Advertisement

ಅಪರಾಧ ನಿಯಂತ್ರಿಸಲು ಸ್ವಯಂ ಜಾಗೃತಿ ಅತ್ಯಗತ್ಯ

04:20 AM Dec 18, 2018 | Team Udayavani |

ಸವಣೂರು: ಅಪರಾಧಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗುವುದು ಅವಶ್ಯ. ಪ್ರತಿಯೊಂದು ವಿಚಾರದಲ್ಲೂ ಮುಂಜಾಗರೂಕತೆ ವಹಿಸುವುದು ಮುಖ್ಯ ಎಂದು ಬೆಳ್ಳಾರೆ ಠಾಣಾ ಉಪನಿರೀಕ್ಷಕ ಡಿ.ಎನ್‌. ಈರಯ್ಯ ಹೇಳಿದರು. ಅವರು ಸೋಮವಾರ ಸವಣೂರು ವಿನಾಯಕ ಸಭಾಭವನದಲ್ಲಿ ದ.ಕ. ಜಿಲ್ಲಾ ಪೊಲೀಸ್‌, ಬೆಳ್ಳಾರೆ ಪೊಲೀಸ್‌ ಠಾಣೆ ವತಿಯಿಂದ ನಡೆಯುತ್ತಿರುವ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದರು.

Advertisement

ಮನೆ ಬಿಟ್ಟು ದೂರ ಹೋಗುತ್ತಿರುವ ಸಂದರ್ಭದಲ್ಲಿ ಪಕ್ಕದ ಮನೆ ಹಾಗೂ ಬೀಟ್‌ ಪೊಲೀಸರಿಗೆ ಮಾಹಿತಿ ನೀಡಬೇಕು. ಹೊಸ ತಂತ್ರಜ್ಞಾನದ ಲಾಕ್‌ಗಳನ್ನು ಬಳಸಬೇಕು. ಬ್ಯಾಂಕ್‌ ಅಧಿಕಾರಿಗಳೆಂದು ಕರೆಮಾಡಿ ಪಾಸ್‌ವರ್ಡ್‌ಗಳನ್ನು ಪಡೆದುಕೊಂಡು ಖಾತೆಗೆ ಕನ್ನ ಹಾಕಿ ವಂಚಿಸುವ ಜಾಲವಿದ್ದು, ಯಾವುದೇ ಕಾರಣಕ್ಕೂ ಯಾರಿಗೂ ಪಾಸ್‌ವರ್ಡ್‌ಗಳನ್ನು ನೀಡಬಾರದು. ಎಲ್ಲರೂ ತಮ್ಮ ರಕ್ಷಣೆಯ ಕುರಿತು ಸ್ವಯಂ ಜಾಗರೂಕತೆ ವಹಿಸುವುದು ಆವಶ್ಯ. ಕಾನೂನು ಪಾಲನೆ ಹಾಗೂ ನಿಯಮಗಳನ್ನು ಪಾಲಿಸಿದರೆ ಅವಘಡಗಳನ್ನು ತಪ್ಪಿಸಬಹುದು ಎಂದರು.

ಸಾರ್ವಜನಿಕರ ಸಹಕಾರ ಮುಖ್ಯ
ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿಮುಳ್ಳು ಮಾತನಾಡಿ, ಬೆಳ್ಳಾರೆ ಠಾಣೆ ಆದ ಬಳಿಕ ಅಪರಾಧ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿವೆ. ಆದರೂ ಸೋಲಾರ್‌ ಕಳ್ಳತನ ಪ್ರಕರಣ ನಡೆದಿದೆ. ಇಲಾಖೆಯ ಜತೆ ಸಾರ್ವಜನಿಕರೂ ಸಹಕಾರ ನೀಡುವುದರಿಂದ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಸಾಧ್ಯ ಎಂದರು. ಸವಣೂರು ಪ.ಪೂ. ಕಾಲೇಜಿನ ಉಪನ್ಯಾಸಕ ಬಿ.ವಿ. ಸೂರ್ಯನಾರಾಯಣ, ಪ್ರೌಢಶಾಲಾ ಶಿಕ್ಷಕ ರಘು ಬಿ.ಆರ್‌. ಮಾತನಾಡಿದರು.

ಸಭೆಗೂ ಮುನ್ನ ಸವಣೂರು ಪ.ಪೂ. ಕಾಲೇಜು ಬಳಿಯಿಂದ ಚಾಪಳ್ಳ ಮಸೀದಿಯ ವರೆಗೆ ಸವಣೂರು ಪ.ಪೂ. ಕಾಲೇಜು, ಪ್ರೌಢಶಾಲೆ, ಸ.ಹಿ.ಪ್ರಾ. ಶಾಲೆಯ ಒಟ್ಟು 400 ಮಕ್ಕಳಿಂದ ಅಪರಾಧ ತಡೆ ಜಾಗೃತಿಯ ಫಲಕಗಳನ್ನು ಹಿಡಿದು ಜಾಥಾ ನಡೆಯಿತು. ಮೂರು ಸಂಸ್ಥೆಗಳ ಶಿಕ್ಷಕರು ಪಾಲ್ಗೊಂಡಿದ್ದರು.
ಹೆಡ್‌ ಕಾನ್‌ಸ್ಟೆಬಲ್‌ ಬಾಲಕೃಷ್ಣ ಕೊಪ್ಪ, ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳಾದ ಪ್ರವೀಣ್‌ ಬಾರ್ಕಿ, ಮಂಜುನಾಥ ಎಚ್‌.ಎಸ್‌., ಮಂಜುನಾಥ, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಸಚಿನ್‌ ಭಂಡಾರಿ ಸಹಕರಿಸಿದರು. ಸವಣೂರು ಬೀಟ್‌ ಪೊಲೀಸ್‌ ಕೃಷ್ಣಪ್ಪ ಸ್ವಾಗತಿಸಿ, ಪೊಲೀಸ್‌ ಹಾಲೇಶ್‌ ಎಚ್‌. ಗೌಡ್ರ ವಂದಿಸಿದರು.

ಕೊಳ್ತಿಗೆ ದುರಂತ: ಕಂಬನಿ
ಕೊಳ್ತಿಗೆಯಲ್ಲಿ ಇಬ್ಬರು ಮಕ್ಕಳು ತೊಟ್ಟಿಯ ನೀರಿಗೆ ಬಿದ್ದು ಮೃತಪಟ್ಟಿ ರುವುದನ್ನು ಪ್ರಸ್ತಾವಿಸಿದ ಪಿಎಸ್‌ಐ ಈರಯ್ಯ ಅವರು, ಕೆಲ ದಿನಗಳ ಹಿಂದೆ ಪೆರ್ಲಂಪಾಡಿ ಶಾಲಾ ವಾರ್ಷಿಕೋತ್ಸವ ಸಂಧರ್ಭದಲ್ಲಿ ಶಾಲಾ ನಾಯಕಿ ಪ್ರಜ್ಞಾ ಅವಳಿಂದ ಧ್ವಜವಂದನೆ ಸ್ವೀಕರಿಸಿದ್ದು ತನ್ನ ವೃತ್ತಿ ಜೀವನದಲ್ಲಿ ಪಡೆದ ಶಿಸ್ತಿನ ವಂದನೆಯಾಗಿತ್ತು. ಆಕೆ ಧೈರ್ಯಶಾಲಿಯಾಗಿದ್ದಳು. ಉಜ್ವಲ ಭವಿಷ್ಯ ಹೊಂದಬೇಕಿದ್ದ ಇಬ್ಬರು ಪುಟಾಣಿಗಳು ಜೀವ ಕಳೆದುಕೊಂಡಿದ್ದು ಬೇಸರದ ವಿಚಾರ ಎಂದು ಕಂಬನಿ ಮಿಡಿದರು. ವಿದ್ಯಾರ್ಥಿಗಳು ಯಾವುದೇ ಕೆಲಸಕ್ಕೂ ತೊಡಗುವ ಮುನ್ನ ಮುನ್ನೆಚ್ಚರಿಕೆ ವಹಿಸಬೇಕು. ಕೆರೆ, ಬಾವಿ, ಹೊಳೆ ಸಹಿತ ಅಪಾಯಕಾರಿ ಸ್ಥಳಗಳಿಗೆ ಹಿರಿಯರು ಜತೆಗಿಲ್ಲದೆ ಹೋಗಬಾರದು. ಅಜಾಗರೂಕತೆ ಹಾಗೂ ಸಾಹಸ ಪ್ರವೃತ್ತಿ ಕೆಲವೊಮ್ಮೆ ಪ್ರಾಣಕ್ಕೆ ಎರವಾಗುತ್ತಗೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next