ಜೇವರ್ಗಿ: ಸ್ಪರ್ಧಾ ಜಗತ್ತನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಪರಿಶ್ರಮದ ಜತೆಗೆ ಆತ್ಮವಿಶ್ವಾಸವೂ ಮುಖ್ಯ ಎಂದು ಕಲಬುರಗಿ ಶರಣಬಸವೇಶ್ವರ ಸಂಸ್ಥಾನ ಮಠದ ಪೀಠಾಧಿ ಪತಿ ಪೂಜ್ಯ ಡಾ| ಶರಣಬಸಪ್ಪ ಅಪ್ಪ ಹೇಳಿದರು.
ಪಟ್ಟಣದ ಶಹಾಪುರ ರಸ್ತೆ ಈಶ್ವರ ಬಡಾವಣೆಯಲ್ಲಿನ ಜ್ಞಾನನಿಧಿ ವಿದ್ಯಾಟ್ರಸ್ಟ್‌ನ ಮಾತೇಶ್ವರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಪ್ರತಿ ದಿನವೂ ಸ್ಪರ್ಧೆ ಇದ್ದಂತೆ. ಅದನ್ನು ಮೆಟ್ಟಿ ನಿಲ್ಲಲು ಶಿಸ್ತು ಮತ್ತು ಸಂಯಮ ಅಳವಡಿಸಿಕೊಳ್ಳಬೇಕು. ಆಟ, ಪಾಠದ ಜತೆ ಜೀವನದ ಮೌಲ್ಯ ಕಲಿಯಬೇಕು. ಎಸ್‌ಎಸ್ ಎಲ್‌ಸಿ ಮುಗಿದ ನಂತರ ತಮ್ಮ ಭವಿಷ್ಯ ನಿರ್ಧಾರ ಮಾಡುವ ಘಟ್ಟ ಎದುರಾಗುತ್ತದೆ. ಅಂದು ಉತ್ತಮ ಮಾರ್ಗ ಆಯ್ದುಕೊಳ್ಳಬೇಕು. ಮಕ್ಕಳಿಗಾಗಿ ಪೋಷಕರು ಟಿವಿ ಧಾರಾವಾಹಿ ತ್ಯಜಿಸಬೇಕು. ಅವರ ಭವಿಷ್ಯಕ್ಕಾಗಿ ಹಲವಾರು ತ್ಯಾಗ ಮಾಡಬೇಕಾಗುವ ಪರಿಸ್ಥಿತಿ ಪೋಷಕರದ್ದು, ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಪೋಷಕರು ಹೇಳಿಕೊಡಬೇಕಿದೆ.
ಮಕ್ಕಳು ತಪ್ಪು ಮಾಡಿದ ವೇಳೆ ಪ್ರೀತಿ, ವಿಶ್ವಾಸದಿಂದ ತಿಳಿಹೇಳಬೇಕು. ಅವರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಮಾತು ಆಡುವ ಮೂಲಕ ಉನ್ನತ ಸಾಧನೆ ಮಾಡಲು ಪ್ರೇರಿಪಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ಹಿಂದುಳಿದ ಭಾಗದಲ್ಲಿ ಬಡ, ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಮಾತೇಶ್ವರಿ ಶಿಕ್ಷಣ ಸಂಸ್ಥೆ ಕಾರ್ಯ ಶ್ಲಾಘನೀಯ. ಬರುವ ದಿನಗಳಲ್ಲಿ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.
ಸಂಸ್ಥೆ ಅಧ್ಯಕ್ಷ ಶರಣಗೌಡ ಪಾಟೀಲ ಕುರಳಗೇರಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗಭೂಷಣ ಪಡಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುಮಾ ಪಡಶೆಟ್ಟಿ ನೇತೃತ್ವ ವಹಿಸಿದ್ದರು. ಜಿಪಂ ಸದಸ್ಯ ಶಿವರಾಜ ಪಾಟೀಲ ರದ್ದೇವಾಡಗಿ, ಅಶೋಕ ಸಾಹು ಗೋಗಿ, ರಮೇಶಬಾಬು ವಕೀಲ, ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ದು ಪಾಟೀಲ, ಅಶೋಕಗೌಡ ಪಾಟೀಲ ಅವರಾದ, ಶರಣು ರಾಂಪುರ, ಸಿದ್ದು ಕಮಲಾಪುರ, ಸುನೀಲಗೌಡ ಕುಳಗೇರಿ, ಸಂಗೀತಾ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಿಕ್ಷಕ ಬಸವರಾಜ ಕಲ್ಲಾ ಸ್ವಾಗತಿಸಿದರು. ಶಿಕ್ಷಕರ ಪ್ರತಿಭಾ ಪರಿಷತ್ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಚಿಂಚೋಳಿ ನಿರೂಪಿಸಿದರು. ಕೇಂದ್ರಿಯ ವಿವಿ ಪ್ರಾಧ್ಯಾಪಕ ಡಾ| ಗಣಪತಿ ಸಿನ್ನೂರ ವಂದಿಸಿದರು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.