ನಾಲತವಾಡ: ಬ್ರಿಟಿಷರ ವಿರುದ್ಧ ಹೋರಾಟಕ್ಕೆ ತೋರಿದ ಒಗ್ಗಟ್ಟು ಈಗ ಭ್ರಷ್ಟಾಚಾರದ ವಿರುದ್ಧ ಹೋರಾಡಲು ತೋರಬೇಕಾಗಿದೆ ಎಂದು ಮಾಜಿ ಸಚಿವ ಸಿ.ಎಸ್. ನಾಡಗೌಡ ಹೇಳಿದರು.
ಗಣಪತಿ ವೃತ್ತದಲ್ಲಿ ಪಪಂ ಚುನಾವಣೆ ನಿಮಿತ್ತ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಇವತ್ತು ರಾಜ್ಯದಲ್ಲಿ ಯಾವ ರೀತಿ ಬಿಜೆಪಿ ಸರಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಬಿಜೆಪಿ ಸರಕಾರ ಜನಪರ ಯೋಜನೆಗೆ ಒತ್ತು ನೀಡದೆ ಕೇವಲ ಹಣ ಮಾಡುವ ಯೋಜನೆಯಲ್ಲಿ ಮಾತ್ರ ಹೆಚ್ಚು ಕಾಳಜಿ ವಹಿಸುತ್ತಿದೆ. ಎಸ್ಸಿ-ಎಸ್ಟಿ ಅನುದಾನ ದುರುಪಯೋಗ ಮಾಡುವ ಕೆಲಸ ಬಿಜೆಪಿ ಸರಕಾರದಿಂದ ನಡೆದಿದೆ. ಎಸ್ಸಿ-ಎಸ್ಟಿ ಅನುದಾನವನ್ನು ಸರಿಯಾದ ರೀತಿ ಬಳಸಿದ್ದೇ ಆದಲ್ಲಿ ಆ ಜನಾಂಗ ಕೇವಲ 10 ವರ್ಷದಲ್ಲಿ ಅಭಿವೃದ್ಧಿಯಾಗುತ್ತಾರೆ ಎಂದರು.
ನಾಲತವಾಡ ಎಂದರೆ ರಾಜಕೀಯದ ಕೇಂದ್ರ ಸ್ಥಾನವಾಗಿತ್ತು. ದೇಶಮುಖರ ಆಡಳಿತದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಜನರು ತಮ್ಮ ಸಮಸ್ಯೆ ಪರಿಹಾರಕ್ಕೆ ಬರುತ್ತಿದ್ದರು. ಆದರೆ ಈಗಿನ ಪರಿಸ್ಥಿತಿ ಏನಾಗಿದೆ ಎಂದು ಎಲ್ಲರಿಗೆ ಗೊತ್ತಿದೆ. ನಾಲತವಾಡ ಭಾಗದ ಜನರನ್ನು ಯಾವ ರೀತಿ ಕಾಣುತ್ತಿದ್ದಾರೆ ಎಂಬ ವಿಚಾರ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ದೇಶಮುಖರ ಮನೆತನಕ್ಕೆ ನೋವಾಗುವ ರೀತಿ ನಾನು ಯಾವುದೇ ಹೇಳಿಕೆಯನ್ನು ಎಂದೂ ನೀಡಿಲ್ಲ. ನಾಲತವಾಡ ಭಾಗದ ಎಲ್ಲ ಜನರಿಗೆ ಕಾಂಗ್ರೆಸ್ ಪಕ್ಷದ ಬಾಗಿಲು ಸದಾ ತೆರೆದಿದೆ. ಯಾರಾದರೂ ಬರಬಹುದು. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಮಗೆ ಪಕ್ಷದಲ್ಲಿ ಸ್ಥಾನ ಸಿಗುತ್ತದೆ ಎಂದರು.
ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ವಿಚಾರ ಮಾಡಿ ಮತದಾನ ಮಾಡಿ. ಕೇವಲ ನಾಲ್ಕು ದಿನದ ಆಮಿಷಕ್ಕೆ ಒಳಗಾಗದೆ 5 ವರ್ಷ ನಿಮ್ಮ ಸೇವೆ ಮಾಡುವಂತಹ ವ್ಯಕ್ತಿಗೆ ಬೆಲೆ ನೀಡಿ. ಪಟ್ಟಣ ಪಂಚಾಯತ್‌ಗೆ ಸ್ಪ ರ್ಧಿಸಿದ ಕಾಂಗ್ರೆಸ್ ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.
ತಾಳಿಕೋಟೆ ಎಪಿಎಂಸಿ ನಿರ್ದೇಶಕ ವೈ. ಎಚ್. ವಿಜಯಕರ ಮಾತನಾಡಿದರು. ಮುದ್ದೇಬಿಹಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಫೂರ ಮಕಾಂದಾರ, ಗುರು ತಾರನಾಳ, ಎಂ.ಬಿ. ನಾವದಗಿ ಮಾತನಾಡಿದರು.
ಈ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಖಾಜಾಅಜಮೀರ ಕಸ್ಸಾಬ ಸೇರ್ಪಡೆಯಾದರು. ಪೃಥ್ವಿರಾಜ ನಾಡಗೌಡ, ಶಿವಪ್ಪಣ್ಣ ತಾತರೆಡ್ಡಿ, ಅಬ್ದುಲ್ ಗನಿ ಖಾಜಿ, ಸಿದ್ದಪ್ಪಣ್ಣ ಡೆರೆದ, ಜುಮ್ಮಣ್ಣ ಜೋಗಿ, ಸಂಗಣ್ಣ ಪತ್ತಾರ, ರಾಯಣಗೌಡ ತಾತರೆಡ್ಡಿ, ಉಮರಫಾರುಕ್ ಮೂಲಿಮನಿ, ಹನುಮಂತ ಕುರಿ, ಖಾಜಾ ಅಜಮೀರ ಕಸ್ಸಾಬ, ಅಶೋಕ ಇಲಕಲ್ಲ, ದಾವಲಸಾಬ ಕಸ್ಸಾಬ ಇದ್ದರು.