ಬೆಂಗಳೂರು: ಮನೆ ಮಾಲೀಕರ ವಿರುದ್ಧ ಡೆತ್‌ನೋಟ್ ಬರೆದಿಟ್ಟು ಕೇರಳ ಮೂಲದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಲಕೇಶಿನಗರ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಕೇರಳ ಮೂಲದ ವರ್ಗೀಸ್ (43) ಆತ್ಮಹತ್ಯೆ ಮಾಡಿಕೊಂಡವರು. ಒಂದು ವರ್ಷದ ಹಿಂದೆ ಕೇರಳದಿಂದ ಬೆಂಗಳೂರಿಗೆ ಬಂದಿದ್ದ ವರ್ಗೀಸ್, ಗ್ರೀನ್ ಅವಿನ್ಯೂ ಅಪಾರ್ಟ್‌ಮೆಂಟ್‌ನ ಮಹಿಳೆಯೊಬ್ಬರ ಬಳಿ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದು, ಹೀಗಾಗಿ ಅದೇ ಅಪಾರ್ಟ್‌ಮೆಂಟ್‌ನ ಟೆರಾಸ್ ಮೇಲಿರುವ ಕೋಣೆಯಲ್ಲಿ ವಾಸವಾಗಿದ್ದ. ಈ ಮಧ್ಯೆ ಕೆಲ ದಿನಗಳ ಹಿಂದೆ ಮನೆ ಮಾಲಕಿ ಮನೆಯಲ್ಲಿ ಸುಮಾರು 250 ಗ್ರಾಂ ಚಿನ್ನಾಭರಣ ಕಳುವಾಗಿದ್ದು, ಅದನ್ನು ವರ್ಗೀಸ್ ಮತ್ತು ಮತ್ತೂಬ್ಬ ಕೆಲಸದಾಕೆ ಕಳವು ಮಾಡಿದ್ದಾರೆ ಎಂದು ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವರ್ಗೀಸ್‌ನನ್ನು ಕರೆಸಿ ವಿಚಾರಣೆ ನಡೆಸಿ, ಕಳುಹಿಸಿದ್ದರು.
ಈ ಘಟನೆಯಿಂದ ನೊಂದಿದ್ದ ವರ್ಗೀಸ್, ಆ.21ರಂದು ಟೆರಾಸ್‌ನಲ್ಲಿರುವ ತನ್ನ ಕೋಣೆಯ ಶೌಚಾಲಯದ ಕಿಟಕಿಗೆ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆತನ ಬಳಿ ಮಲೆಯಾಳಂ ಭಾಷೆಯಲ್ಲಿ ಬರೆದಿರುವ ಡೆತ್‌ನೋಟ್ ಪತ್ತೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮನೆ ಮಾಲೀಕರ ವಿರುದ್ಧ ಆರೋಪ:
ವರ್ಗೀಸ್ ಬಳಿ ಪತ್ತೆಯಾಗಿರುವ ಡೆತ್‌ನೋಟ್‌ನಲ್ಲಿ ಆತ ವಾಸವಾಗಿದ್ದ ಮನೆ ಹಾಗೂ ಕಾರು ಮಾಲಕಿ ವಿರುದ್ಧ ಆರೋಪಿಸಿದ್ದಾನೆ. “ಈ ಹಿಂದೆ ತನ್ನ ವಿರುದ್ಧ ಚಿನ್ನಾಭರಣ ಕಳವು ಮಾಡಿದ ಆರೋಪದಡಿ ಮಾಲೀಕರು ದೂರು ನೀಡಿದ್ದರು. ಆದರೆ, ನಾನು ಯಾವುದೇ ಕಳವು ಮಾಡಿಲ್ಲ. ಅದರಿಂದ ಪೊಲೀಸ್ ವಿಚಾರಣೆಗೆ ಒಳಗಾಗಿದ್ದಾನೆ. ಅದರಿಂದ ನೊಂದಿದ್ದು, “ನನ್ನ ಸಾವಿಗೆ ಮನೆ ಮಾಲೀಕರೇ ಕಾರಣ’ ಎಂದು ಉಲ್ಲೇಖೀಸಿದ್ದಾನೆ. ಈ ಸಂಬಂಧ ಆಕೆಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು. ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.