Advertisement

ಸೆಲ್ಕೋ -ಬಿವಿಟಿ ಬಂಧ: ಸೌರಶಕ್ತಿಯಿಂದ ಸ್ವ ಉದ್ಯೋಗ ಸೃಷ್ಟಿ

03:51 PM Oct 20, 2022 | Team Udayavani |

ಹೊನ್ನಾವರ: ಈ ಯುಗದ ಸಂಶೋಧನೆ ಸೌರಶಕ್ತಿ ಕೇವಲ ಬೆಳಕು, ಬಿಸಿ ನೀರಿಗೆ ಮಾತ್ರವಲ್ಲ, ಜನರಿಗೆ ಬದುಕು ಕಟ್ಟಿಕೊಳ್ಳಲು ಸಹಾಯವಾಗಬೇಕು ಎಂದು ಆಸೆಪಟ್ಟ ಸೆಲ್ಕೋದ ಅಧ್ಯಕ್ಷ, ಬಿವಿಟಿಯ ನಿರ್ದೇಶಕ ಹರೀಶ ಹಂದೆ ಮತ್ತು ಮಣಿಪಾಲದ ಅಶೋಕ ಪೈ ಮ್ಯಾನೇಜಿಂಗ್‌ ಟ್ರಸ್ಟಿಯಾಗಿರುವ ಭಾರತೀಯ ವಿಕಾಸ ಟ್ರಸ್ಟ್‌ ಜಂಟಿಯಾಗಿ ತಮ್ಮ ಸಂಸ್ಥೆಗಳ ಮುಖಾಂತರ ವಿದ್ಯುತ್‌ ಹಂಗಿಲ್ಲದೆ ಗ್ರಾಮೀಣ ಭಾಗದಲ್ಲಿ ಸ್ವ ಉದ್ಯೋಗ ಸೃಷ್ಟಿಸಿ ಸದ್ದಿಲ್ಲದೆ ಸಾಮಾಜಿಕ ಕ್ರಾಂತಿ ಮಾಡುತ್ತಿದ್ದಾರೆ.

Advertisement

ದಿ| ಟಿ.ಎ. ಪೈ ಮಣಿಪಾಲ ಇವರಿಂದ ಸ್ಥಾಪಿಸಲ್ಪಟ್ಟು ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ಭಾರತೀಯ ವಿಕಾಸ ಟ್ರಸ್ಟ್‌ ಗ್ರಾಮೀಣ ಯುವಕರಿಗೆ, ಮಹಿಳೆಯರಿಗೆ ಬ್ಯಾಂಕ್‌ಗಳ ಆರ್ಥಿಕ ನೆರವು ಕೊಡಿಸಿ, ತಾವು ಸಬ್ಸಿಡಿ ನೀಡಿ, ವಿದ್ಯುತ್‌ ಹಂಗಿಲ್ಲದೆ ಸ್ವ ಉದ್ಯೋಗ ಸೃಷ್ಟಿಸಿ ದೇಶದ ಪ್ರಗತಿಗೆ ಕಾರಣವಾಗಿದೆ. ಇದಕ್ಕಾಗಿ ಇಂಗ್ಲೆಂಡ್‌ನ‌ ಎಶ್ಡೆನ್ ಸಂಸ್ಥೆ 2021ರ ಎಶೆxನ್‌ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಸೆಲ್ಕೋ ಸೋಲಾರ್‌ನ ಕುಮಟಾ ವ್ಯವಸ್ಥಾಪಕ ದತ್ತಾರಾಮ್‌ ಭಟ್‌ ಮತ್ತು ಭಾರತೀಯ ವಿಕಾಸ ಟ್ರಸ್ಟ್‌ನ ಹಿರಿಯ ಯೋಜನಾ ವ್ಯವಸ್ಥಾಪಕ ಪ್ರಶಾಂತ ಭಾಗವತ್‌ ಉದಯವಾಣಿಗೆ ತಿಳಿಸಿದ್ದಾರೆ.

ಕಾರವಾರದಿಂದ ಭಟ್ಕಳದವರೆಗೆ ಇಂತಹ 22ಕ್ಕೂ ಹೆಚ್ಚು ಸ್ವ ಉದ್ಯೋಗಗಳಿಗೆ ಭಾರತೀಯ ವಿಕಾಸ ಟ್ರಸ್ಟ್‌ ಮತ್ತು ಸೆಲ್ಕೋ ಸೋಲಾರ್‌ ಜೊತೆಯಾಗಿ ಹಿಟ್ಟಿನ ಗಿರಣಿ, ಹೊಲಿಗೆ ಯಂತ್ರ, ಹಾಲುಕರೆಯುವ ಯಂತ್ರ, ಕಬ್ಬಿನ ರಸ ತೆಗೆಯುವ ಯಂತ್ರ, ಝೆರಾಕ್ಸ್‌ ಮಶಿನ್‌, ಮಜ್ಜಿಗೆ ಕಡೆಯುವ ಯಂತ್ರ, ಪ್ರಿಡ್ಜ್ ಮೊದಲಾದವುಗಳನ್ನು ನೀಡಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಈಶಾನ್ಯ ರಾಜ್ಯಗಳಾದ ಆಸ್ಸಾಂ, ಮಣಿಪುರ, ಮೇಘಾಲಯಗಳಲ್ಲಿ ಇವುಗಳನ್ನು ಅನುಷ್ಠಾನ ಮಾಡಲಾಗಿದೆ. ಜನರಿಗೆ ಯಾವ ಉಪಕರಣ ಬೇಕೋ ಅದನ್ನು ಸಿದ್ಧಪಡಿಸಿಕೊಡಲಾಗಿದೆ. ಕುಂಬಾರನ ಚಕ್ರ, ಪವರ್‌ಲೂಮ್‌ ಮೊದಲಾದ ಯಂತ್ರಗಳನ್ನು ಪೂರೈಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ಹೊಲಿಗೆಯಂತ್ರಗಳು ಮತ್ತು ಬಟ್ಟೆಯ ಮೇಲೆ ಡಿಸೈನ್‌ ಮಾಡುವ ಯಂತ್ರಗಳು ಜನರ ಆಯ್ಕೆ. ಉತ್ತರ ಕನ್ನಡದಲ್ಲಿ ಹಿಟ್ಟಿನ ಗಿರಣಿ, ಕಬ್ಬಿನ ಹಾಲು ತೆಗೆಯುವ ಯಂತ್ರಗಳು ಮೆಚ್ಚುಗೆ ಪಡೆದಿವೆ. ಬ್ಯಾಂಕ್‌ಗಳಿಂದ ಸಾಲ ಕೊಡಿಸುವ, ಸಬ್ಸಿಡಿ ಮೊತ್ತವನ್ನು ಬ್ಯಾಂಕ್‌ಗೆ ಜಮಾ ಮಾಡುವ ಉಪಕರಣಗಳನ್ನು ಪೂರೈಸುವ ಕೆಲಸಗಳನ್ನು ಈ ಎರಡು ಸಂಸ್ಥೆಗಳು ಯಶಸ್ವಿಯಾಗಿ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇಂಧನ ಮೂಲಗಳು ಕಡಿಮೆಯಾಗಿ ಬೆಲೆ ಹೆಚ್ಚಾಗಿ ಉತ್ಪಾದಕರು ಸಂಕಷ್ಟದಲ್ಲಿ ಸಿಲುಕದಿರಲು ಹೆಚ್ಚಾಗಿ ಸೌರಶಕ್ತಿಯ ಉಪಕರಣಗಳನ್ನು ಬಳಸಬೇಕು, ನಮ್ಮ ಸಂಸ್ಥೆಗಳು ಎಲ್ಲ ರೀತಿಯ ಮಾರ್ಗದರ್ಶನ ಮತ್ತು ಸಹಕಾರ ನೀಡಲು ಸಿದ್ಧವಿದೆ ಎಂದು ಅವರು ಹೇಳಿದ್ದಾರೆ. ಆಸಕ್ತರು ವಿವರಗಳಿಗೆ ಪ್ರಶಾಂತ ಭಾಗ್ವತ್‌ ಮೊ: 9880117376, ದತ್ತಾರಾಮ್‌ ಭಟ್‌ – 9449360181

„ಜೀಯು

Advertisement
Advertisement

Udayavani is now on Telegram. Click here to join our channel and stay updated with the latest news.

Next