Advertisement
ಗಡಿಕೇಶ್ವಾರ ಗ್ರಾಮದಲ್ಲಿ ಅ.8ರಂದು ರಾತ್ರಿ 12:44ಕ್ಕೆ 2.6, ಅ.9ರಂದು ಬೆಳಗಿನ ಜಾವ 5:37ಕ್ಕೆ 3.2, ಅ.10ರಂದು ಬೆಳಗ್ಗೆ 6:5ಕ್ಕೆ 3.0, ಅ.11ರಂದು ಬೆಳಗ್ಗೆ 6:31ಕ್ಕೆ 2.5, ಅ.11ರಂದು ರಾತ್ರಿ 9:55ಕ್ಕೆ 4.1, ಅ.11ರಂದು ಬೆಳಗ್ಗೆ 8:7ಕ್ಕೆ 3.5, ಅ.12ರಂದು ಬೆಳಗ್ಗೆ 6:15ಕ್ಕೆ 2.8 ತೀವ್ರತೆ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಇದರಿಂದ ಈ ಗ್ರಾಮದ ಅನೇಕ ನಿವಾಸಿಗಳು ಭಯಗೊಂಡು ಗ್ರಾಮವನ್ನೇ ತೊರೆದಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಅಗತ್ಯ ಪರಿಹಾರ ಕ್ರಮ ಕೈಗೊಂಡಿದೆ.
Related Articles
Advertisement
ಗ್ರಾಮಸ್ಥರಿಗೋಸ್ಕರ ಊಟದ ವ್ಯವಸ್ಥೆಯನ್ನು ತಹಶೀಲ್ದಾರ್ ಅಂಜುಮ್ ತಬ್ಸುಮ, ಸಿಡಿಪಿಒ ಗುರುಪ್ರಸಾದ ಮತ್ತು ಕಂದಾಯ ಸಿಬ್ಬಂದಿ ಅಚ್ಚುಕಟ್ಟಾಗಿ ಮಾಡಿದ್ದಾರೆ. ಬೆಳಗ್ಗೆ ಉಪಹಾರ ನಂತರ ಊಟಕ್ಕೆ ಚಪಾತಿ, ಅನ್ನ, ಸಾಂಬಾರು, ತರಕಾರಿ ಮತ್ತು ಮಧ್ಯಾಹ್ನ, ಸಂಜೆಯೂ ಊಟ, ಶುದ್ಧ ನೀರಿನ ವ್ಯವಸ್ಥೆ ಮಾಡಿದ್ದಾರೆ. ಪ್ರತಿನಿತ್ಯ ಎರಡು ಸಾವಿರ ಜನರು ಊಟ ಸೇವಿಸುತ್ತಿದ್ದಾರೆ. ಒಟ್ಟು 20 ಮಹಿಳೆಯರು ಬಿಸಿಯೂಟ ಸಹಾಯಕರು ಅಡುಗೆ ಮಾಡುತ್ತಿದ್ದಾರೆ. 15 ಪುರುಷರು ಅನ್ನ, ಸಾಂಬಾರು ಮಾಡುತ್ತಿದ್ದಾರೆ.
523 ಮನೆಗಳು ಭಾಗಶಃ ಬಿರುಕು
ಗಡಿಕೇಶ್ವಾರ ಗ್ರಾಮದಲ್ಲಿ ಒಟ್ಟು 7500 ಜನಸಂಖ್ಯೆ ಇದೆ. ಭೂಮಿ ಕಂಪಿಸಿದ್ದರಿಂದ ಒಟ್ಟು 523 ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಂದಾಯ ಸಿಬ್ಬಂದಿ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಸರ್ವೇ ಕಾರ್ಯ ನಡೆಸಿದ್ದಾರೆ. ಕಲಬುರಗಿ ಸಂಸದ ಡಾ| ಉಮೇಶ ಜಾಧವ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ತಾಪಂ ಇಒ ಅನಿಲಕುಮಾರ ರಾಠೊಡ, ಆರೋಗ್ಯಾಧಿಕಾರಿ ಡಾ| ಮಹಮ್ಮದ್ ಗಫಾರ, ಡಾ| ಜಗದೀಶ್ವರ ಬುಳ್ಳ, ಎಇಇ ಅಹೆಮದ್ ಹುಸೇನ, ಎಇಇ ಶಿವಶರಣಪ್ಪ ಕೇಶ್ವಾರ, ಎಇಇ ಗುರುರಾಜ ಜೋಶಿ ಗಡಿಕೇಶ್ವಾರ ಗ್ರಾಮದಲ್ಲಿ ಪರಿಹಾರ ಕ್ರಮ ಕೈಗೊಳ್ಳುವಲ್ಲಿ ನಿರತರಾಗಿದ್ದಾರೆ.
ಸಚಿವ ಆರ್.ಅಶೋಕ ಇಂದು ಗಡಿಕೇಶ್ವಾರಕ್ಕೆ ಭೇಟಿ
ರಾಜ್ಯ ಕಂದಾಯ ಸಚಿವ ಆರ್.ಅಶೋಕ ಅ.18ರಂದು ಸೋಮವಾರ ಮಧ್ಯಾಹ್ನ 3ಗಂಟೆಗೆ ಗಡಿಕೇಶ್ವಾರ ಗ್ರಾಮಕ್ಕೆ ಭೇಟಿ ನೀಡಲಿರುವುದರಿಂದ ಅಗತ್ಯ ಪರಿಹಾರ ಕಾರ್ಯ ಚುರುಕಿನಿಂದ ನಡೆಯುತ್ತಿವೆ.
-ಶಾಮರಾವ ಚಿಂಚೋಳಿ