆಗೆದುಕೊಳ್ಳುವಾಗ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ ಎಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಅಷ್ಟೇ ಅಲ್ಲ, ಸೆಲ್ಫಿಯಿಂದ ಸಂಭವಿಸುವ ಸಾವುಗಳಿಗೆ ಪರಿಹಾರ ನೀಡಲು ಕಂಪನಿಯು ನಿರಾಕರಿಸಿದೆ. ಅದೇ ರೀತಿ, ದಿ ಕಸ್ಟಮರ್‌ ಕೇರ್‌ ಆಫ್ ಟಾಟಾ ಎಐಜಿ ಜನರಲ್‌ ಇನ್ಷೊರನ್ಸ್‌ ಕಂಪನಿ, ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಸಂಭವಿಸುವ ಸಾವುಗಳು ಅಪಘಾತ ಎಂದು  ಪರಿಗಣಿಸಲಾಗುವುದಿಲ್ಲ. ಅಪಘಾತದಲ್ಲಿ ಸಾವುಗಳು ಸಂಭವಿಸಿದರೆ, ಕೂಲಂ ಕಷವಾಗಿ ತನಿಖೆ ನಡೆಸಿ, ನಂತರ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದೆ. 

ಪ್ರಾಧಿಕಾರದಲ್ಲಿಲ್ಲ ನಿಯಮ: ಆದರೆ, 2016ರ ಜುಲೈನಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ
(ಐಆರ್‌ಡಿಎಐ)ವು ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಅದರಲ್ಲಿ ಸೆಲ್ಫಿ ಅನಾಹುತಗಳ ಬಗ್ಗೆ ಎಲ್ಲಿಯೂ ಉಲ್ಲೇಖೀಸಿಲ್ಲ. ಸೆಲ್ಫಿ ವೇಳೆ ಸಂಭವಿಸುವ ಅಪಘಾತಗಳು, ಸಾವು-ನೋವು ಪ್ರಕರಣಗಳು ವಿಮೆ ವ್ಯಾಪ್ತಿಗೆ ಬರುವುದಿಲ್ಲ. ಬದಲಿಗೆ ಈ ಘಟನೆಗಳನ್ನು ನಿರ್ಲಕ್ಷ್ಯತೆ ಅಥವಾ ಅಜಾಗರೂಕತೆ ಎಂದು ಪರಿಗಣಿಸಲಾಗುತ್ತದೆ. ಅದೇನೇ ಇರಲಿ, ಇದುವರೆಗೆ ಕಂಪನಿಯಲ್ಲಿ “ಸೆಲ್ಫಿ ಸಾವು’ ಪ್ರಕರಣಗಳಿಗೆ ಪರಿಹಾರ ನೀಡಿದ ಬಗ್ಗೆ ವರದಿಯಾಗಿಲ್ಲ ಎಂದು ಯೂನಿವರ್ಸಲ್‌ ಸೊಂಪೊ ಜನರಲ್‌ ಇನ್ಷೊರನ್ಸ್‌ ಕಂಪೆನಿಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಮತ್ತು ವ್ಯವ  ಸ್ಥಾಪಕ ನಿರ್ದೇಶಕ ರಾಜೀವಕುಮಾರ್‌ ಹೇಳಿದ್ದಾರೆ. ಹೆಸರು ಹೇಳಲಿಚ್ಛಿಸದ ವಿಮಾ ಕಂಪನಿಯೊಂದರ ವಕ್ತಾರರು ಮಾತನಾಡಿ, ಸಾಹಸ ಚಟುವಟಿಕೆಗಳ ಸಂದರ್ಭದಲ್ಲಿ ಸಂಭವಿಸುವ ಸಾವು- ನೋವುಗಳಿಗೆ ಬಹುತೇಕ ಕಂಪನಿಗಳು ಪರಿಹಾರ ಅಥವಾ ವಿಮೆ ನೀಡುವುದಿಲ್ಲ. ಇನ್ನು ಸೆಲ್ಫಿ ವಿಚಾರಕ್ಕೆ ಬಂದರೆ, “ನಿರ್ಲಕ್ಷ್ಯತೆ’ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ. ಹಾಗಾಗಿ, ಪರಿಹಾರ ಸಿಗುವ ಸಾಧ್ಯತೆ ಕಡಿಮೆ ಎಂದರು.

ಆದಾಗ್ಯೂ ಇನ್ಷೊರನ್ಸ್‌ ಕಂಪನಿಯು ಅಪಘಾತ ಪ್ರಕರಣದಡಿ ಪರಿಹಾರ ನೀಡುವುದಾದರೆ, ಅಪಘಾತ ದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬದ ಸದಸ್ಯರು ಎಫ್ಐಆರ್‌ ಸೇರಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ. ಕಂಪನಿಯು ತನಿಖೆ  ನಡೆಸಿ, ಪರಿಹಾರ ಬಿಡುಗಡೆ ಮಾಡುತ್ತದೆ ಎಂದೂ ಅವರು ತಿಳಿಸಿದರು. 

Advertisement

ಸುರಕ್ಷಿತ ಸೆಲ್ಫಿಯ ಪಂಚ ಸೂತ್ರಗಳು!
ಸೆಲ್ಫಿ ಸ್ಟಿಕ್‌ ಬಳಸಬೇಕು
ಪೋಸು ಕೊಡುವಾಗ ಜಾಗದ ಬಗ್ಗೆ ಎಚ್ಚರ ಇರಲಿ
ಕಾಡುಪ್ರಾಣಿಗಳೊಂದಿಗೆ ಸೆಲ್ಫಿ ಬೇಡ
ವಾಹನ ಚಾಲನೆ ಮಾಡುವಾಗ ಅಥವಾ
ಚಾಲಕನೊಂದಿಗೆ ಸೆಲ್ಫಿ ಬೇಡ
ರೈಲ್ವೆ ಹಳಿಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ
ಸೆಲ್ಫಿ ತೆಗೆದುಕೊಳ್ಳುವಾಗ ‌ ಜಾಗೃತ

Advertisement

Udayavani is now on Telegram. Click here to join our channel and stay updated with the latest news.

Next