ಅದು ಗಾಲ್ಫ್ಕ್ಲಬ್‌ನ “360 ಡಿಗ್ರಿ’ ಸಭಾಂಗಣ. ಆಗಷ್ಟೇ ತುಂತುರು ಮಳೆ ಉದುರಿ ನಿಂತಿತ್ತು. ವಾತಾವರಣ ತಣ್ಣಗಿತ್ತು. ತಿಳಿಗಾಳಿ ಮತ್ತಷ್ಟು ಚಳಿಗೆ ಕಾರಣವಾಗಿತ್ತು. ಪುಟ್ಟ ವೇದಿಕೆಯ ಎಡ, ಬಲ ಚಿತ್ರದ ಸ್ಟಾಂಡಿಗಳಿದ್ದವು. ಆಗಾಗ ಬೀಸುವ ಗಾಳಿಗೆ ಆ ಸ್ಟಾಂಡಿ ನೆಲಕ್ಕೆ ಮುತ್ತಿಡುತ್ತಿದ್ದವು. ಅತ್ತ ಮೆಲ್ಲನೆ ವೆಸ್ಟ್ರನ್ ಸಂಗೀತದ ಸದ್ದು ಕೇಳುತ್ತಿತ್ತು. ಮೈಕ್ ಹಿಡಿದಿದ್ದ ನಿರೂಪಕಿ ಒಬ್ಬೊಬ್ಬರನ್ನೇ ವೇದಿಕೆಗೆ ಆಹ್ವಾನಿಸುತ್ತಿದ್ದರು. ಮಾತುಕತೆ ನಂತರ ಒಂದಲ್ಲಾ, ಎರಡಲ್ಲಾ ನಾಲ್ಕು ಟೀಸರ್‌ಗಳನ್ನು ತೋರಿಸಲಾಯಿತು. ಸಾಲದ್ದಕ್ಕೊಂದು ಹಾಡನ್ನೂ ಕೇಳಿಸಲಾಯಿತು. ಕೊನೆಗೆ ಆಡಿಯೋ ಸಿಡಿ ಬಿಡುಗಡೆ ಕ್ಷಣ ಬಂತು. ಎಲ್ಲರೂ ಆಡಿಯೋ ಸಿಡಿ ಹಿಡಿದು ಫೋಟೋಕ್ಕೊಂದು ಫೋಸ್ ಕೊಟ್ಟರು. ಇದಕ್ಕೆಲ್ಲಾ ಸಾಕ್ಷಿಯಾಗಿದ್ದು “ಸ್ವಾರ್ಥ ರತ್ನ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ.
ಅಂದು ವೇದಿಕೆಗೆ ಬಂದ ನಿರ್ದೇಶಕ ಅಶ್ವಿನ್ ಕೊಡಂಗಿ, “ಪ್ರತಿಯೊಬ್ಬರಲ್ಲೂ ಸ್ವಾರ್ಥ ಇದ್ದೇ ಇರುತ್ತೆ. ಅದು ವಿಪರೀತವಾದರೆ ಏನಾಗಬಹುದು ಎಂಬ ಕಾನ್ಸೆಪ್ಟ್ ಚಿತ್ರದಲ್ಲಿದೆ. ಇಲ್ಲಿ ಬೇಕಂತ ನಗಿಸಲು ಹೋಗಿಲ್ಲ. ವಿನಾಕಾರಣ ಹಾಸ್ಯ ತೂರಿಸಿಲ್ಲ. ಸನ್ನಿವೇಶಗಳೇ ನಗಿಸುತ್ತ ಹೋಗುತ್ತವೆ. ಇಲ್ಲಿ ಪ್ರತಿಯೊಬ್ಬರ ಸಾಥ್‌ನಿಂದಾಗಿ ಚಿತ್ರ ಚೆನ್ನಾಗಿ ಬಂದಿದೆ. ಫ್ಯಾಮಿಲಿ ಜೊತೆ ನೋಡಬಹುದಾದ ಮನರಂಜನೆಯ ಚಿತ್ರವಿದು. ಇಲ್ಲಿ ಸ್ವಾರ್ಥ ಸ್ವಭಾವದ ಹುಡುಗನ ಜೊತೆಗೆ ಇಬ್ಬರು ಹುಡುಗಿಯರಿದ್ದಾರೆ. ಮಾಮೂಲಿಗಿಂತ ವಿಭಿನ್ನವಾಗಿ ಕಾಣುವ ಪಾತ್ರಗಳವು. ಹಾಸ್ಯ, ರೊಮ್ಯಾನ್ಸ್ ಜೊತೆಗೆ ಸಾಗುತ್ತಲೇ ನಗಿಸುತ್ತ ಹೋಗುತ್ತವೆ. ಚಿತ್ರದಲ್ಲಿ “ನವರಸ’ ಮೀರಿ ಸ್ವಾರ್ಥ ರಸವೂ ಇದೆ. ಆ ಸ್ವಾರ್ಥ ರಸ ಏನು? ಎಂಬ ಪ್ರಶ್ನೆಗೆ ಸಿನಿಮಾ ನೋಡಿ’ ಅಂದರು ಅಶ್ವಿನ್ ಕೊಡಂಗಿ.
ಆದರ್ಶ್ ಚಿತ್ರದ ನಾಯಕ. ಸಿನಿಮಾ ರಂಗಕ್ಕೆ ಬರುವ ಮುನ್ನ ಸಾಕಷ್ಟು ತಯಾರಿ ಮಾಡಿಕೊಂಡೇ ಬಂದಿದ್ದಾರೆ. ಹಿಂದಿ, ತಮಿಳು ಚಿತ್ರದಲ್ಲಿ ಮಾಡಿರುವ ಆದರ್ಶ್, ಸ್ವಾರ್ಥ ಸ್ವಭಾವ ಹುಡುಗನಾಗಿ ಅವರಿಲ್ಲಿ ನಟಿಸಿದ್ದಾರಂತೆ. ಎಲ್ಲಾ ಪಾತ್ರ ನಿರ್ವಹಿಸುವುದು ಸುಲಭ. ಆದರೆ, ಸ್ವಾರ್ಥ ವ್ಯಕ್ತಿ ಅಂತ ಹೇಗೆ ತೋರ್ಪಡಿಸಿಕೊಳ್ಳಬೇಕೆಂಬ ಗೊಂದಲಕ್ಕೆ ನಿರ್ದೇಶಕರು ತೆರೆ ಎಳೆಯುತ್ತಿದ್ದರಂತೆ. ಇಲ್ಲಿ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಆದರ್ಶ್, ಸಿನಿಮಾ ನಿರ್ಮಾಣದ ಕಷ್ಟ ಅರಿತಿದ್ದಾರಂತೆ. ಈಗಿನ ಕಾಲಕ್ಕೆ ತಕ್ಕಂತಹ ಕಥೆ ಇಲ್ಲಿದೆ. ಭರಪೂರ ಮನರಂಜನೆಯೂ ಇದೆ. ಇಡೀ ಚಿತ್ರ ನಗುವಿನಲ್ಲೇ ಸಾಗಿಸುತ್ತದೆ’ ಎಂದು ವಿವರ ಕೊಡುತ್ತಾರೆ ಆದರ್ಶ್.
ಅಂದು ಜಯಂತ್ ಕಾಯ್ಕಿಣಿ ಚಿತ್ರತಂಡಕ್ಕೆ ಶುಭಕೋರಿದರು. “ಆಶ್ವಿನ್ ಕೊಡಂಗಿ ನನ್ನ ಸಹೋದರನಿದ್ದಂತೆ. ಇಷ್ಟು ವರ್ಷಗಳ ಕಾಲ ಸಿನಿಮಾಗಳಲ್ಲಿ ಕೆಲಸ ಮಾಡಿ, ಈಗ ನಿರ್ದೇಶಕನಾಗಿದ್ದಾನೆ. ಈ ಚಿತ್ರ ಗೆಲುವು ತಂದುಕೊಡಲಿ ‘ ಅಂತ ಹಾರೈಸಿದರು. ಸಂಗೀತ ನಿರ್ದೇಶಕ ಬಿ.ಜೆ. ಭರತ್, ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾಗಿ ಹೇಳಿಕೊಂಡರು. “ರೆಟ್ರೋ ಶೈಲಿ ಗೀತೆಯೂ ಇಲ್ಲಿದೆ. ಜಯಂತ್ ಕಾಯ್ಕಿಣಿ ಅವರು ಬರೆದ ಅದ್ಭುತ ಹಾಡೂ ಇದೆ. ಒಂದೊಳ್ಳೆಯ ಚಿತ್ರದಲ್ಲಿ ನಾನಿದ್ದೇನೆ ಅಂತ ಹೇಳಿಕೊಳ್ಳೋಕೆ ಹೆಮ್ಮೆ ಎನಿಸುತ್ತದೆ’ ಅಂದರು ಅವರು.
ಇಶಿತಾ, ವರ್ಷ ಚಿತ್ರದ ಇಬ್ಬರು ನಾಯಕಿಯರಲ್ಲೊಬ್ಬರು. ರಿಷಿಕಾಗೆ ಇದು ಮೊದಲ ಚಿತ್ರ. ಅವರಿಲ್ಲಿ ಕವನ ಎಂಬ ಪಾತ್ರ ಮಾಡಿದ್ದಾರಂತೆ. ಅದೊಂದು ರೀತಿ ಗಂಡುಬೀರಿ ಹುಡುಗಿ ಪಾತ್ರ. ಸೆಲ್ಫ್ಲೆಸ್ ಹುಡುಗಿಯೊಬ್ಬಳು ಸೆಲ್ಫಿಶ್ ಹುಡುಗನನ್ನು ಭೇಟಿ ಮಾಡಿದಾಗ ಏನೆಲ್ಲಾ ಆಗಿಹೋಗುತ್ತೆ ಅನ್ನೋದೇ ಕಥೆಯಂತೆ. ಇನ್ನು, ಸ್ನೇಹಾಸಿಂಗ್ ಕೂಡ ಪಾತ್ರ ಬಗ್ಗೆ ಖುಷಿಯಿಂದ ಹೇಳಿಕೊಂಡರು. ಅಮಿತ್ ಇಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಗಿಲ್ಲಿ ಮೂರು ಹೆಸರುಗಳಿವೆಯಂತೆ.