Advertisement

ಸ್ವ ಸಹಾಯ ಸಂಘ ಡಿಜಿಟಲೀಕರಣ

12:14 PM Mar 03, 2018 | |

ಬೀದರ: ಜಿಲ್ಲೆಯ 8000 ಸ್ವ ಸಹಾಯ ಸಂಘಗಳನ್ನು ಈ ಶಕ್ತಿ ಯೋಜನೆಯಡಿ ಡಿಜಿಟಲೀಕರಣಗೊಳಿಸಲಾಗುತ್ತಿದೆ ಎಂದು
ನಬಾರ್ಡ್‌ ಸಹಾಯಕ ಮಹಾಪ್ರಬಂಧಕ ಡಿ.ವಿ. ಜೋಶಿ ಹೇಳಿದರು.

Advertisement

ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಈ-ಶಕ್ತಿ ಯೋಜನೆ ಮತ್ತು ಡಿಜಿಟಲ್‌ ಇಂಡಿಯಾ ಪರಿಕಲ್ಪನೆ ಕುರಿತ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇದರಿಂದ ಸಂಘದ ಸದಸ್ಯರ ದ್ವಿ ಸದಸ್ಯತ್ವ, ಬಹುರೂಪದ ಸಾಲ ಪಡೆಯುವಿಕೆಗಳನ್ನು ತಡೆದು ಅವರಿಗೆ ಸುಲಭ ರೂಪದಲ್ಲಿ ವಿಶ್ವಾಸಾರ್ಹವಾಗಿ ಸಾಲ ನೀಡಲು ಅನುಕೂಲವಾಗಿತ್ತದೆ. ಕಾಗದರಹಿತ ರೂಪದಲ್ಲಿ ಸಾಲ ವಿತರಣೆ ನಡೆಯುತ್ತದೆ
ಎಂದರು.

ಬೀದರ ಸದ್ಯ ಈ ಯೋಜನೆಯಲ್ಲಿ ದೇಶದಲ್ಲಿ 3ನೇ ಸ್ಥಾನದಲ್ಲಿದ್ದು, ಉತ್ತಮ ಸಾಧನೆ ತೋರಿಸಿದೆ. ಸ್ವ ಸಹಾಯ ಗುಂಪುಗಳ ರಚನೆ ಮೂಲಕ ಮಹಿಳೆಯರನ್ನು ಸ್ವಾವಂಬಿಗಳನ್ನಾಗಿಸುವುದು ನಬಾರ್ಡ್‌ ಬ್ಯಾಂಕಿನ ಗುರಿಯಾಗಿದೆ ಎಂದರು.

ಕೇವಲ ಸಾಲ ಮಾತ್ರ ನೀಡದೆ ತರಬೇತಿಗಳ ಮೂಲಕ ಸದಸ್ಯರ ಸಾಮರ್ಥ್ಯ ವೃದ್ಧಿ ಮತ್ತು ಸಂಘದ ಆರ್ಥಿಕ ಶಿಸ್ತಿಗೆ ಕಾರಣವಾಗುವ ಹಲವು ಚಟುವಟಿಕೆಗಳನ್ನು ನಬಾರ್ಡ್‌ ಹಮ್ಮಿಕೊಂಡಿದೆ. “ಸ್ವ ಸಹಾಯದ ಮೂಲಕ ಸಮೃದ್ಧಿ ಆ ಮೂಲಕ ಸ್ವಾವಲಂಬನೆ’ ಎಂಬುದು ಧ್ಯೇಯವಾಗಿದೆ ಎಂದ ಅವರು, ಗುಂಪಿನ ಸದಸ್ಯರ ಅಗತ್ಯಕ್ಕೆ ಅನುಗುಣವಾಗಿ ಸಕಾಲದಲ್ಲಿ ಸಾಲ ಸಿಗುವಂತೆ ಮಾಡುವಲ್ಲಿ ಸ್ವಸಹಾಯ
ಸಂಘಗಳ ಆಂದೋಲನ ಯಶಕಂಡಿದ್ದು ಈಗ ಸಾಲ ನೀಡುವ ಮತ್ತು ಸಂಘಗಳ ವ್ಯವಸ್ಥಿತ ಕಾರ್ಯಾಚರಣೆಗಾಗಿ ಈ-ಶಕ್ತಿ
ಯೋಜನೆ ಆರಂಭಿಸಲಾಗಿದೆ. ಇದರಡಿ ದೇಶದ ಕೇವಲ ನೂರು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು ಕರ್ನಾಟಕದಲ್ಲಿ
ಕೇವಲ 5 ಜಿಲ್ಲೆಗಳಲ್ಲಿ ಅನುಷ್ಠಾನವಾಗುತ್ತಿದೆ. ಅದರಲ್ಲಿ ಬೀದರ ಕೂಡ ಒಳಗೊಂಡಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ಉಪ ಪ್ರಧಾನ ವ್ಯವಸ್ಥಾಪಕ ಅನಿಲ ಪಾಟೀಲ ಮಾತನಾಡಿ, ಯಾವುದೇ ಜಾತಿ ಭೇದ, ಲಿಂಗ ಭೇದ ಮೀರಿ ಒಂದಾಗಿ ಸಹಕರಿಸುವುದೇ ಸಹಕಾರ ವ್ಯವಸ್ಥೆಯ ವೈಶಿಷ್ಟ್ಯವಾಗಿದೆ. ವಿಶ್ವಾಸ ಮತ್ತು ಪ್ರಾಮಾಣಿಕತೆಗಳೇ ಸಹಕಾರಿ ಬ್ಯಾಂಕ್‌ಗಳ ಜೀವಾಳವಾಗಿದೆ. ಭಾವನಾತ್ಮಕ ಸಂಬಂಧಗಳೊಂದಿಗೆ ಆರ್ಥಿಕ ವ್ಯವಹಾರ ನಡೆಸುವುದು, ಗ್ರಾಹಕರೇ ಮಾಲೀಕರಾಗಿರವುದು, ಲಾಭದ ಜೊತೆಗೆ ಸೇವೆಯ ಗುರಿ ಹೊಂದಿರುವುದು ಸಹಕಾರಿ ಸಂಸ್ಥೆಗಳ ವಿಶೇಷತೆಯಾಗಿದೆ.

Advertisement

ಸ್ವ ಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ಕೇವಲ ಸಾಲ ವಿತರಿಸುವ ಕೆಲಸವನ್ನು ಮಾತ್ರ ಮಾಡದೇ ಕೃಷಿಕನಿಗೆ ಸಹಾಯಕವಾಗುವ ಹಲವು ಸೇವೆಗಳನ್ನು ಒದಗಿಸುವ ಮೂಲಕ ಅವರಿಗೆ ಆತ್ಮವಿಶ್ವಾಸ ಮೂಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ಹಲವು ಸಾಮಾಜಿಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ಸ್ವ ಸಹಾಯ ಗುಂಪಿನ ಸದಸ್ಯರಿಗೆ ತರಬೇತಿ ಅವಶ್ಯವಾಗಿದೆ ಎಂದು ಹೇಳಿದರು. 

ಚಿಟ್ಟಾದ ಪ್ರಗತಿಪರ ರೈತ ಜಾಫರ್‌ ಮಾತನಾಡಿ, ಆಧುನಿಕ ಕೃಷಿ ಬಗ್ಗೆ ತರಬೇತಿಗಳು ಬಹಳ ಪ್ರಯೋಜನ ನೀಡುತ್ತವೆ. ಇಂತಹ ತರಬೇತಿಗಳಿಗೆ ಹಾಜರಾಗುವ ಮೂಲಕ ಹಲವು ಉತ್ತಮ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡಿದ್ದೇನೆ. ಸಾವಯುವ ಕೃಷಿ ಮೂಲಕ ಬೆಳೆದ ತೊಗರಿ ಬೇಳೆಯನ್ನು 8000 ರೂ.ಗೆ ಕ್ವಿಂಟಲ್‌ನಂತೆ ಮಾರಾಟ ಮಾಡಿದ್ದೇನೆ ಎಂದು ಅನುಭವ ಹಂಚಿಕೊಂಡರು. ಡಿಸಿಸಿ ಬ್ಯಾಂಕಿನ ತಾಲೂಕು ಅಧಿಕಾರಿ ಮಲ್ಲಿಕಾರ್ಜುನ ಕಾಜಿ, ನಾಗೇಶ, ರಮೇಶ, ಶಂಕರ ಉಪಸ್ಥಿತರಿದ್ದರು. ಸಹಾರ್ದ ಸಂಸ್ಥೆಯ ನಿರ್ದೇಶಕ
ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನೀಲ ಮತ್ತು ತನ್ವೀರ ರಾಜಾ ನಿರ್ವಸಿದರು. ಸಂಪನ್ಮೂಲ ವ್ಯಕ್ತಿ ಎಸ್‌.ಜಿ. ಪಾಟೀಲ
ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next