Advertisement

ಪ್ರೇಕ್ಷಕರನ್ನು ಹಿಡಿದಿಟ್ಟ ಆತ್ಮಾರ್ಪಣಂ 

06:00 AM Sep 21, 2018 | |

ಉಡುಪಿ ಸಂಸ್ಕೃತ ಕಾಲೇಜಿನ 114ನೇ ವಾರ್ಷಿಕೋತ್ಸವದ ಅಂಗವಾಗಿ ರಾಜಾಂಗಣದಲ್ಲಿ ಆ.27ರಂದು ಜರಗಿದ ಆತ್ಮಾರ್ಪಣಂ ಸಂಸ್ಕೃತ ನಾಟಕ ಪ್ರೇಕ್ಷಕರು ಬಹುಕಾಲ ನೆನಪಿಟ್ಟುಕೊಳ್ಳುವಂತೆ ಮೂಡಿ ಬಂತು. 

Advertisement

ಬಕಾಸುರ ವಧೆ ನಾಟಕದ ವಸ್ತು. ಮೂಲ ಕತೆಯಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಮಾಡದೆ ಹಾಸ್ಯರಸಕ್ಕೆ ಪೂರಕವಾಗಿ ಮೂರು ಪಾತ್ರಗಳನ್ನು ಬಳಸಿಕೊಂಡು ಕರುಣ, ವೀರ, ಹಾಸ್ಯರಸವನ್ನು ಪ್ರಧಾನವಾಗಿಟ್ಟು ಕಟ್ಟಿದ ಈ ನಾಟಕದ ಕತೃì ಹಿರಿಯ ವಿದ್ವಾಂಸ ಎನ್‌. ರಂಗನಾಥ ಶರ್ಮ. ಇವರ ಆಶಯಕ್ಕೆ ಸಮರ್ಥ ಅಭಿವ್ಯಕ್ತಿ ಒದಗಿಸಿದವರು ಉಡುಪಿ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳು. ಕೇವಲ ಹತ್ತು ದಿನಗಳಲ್ಲಿ ರಂಗಸ್ವರೂಪ, ಸಂಗೀತ ಸಂಯೋಜನೆಯೊಂದಿಗೆ ಈ ನಾಟಕವನ್ನು ನಿರ್ದೇಶಿಸಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದವರು ಹಿರಿಯ ರಂಗಕರ್ಮಿ ಎಲ್ಲೂರು ಗಣೇಶ್‌ ರಾವ್‌. ಅವರಿಗೆ ಸಂಗೀತದಲ್ಲಿ ಸಹಕರಿಸಿದವರು ವಿದ್ವಾನ್‌ ಗಣೇಶ್‌ ಐತಾಳ್‌ ಮತ್ತು ಬಳಗ.

ಸಂಸ್ಕೃತ ಭಾಷೆಯ ಸೊಗಸು ನಾಟಕದುದ್ದಕ್ಕೂ ಕಂಡು ಬಂತು. ಯಾವುದೇ ತಪ್ಪಿಲ್ಲದೆ ನಿರರ್ಗಳವಾಗಿ ಆಡಿದ ಮಾತುಗಳು ನಾಟಕದ ಧನಾತ್ಮಕ ಅಂಶ. ಭಾವಪ್ರಧಾನವಾದ ಈ ನಾಟಕದಲ್ಲಿ ಮಾತಿಗೆ ಪೂರಕವಾಗಿ ಒದಗಿಬಂದ ನಟರ ಭಾವಾಭಿವ್ಯಕ್ತಿ ಪ್ರೇಕ್ಷಕ ನಾಟಕದಲ್ಲಿ ತನ್ಮಯನಾಗಲು ಕಾರಣವಾಯಿತು. ಹಾಡಿನಲ್ಲಿ ಬಳಸಿಕೊಂಡ ಮಹಾಕಾವ್ಯದ, ಸುಭಾಷಿತದ ಸಾಲುಗಳು ನಾಟಕ ಕಳೆಗಟ್ಟುವಂತೆ ಮಾಡಿತು. ಸರಳವಾದ ಆದರೆ ಪರಿಣಾಮಕಾರಿಯಾದ ರಂಗ ಪರಿಕರ, ವೇಷ-ಭೂಷಣಗಳು, ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ ಮುದ ನೀಡಿದವು. ಭೀಮ ಬಂಡಿ ಹೊಡೆಯುವ ದೃಶ್ಯ, ಬಕಾಸುರನ ಪ್ರವೇಶ ಇತ್ಯಾದಿ ಸಂದರ್ಭಗಳು ರೋಚಕವಾಗಿದ್ದವು. ಪ್ರಧಾನ ಪಾತ್ರಗಳಾದ ಭೀಮ, ಬಕಾಸುರ ಪೋಷಕ ಪಾತ್ರಗಳಾದ ಕುಂತಿ, ಬ್ರಾಹ್ಮಣ ವಿಶೇಷವಾಗಿ ಗಮನ ಸೆಳೆದವು. ಗ್ರಾಮಸ್ಥರಾಗಿ ರಂಗ ಪ್ರವೇಶಿಸಿದ ಮೂವರು ನಟರು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದರು.

ಬೆಳಕಿನ ವ್ಯವಸ್ಥೆಯನ್ನು ಇನ್ನೂ ಚೆನ್ನಾಗಿ ಮಾಡ ಬಹುದಿತ್ತು. ಬಕಾಸುರನ ಮುಖವರ್ಣಿಕೆ ಸ್ವಲ್ಪ ಹೆಚ್ಚಾಗಿ ಬಳಸಿಕೊಂಡಿದ್ದರೆ ರೌದ್ರತೆ ಇನ್ನೂ ಪರಿಣಾಮಕಾರಿಯಾಗ ಬಹುದಿತ್ತೇನೊ. 

 ಪ್ರೊ| ನಾರಾಯಣ ಎಂ. ಹೆಗಡೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next