Advertisement

ಗ್ರಾಮೀಣ ಮಹಿಳೆಯರನ್ನು ಸದೃಢಗೊಳಿಸಿದ ಸಂಜೀವಿನಿ

04:04 PM Jun 26, 2022 | Team Udayavani |

ಬೆಳ್ತಂಗಡಿ: ರಾಜ್ಯದ ಪ್ರತೀ ತಾಲೂಕಿನಲ್ಲಿ ಗ್ರಾಮೀಣ ಮಹಿಳೆಯರಿಗಾಗಿ ಸಮುದಾಯ ಸಂಸ್ಥೆಗಳ ಮೂಲಕ ಸ್ವ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಸಲುವಾಗಿ ರಾಜ್ಯ ಸರಕಾರವು ಸಂಜೀವಿನಿ ಎನ್ನುವ ಹೆಸರಿನಿಂದ ಅನುಷ್ಠಾನಗೊಳಿಸಿದ ಒಕ್ಕೂಟ ವ್ಯವಸ್ಥೆಯು ಇಂದು ಉಭಯ ಜಿಲ್ಲೆಯಲ್ಲಿ ಸದ್ದಿಲ್ಲದೆ ಕ್ರಾಂತಿಕಾರಿ ಹೆಜ್ಜೆಯನ್ನಿರಿಸಿದೆ.

Advertisement

ರಾಜ್ಯದಲ್ಲಿ ಈ ಅಭಿಯಾನವನ್ನು ಕಾರ್ಯಗತಗೊಳಿಸಲು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಕೆಎಸ್‌ಆರ್‌ ಎಲ್‌ಪಿಎಸ್‌)ಯನ್ನು ಸೊಸೈಟಿ ರಿಜಿಸ್ಟ್ರೇಷನ್‌ ಆ್ಯಕ್ಟ್- 1961ರಡಿ ನೋಂದಣಿ ಮಾಡಿದ್ದು, ಈ ಮೂಲಕ ಸಾಲ ಸೌಲಭ್ಯ ವಿತರಿಸಿ ಸ್ವ ಉದ್ಯೋಗ ಸೃಷ್ಟಿಸುವಲ್ಲಿ ಮಹತ್ತರ ಕೊಡುಗೆ ನೀಡಿದೆ. ಇದೀಗ ಬೆಳ್ತಂಗಡಿ ತಾಲೂಕಿನ ನೇತ್ರಾವತಿ ಒಕ್ಕೂಟಕ್ಕೆ 2016-17ರಿಂದ ಈವರೆಗೆ ಗರಿಷ್ಠ 6.80 ಕೋ.ರೂ. ಅನುದಾನ ಸರಕಾರದಿಂದ ಬಿಡುಗಡೆಯಾಗುವ ಮೂಲಕ ದಾಖಲೆ ಸೃಷ್ಟಿಸಿದೆ.

ಉಳಿದಂತೆ ಬಂಟ್ವಾಳ ತಾಲೂಕಿನ ಒಕ್ಕೂಟಕ್ಕೆ 5.69ಕೋ.ರೂ. ಬಿಡು ಗಡೆಯಾಗಿದ್ದು, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು 2.65 ಕೋ.ರೂ., ಕುಂದಾಪುರ 1.69 ಕೋ.ರೂ. ಪಡೆದಿದೆ. ಈಗಾಗಲೇ ಕೇರಳದಲ್ಲಿ ಕುಟುಂಬಶ್ರೀ, ಆಂಧ್ರಪ್ರದೇಶದಲ್ಲಿ ಸರ್ಫ್‌ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಸಂಜೀವಿನಿ ಒಕ್ಕೂಟವು ಮಹಿಳಾ ಜೀವನ ಭದ್ರತೆಗೊಂದು ಅಕ್ಷಯಪಾತ್ರೆಯಾಗಿದೆ.

1,167 ಸ್ವಸಹಾಯ ಸಂಘಗಳು

ಬೆಳ್ತಂಗಡಿ ತಾಲೂಕು ಮಟ್ಟದ 48 ಗ್ರಾಮ ಪಂಚಾಯತ್‌ಗಳಲ್ಲಿ 48 ಒಕ್ಕೂಟ ರಚನೆಯಾಗಿವೆ. ಇದರ ಕೆಳಗಡೆ 196 ವಾರ್ಡ್‌ ಒಕ್ಕೂಟಗಳಿವೆ. ತಾಲೂಕಿನಲ್ಲಿ 1,167 ಸ್ವಸಹಾಯ ಸಂಘಗಳು ಎನ್‌. ಆರ್‌.ಎಲ್‌. ಎಂ.ನಡಿ ನೋಂದಣಿಯಾಗಿವೆ. ಪ್ರತೀ ಒಕ್ಕೂಟಕ್ಕೆ ಸ್ವಸಹಾಯ ಸಂಘ ನೋಂದಣಿಯಾದ ಆಧಾರದಲ್ಲಿ ಸರಕಾರದಿಂದ ಸಮುದಾಯ ಬಂಡವಾಳ ನಿಧಿ ಬಿಡುಗಡೆಯಾಗುತ್ತದೆ. ಅತೀ ಹೆಚ್ಚು ಎಂದರೆ ಗರಿಷ್ಠ 100ರ ಆಸುಪಾಸು ಸಂಘ ರಚಿಸಿದ ಒಕ್ಕೂಟಕ್ಕೆ ಸರಕಾರದಿಂದ 30 ಲಕ್ಷ ರೂ. ಬಿಡುಗಡೆಯಾಗುತ್ತದೆ. ಚಾರ್ಮಾಡಿಯ ತ್ರಿವರ್ಣ ಸಂಜೀವಿನಿ ಮಹಿಳಾ ಸಂಘ ಈ ಸಾಧನೆ ಮಾಡಿದೆ. ಇದರಡಿ ಬರೋಬ್ಬರಿ 95 ಸ್ವಸಹಾಯ (ಪ್ರತೀ ಸಂಘದಲ್ಲಿ ಕನಿಷ್ಠ 10 ಮಂದಿ, ಗರಿಷ್ಠ 20 ಮಂದಿ ) ಸಂಘಗಳಿವೆ. ಇನ್ನುಳಿದಂತೆ ಉಜಿರೆ ಒಕ್ಕೂಟವೂ 95 ಸ್ವಸಹಾಯ ಸಂಘ ರಚಿಸಿರುವುದು ಈವರೆಗಿನ ಉಭಯ ಜಿಲ್ಲೆಯ ದಾಖಲೆಯಾಗಿದೆ.

Advertisement

ತಾಲೂಕಿನಾದ್ಯಂತ ಪ್ರತೀ ಒಕ್ಕೂಟಕ್ಕೆ ಬಿಡು ಗಡೆಯಾದ ಸಮುದಾಯ ಬಂಡವಾಳ ನಿಧಿಯಿಂದ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಬೇರೆ ಬೇರೆ ಸ್ವ ಉದ್ಯೋಗ ನಡೆಸಲು ಸರಕಾರದ ನಿಯಮಾನುಸಾರವಾಗಿ ಸಾಲ ನೀಡಲಾಗುತ್ತದೆ. ಎಲ್ಲ ಸಂಘಕ್ಕೆ 1.50 ಲಕ್ಷ ರೂ. ಪ್ರಥಮ ಹಂತದಲ್ಲಿ ಸಾಲ ನೀಡಲು ಆದೇಶ ಸರಕಾರ ನೀಡಿದೆ.

ಸ್ವೋದ್ಯೋಗಕ್ಕೊಂದು ಶಕ್ತಿ

ತಣ್ಣೀರುಪಂಥದಲ್ಲಿ ಸುಗಮ ಸಂಜೀವಿನಿ ಒಕ್ಕೂಟದ ಲಕ್ಷ್ಮೀ ಸ್ವಸಹಾಯ ಸಂಘದಿಂದ ಹಡಿಲು ಗದ್ದೆಯಲ್ಲಿ ಭತ್ತದ ನಾಟಿ, ಬೆಳಾಲು ಕಸ್ತೂರಿ ಬಾೖ ಸ್ವಸಹಾಯ ಸಂಘದ ಸದಸ್ಯರಿಂದ ತರಕಾರಿ ಬೆಳೆ, ಉಜಿರೆಯ ಪ್ರೇರಣಾ ಸಂಜೀವಿನಿ ಒಕ್ಕೂಟದ ಮೂಲಕ ಉಜಿರೆ ಗ್ರಾ.ಪಂ. ಸಹಕಾರದೊಂದಿಗೆ ಗ್ರಾಮೀಣ ರೈತ ಸಂತೆ ಮಾರುಕಟ್ಟೆ, ಧರ್ಮಸ್ಥಳದ ಮಾನ್ವಿಶ್ರೀ ಮಹಿಳಾ ಒಕ್ಕೂಟ ಮುಖೇನ ವಾರದ ಮೂರುದಿನ ಹಳ್ಳಿ ಸಂತೆ, ಲಾೖಲ ಸಮಗ್ರ ಸಂಜೀವಿನಿ ಒಕ್ಕೂಟ ಮೂಲಕ ಸ್ನೇಹ ಶ್ರೀ ಸಂಜೀವಿನಿ ಗುಂಪಿನಿಂದ ಮೀನಿನಿಂದ ವಿವಿಧ ಬಗೆಯ ಆಹಾರ ಉತ್ಪನ್ನ ಮಾಡಿ ಮಾರಾಟ ಮಾಡುತ್ತಿರುವುದು ಮಾದರಿ ಎಂದು ತಾ.ಪಂ. ಇ.ಒ. ಕುಸುಮಾಧರ್‌ ಬಿ. ತಿಳಿಸಿದ್ದಾರೆ.

ಬಡ್ಡಿ ಇಲ್ಲದೆ ಸಾಲ: ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಒಕ್ಕೂಟ ರಚಿಸಲು ಅವಕಾಶ ಕಲ್ಪಿಸಲಾಗಿದೆ. ಈ ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಸಾಧನೆ ಉತ್ತಮವಾಗಿದೆ. ಸರಕಾರವು ಯಾವುದೇ ದಾಖಲೆಗಳಿಲ್ಲದೆ, ಒಕ್ಕೂಟಕ್ಕೆ ಶೇ. 9ರಡಿ ಸಾಲ ವಿತರಿಸುತ್ತಿದ್ದು, ಅದರಡಿ ವ್ಯವಹರಿಸುವ ಪ್ರತೀ ಸ್ವಸಹಾಯ ಸಂಘದ ಸದಸ್ಯರಿಗೆ ಶೇ. 12ರಲ್ಲಿ ಸ್ವ ಉದ್ಯೋಗಕ್ಕೆ ಸಾಲ ವಿತರಿಸಲಾಗಿದೆ. ಉಳಿಕೆ ಶೇ. 3 ಲಾಭಾಂಶ ಸಂಘಕ್ಕೆ ಸೇರಲಿದೆ. ಸರಕಾರ ಬಡ್ಡಿರಹಿತ ಸಾಲನೀಡುವ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕತೆಯನ್ನು ವೃದ್ಧಿಸುವಲ್ಲಿ ಮಹತ್ತರ ಕೊಡುಗೆ ನೀಡಿದೆ.-ಡಾ| ಕುಮಾರ್‌, ಮುಖ್ಯಕಾರ್ಯನಿರ್ವಹಣಾಧಿಕಾರಿ, ದ.ಕ.ಜಿ.ಪಂ.

„ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next