ಸೀತೆಯಿಲ್ಲದ ಬದುಕಿಗೆ ಹಠತೊಟ್ಟು ಒಗ್ಗಿಕೊಳ್ಳಲು ಯತ್ನಿಸುತ್ತಿದ್ದ ಶ್ರೀರಾಮನಿಗೂ ಒಮ್ಮೆ ತನ್ನ ಪತ್ನಿàನಿಷ್ಠೆಯನ್ನು ಪರೀಕ್ಷೆಗೊಳಪಡಿಸುವ ಕಾಲ ಒದಗಿತ್ತು. ಅದು ರಾಮಾಶ್ವಮೇಧದ ಸಂದರ್ಭ. ಬಲಭಾಗದಲ್ಲಿ ಅರ್ಧಾಂಗಿಯಿಲ್ಲದೇ ರಾಮ “ಯಾಗ ದೀಕ್ಷಿತ’ನಾಗುವುದು ಸಾಧ್ಯವಿರ ಲಿಲ್ಲ. ಅದೂ ದೇವಕಾರ್ಯದಲ್ಲಿ ಬಲಭಾಗ. ಉಳಿದ ಕಡೆಯೆಲ್ಲ ಎಡಭಾಗ. ಅಷ್ಟರಲ್ಲಾಗಲೇ ರಾಮನ ಬದುಕಿನ ಬಂಡಿಯಿಂದ ಸೀತೆ ಎಂಬ ಗಾಲಿ ಕಳಚಿಕೊಂಡು ದೂರ ಉರುಳಿಯಾಗಿತ್ತು. ಈ ಹೊತ್ತಲ್ಲಿ ಏಕಪತ್ನಿàವ್ರತಸ್ಥ ರಾಮನ ನಡೆ ಹೇಗಿದ್ದೀತು? ಚತುರ ದಾಶರಥಿ, ಜಾನಕಿಯ ಸ್ವರ್ಣಪುತ್ಥಳಿಯನ್ನೇ ಪಕ್ಕದಲ್ಲಿ ಸ್ಥಾಪಿಸಿಕೊಂಡು ಯಾಗ ಪೂರೈಸಿದನಂತೆ!
Advertisement
ವೈದೇಹಿಯನ್ನಲ್ಲದೇ ಬೇರೆ ಹೆಣ್ಣನ್ನೊಲ್ಲೆ ಎಂಬ ರಾಘವನ ಈ ಬದ್ಧತೆಗೆ ತಲೆಬಾಗಲೇಬೇಕು. ಆದರೆ, ಇಲ್ಲೊಂದು ಸೂಕ್ಷ್ಮವನ್ನು ಗಮನಿಸು ತಾಯಿ, ಪತ್ನಿಯಿಲ್ಲದೆಯೇ ಮಹಾಯಾಗವನ್ನು ಕೈಗೊಳ್ಳುವ ಅವಕಾಶ ರಾಮನಿಗಿತ್ತು. ಆದರೆ, ಪತಿಯ ಅನುಪಸ್ಥಿತಿಯಲ್ಲಿ ನೀನೂ ಅಂತಹದ್ದೊಂದು ಮಂಗಳ ಕಾರ್ಯಕ್ಕೆ ಅಧೈರ್ಯುವಾಗಬೇಕು ಎಂದು ಬಯಸಿದ್ದರೆ ಅದು ಸಾಧ್ಯವಾಗುತ್ತಿತ್ತೆ? ಖಂಡಿತ ಇಲ್ಲ. “ಮಾನವ’, “ಮನುಷ್ಯ’ ಎಂಬಂತಹ ಪುರುಷವಾಚಕ ಕಲ್ಪನೆ ಮಾತ್ರವಿರುವ ಈ ಲೋಕದಲ್ಲಿ “ಯಾಗ ದೀಕ್ಷಿತೆ’ ಎಂಬ ಸಾಧ್ಯತೆಯನ್ನು ಊಹಿಸುವುದು ಸಾಧ್ಯವೆ? ಗಂಡನಿದ್ದರೆ, ಅವನಿಗೆ ಸಹಧರ್ಮಿಣಿಯಾಗಿ ಅವನ ಎಡಕ್ಕೆ ಕುಳಿತು ಅವನ ಸತ್ಕಾರ್ಯಗಳಿಗೆ ಸಹಕರಿಸಬಹುದಷ್ಟೇ ಹೊರತು, ಅವಳೇ ಪ್ರಧಾನ ಸ್ಥಾನದಲ್ಲಿ ಕುಳಿತು ಯಾವ ಮಂಗಳ ಕಾರ್ಯವನ್ನು ನೆರವೇರಿಸುವ ಹಕ್ಕನ್ನೂ ಆಕೆ ಪಡೆಯುವುದಿಲ್ಲ. ಹೀಗಿದ್ದ ಮೇಲೆ ಗಂಡ ಬಿಟ್ಟವಳಿಗೆ, ಆ “ಸಹಕರಿಸುವ’ ಅವಕಾಶವೂ ಇರುವುದಿಲ್ಲವಲ್ಲ ! ಗಂಡನನ್ನು ಕಳೆದುಕೊಂಡವರಂತೂ “ಅಪಶಕುನ’ವೆಂದೇ ಪರಿಗಣಿತರು. “ಮಂಗಳ’ದ ನೆರಳೂ ತಾಕದಂತೆ ಅವರು ದೂರವೇ ಉಳಿಯಬೇಕು!
Related Articles
Advertisement
“ದೀರ್ಘ ಸುಮಂಗಲೀ ಭವ’ ಎಂಬ ಆಶೀರ್ವಾದಕ್ಕೆ ಸಾವಿರ ಬಾರಿ ತಲೆಯೊಡ್ಡುತ್ತಲೇ ಇದ್ದಕ್ಕಿದ್ದ ಹಾಗೆ “ಅಮಂಗಲೆ’ಯರಾಗುವ ಈ ವಿಧವೆಯರು, ಒಂದೋ ಗಂಡನೊಂದಿಗೇ ಇಲ್ಲವಾಗಬೇಕು. ಇಲ್ಲವೇ, ಇದ್ದೂ ಇಲ್ಲದಂತಿರಬೇಕು ಎಂಬುದು ಈ ಜಗದ ನಿಯಮ.
“ಮಾ… ನಿಷಾದ’ ಸಂಗಾತಿ ಅಗಲಿದಾಗ ಆಗುವ ನೋವು, ಸಂಕಟಗಳು ಸ್ತ್ರೀ-ಪುರುಷರಿಬ್ಬರಿಗೂ ಸಮಾನ. ಆದರೆ ಆ ಅಗಲಿಕೆಯ ನಂತರ ಈರ್ವರೂ ಕಾಣುವ ಬದುಕು ಮಾತ್ರ ಎಷ್ಟೊಂದು ಭಿನ್ನವಾಗಿರುತ್ತದೆ? ಹೆಂಡತಿಯಿರದ ಅನನುಕೂಲ, ನೋವು ಮಾತ್ರ ವಿಧುರನನ್ನು ಕಾಡಿದರೆ, ಇವುಗಳ ಜೊತೆ, ಬಣ್ಣವೇ ಇರಬಾರದ ಬದುಕು ವಿಧವೆಯನ್ನು ಕಾಯುತ್ತಿರುತ್ತದೆ. ಅವಳ ನಡೆ, ನುಡಿ, ಊಟ, ಉಡುಪು ಎಲ್ಲವೂ ಹೀಗೆಯೇ ಇರಬೇಕು ಎಂಬುದು ಎಂದೋ ಮಾಡಿಟ್ಟ ಕಟ್ಟಳೆ. ಅರಿಶಿನ-ಕುಂಕುಮದ ಬಟ್ಟಲು “ನಿನಗಿನ್ನು ಇದು ಇಲ್ಲ’ ಎಂದು ಮೂತಿ ತಿರುವುತ್ತದೆ. ಇವಳ “ಒಳ್ಳೆ’ಯದನ್ನೇ ಬಯಸುವ ಕಣ್ಣುಗಳು “ಸಹಜ ಸಲಿಗೆ ನಿನಗೆ ಸಲ್ಲ’ ಎಂದು ಎಚ್ಚರಿಸಿ, ಮೂಲೆಯನ್ನು ತೋರಿಸುತ್ತಲೇ ಇರುತ್ತವೆ. “ಕಟ್ಟುಕಟ್ಟಳೆ’ಯ ಹಂಗು ತನಗಿಲ್ಲ ಎಂದು ಅವಳು ಬದುಕುತ್ತಿದ್ದಾಳೆಂದೇ ಭಾವಿಸಿದರೂ ಆಧುನಿಕ ವೇಷ ತೊಟ್ಟು ಸಾಂಪ್ರದಾಯಿಕ ಮನಸ್ಸುಗಳು ಅವಳನ್ನು ಖಾಯಂ ಆಗಿ “ಅವನ ವಿಧವೆ’ ಎಂದೇ ಕರೆಯುತ್ತ ಸಹಾನುಭೂತಿಯೋ, ಸಸಾರವೋ, ಒಂದು ಸಹಜವಲ್ಲದ ಭಾವದಲ್ಲಿ ಅವಳನ್ನು ತೋಯಿಸುತ್ತಲೇ ಅವಳು ಮುಜುಗರದಿಂದ ಮುರುಟಿಹೋಗುವಂತೆ ನೋಡಿಕೊಳ್ಳುತ್ತವೆ. ಆ ಅವಳಿಗೆ ಬೇರೆ “ಗುರುತೂ’ ಇದೆಯಲ್ಲವೆ? ಇನ್ನೂ ಎಷ್ಟು ಕಾಲ ಅವಳು ಕಾಯಬೇಕು ಈ “ವಿಧವೆ’ ಎಂಬ ಗುರುತುಚೀಟಿಯನ್ನು ನಿವಾರಿಸಿಕೊಳ್ಳಲು?
ರಾಮನಿಲ್ಲದ ಸೀತೆಯ ಬದುಕು ದುಸ್ತರವಾಗಿತ್ತು, ಒಪ್ಪುತ್ತೇನೆ. ಆದರೆ, ಅದು ರಾಮನ ವಿಷಯದಲ್ಲೂ ಸತ್ಯವಷ್ಟೇ! ಸೀತೆಯಿರದ ನಿರ್ವಾತವನ್ನೇ ಅವನು ಅಪ್ಪಿಕೊಂಡಿದ್ದನಲ್ಲ! ಹೀಗಿದ್ದರೂ ಸೀತೆಯ ಅಗಲಿಕೆ ರಾಜಾರಾಮನ ಧ್ಯೇಯೋದ್ದೇಶಗಳ ಈಡೇರಿಕೆಗೆ ಅಡ್ಡಿ ತರಲಿಲ್ಲ. ಹಾಗೆಯೇ ರಾಮನಿಲ್ಲದ ಸೀತೆಯೂ ವಾಲ್ಮೀಕಿ ಆಶ್ರಮದಲ್ಲಿ ತನ್ನತನವನ್ನು ಸ್ಥಾಪಿಸಿಕೊಂಡಿದ್ದಳಲ್ಲವೆ? ಅದನ್ನು ಗುರುತಿಸುವ ಕಣ್ಣುಗಳು, ಗೌರವಿಸುವ ಮನಸ್ಸುಗಳು ಬಹುವಾಗಬೇಕು ಅಷ್ಟೆ.
“ಹುಟ್ಟು’ ಅಥವಾ “ಬದುಕಿನಲ್ಲಿ ಘಟಿಸಬಹುದಾದ ಆಕಸ್ಮಿಕಗಳು’ ಇವು ಯಾವುವೂ ಈ ಹೆಣ್ಣುಗಳ ಆಶೋತ್ತರಗಳನ್ನು ಹತ್ತಿಕ್ಕಬಾರದು. ತನ್ನ ಬದುಕಿನ ಬಗೆಗೆ ಕನಸು ಕಟ್ಟಬಲ್ಲ ಅವಳ ದೃಷ್ಟಿ ಕಣ್ಣೀರಿನಿಂದ ಮಂಜಾಗದಿರಲಿ, ತಾನು ಬಯಸಿದ ದಾರಿಯನ್ನು ಒಡೆಯುತ್ತ ಸಾಗಬೇಕೆಂಬ ಅವಳ ಛಲ, ನೋವು-ಅಪಮಾನದಿಂದ ಕುಗ್ಗದಿರಲಿ. ಆಗ ರೀತಿ-ರಿವಾಜುಗಳ ಮುಸುಕನ್ನು ಸರಿಸಿ, ಆಕೆ ದಿಗದುದ್ದ ಬೆಳೆಯಬಲ್ಲಳು.ಅಲ್ಲವೆ, ಸೀತಾ! ಅಭಿಲಾಷಾ ಎಸ್.