ಚನ್ನಪಟ್ಟಣ: ಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಜೀತ ವಿಮುಕ್ತಿ ಕರ್ನಾಟಕ ತಾಲೂಕು ಘಟಕದ ವತಿಯಿಂದ ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ಬಿ.ಎಂ.ರಸ್ತೆಯಲ್ಲಿ ಮೆರವಣಿಗೆ ಹೊರಟ ಜೀವಿಕ ಸಂಘಟನೆ ಪದಾಧಿಕಾರಿಗಳು ತಾಲೂಕು ಕಚೇರಿ ಮುಂಭಾಗ ಧರಣಿ ನಡೆಸಿದರು.
ಜಿಲ್ಲಾ ಸಂಚಾಲಕ ವಕೀಲ ಕುಮಾರ್ ಮಾತನಾಡಿ, ಸಂವಿಧಾನದಲ್ಲಿ ಸರ್ವರಿಗೂ ನ್ಯಾಯ, ಸಮಾನತೆ ಸ್ವಾತಂತ್ರ್ಯ, ಸೋದರತ್ವ ನೀಡಲಾಗಿದೆ. ಸಂವಿಧಾನ ಜಾರಿಗೆ ಬಂದು 68 ವರ್ಷ ಕಳೆದರೂ ಜಿಲ್ಲೆಯಲ್ಲಿ ಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸಿಲ್ಲ. ಜೀತ ವಿಮುಕ್ತಿ ಕರ್ನಾಟಕ ಸಂಘಟನೆ ವತಿಯಿಂದ 1994ರಿಂದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ಮನವಿ ಸಲ್ಲಿಸುತ್ತಿದ್ದರೂ ಇದುವರಗೂ ಯಾರೂ ಸ್ಪಂದಿಸಿಲ್ಲ. ಪ್ರತಿಭಟನೆ ಮೂಲಕ ಒತ್ತಡ ತರುತ್ತಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಇದು ನಮ್ಮ ಸಂವಿಧಾನದಲ್ಲಿನ ಆಡಳಿತದ ಕಾರ್ಯವೈಖರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಲಾಮ ಪದ್ಧತಿಯ ಸ್ವರೂಪವಾದ ಜೀತ ಪದ್ಧತಿ ರಾಜ್ಯ ಮತ್ತು ರಾಮನಗರ ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿದೆ. ಜೀತ ವ್ಯವಸ್ಥೆ ಕರಾಳ ಪದ್ಧತಿಯಾಗಿದ್ದು, ಇಂದು ಕೂಡ ಕೆಲ ಭೂಮಾಲೀಕರು ಮನುಷ್ಯರನ್ನು ಪಶುವಂತೆ ನಡೆಸುಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ನ್ಯಾಯ ಒದಗಿಸದೆ ಅನ್ಯಾಯ ಮಾಡುತ್ತಿವೆ. ಭೂಮಾಲೀಕರ ಜತೆ ಸೇರಿ ಕಂದಾಯ ಅಧಿಕಾರಿಗಳು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಆದ್ದರಿಂದ ತನಿಖೆಯಲ್ಲಿ ಮಲತಾಯಿ ಧೋರಣೆ ತೋರುತ್ತಿರುವ ಸರ್ಕಾರಿ ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸಂಘಟನೆ ವತಿಯಿಂದ ಧರಣಿ ನಡೆಸಲಾಗುತ್ತಿದೆ ಎಂದರು.
ಸಂಘಟನೆಯ ರಾಜ್ಯ ಸಂಚಾಲಕ ಹನುಮಂತಯ್ಯ ಮಾತನಾಡಿ, ಜೀವಿಕ ಸಂಘಟನೆಯ ಕಾರ್ಯಕರ್ತರು 2001ರಿಂದ 2016ರ ತನಕ 240 ಮಂದಿ ಜೀತದಾಳುಗಳನ್ನು ಗುರುತಿಸಿದ್ದು, ಅವರ ಬಿಡುಗಡೆ ಮತ್ತು ಪುನರ್ವಸತಿಗಾಗಿ ಮನವಿ ಸಲ್ಲಿಸುತ್ತಾ ಬಂದಿದೆ. ಆದಾಗ್ಯೂ ಇದುವರೆಗೂ ಯಾವುದೇ ಕ್ರಮ ತಗೆದುಕೊಂಡಿಲ್ಲ. ಬಿಡುಗಡೆ ಭಾಗ್ಯ ಲಭ್ಯವಾಗಿಲ್ಲ. ಸರ್ಕಾರದ 2015ರ ಸುತ್ತೋಲೆ ಪ್ರಕಾರ ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗೆ ತನಿಖೆ ಮಾಡಿ ಬಿಡುಗಡೆ ಪತ್ರ ನೀಡಬೇಕು. ಜೀವಿಕ ಮನವಿ ಮಾಡಿದರು ತಾಲೂಕು ಆಡಳಿತ ಈ ಬಗ್ಗೆ ಇದುವರಗೆ ನಿಜವಾದ ಜೀತದಾಳುಗಳನ್ನು ಗುರುತಿಸುವಲ್ಲಿ ವಿಫಲವಾಗಿದೆ. ಜತೆಗೆ ಅವರಿಗೆ ಯಾವುದೇ ಪುನರ್ವಸತಿ ಒದಗಿಸದೆ ಮೌನವಹಿಸಿದೆ. ಪರಿಶಿಷ್ಟ ಸಮುದಾಯವನ್ನು ಕತ್ತಲ್ಲಿಟ್ಟಿದೆ ಎಂದು ಆರೋಪಿಸಿದರು.
ಶಿರಸ್ತೇದಾರ ಮುನಿರಾಜಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ಮುನಿರಾಜಯ್ಯ, ಜೀವಿಕ ಸಂಘಟನೆ ಪದಾಧಿಕಾರಿಗಳು ನೀಡಿರುವ ಮನವಿ ಪತ್ರವನ್ನು ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. ಜೀವಿಕ ಜಿಲ್ಲಾ ಸಂಚಾಲಕ ಹಂಗಹನುಮಯ್ಯ, ತಾಲೂಕು ಮಹಿಳಾ ಸಂಚಾಲಕಿ ಬಿ.ಕೆ.ಯಶೋಧಾ, ಉಪಾಧ್ಯಕ್ಷೆ ಲಕ್ಷ್ಮಮ್ಮ, ಡಿಎಸ್‌ಎಸ್ ತಾಲೂಕು ಸಂಚಾಲಕ ಸೇಟು, ಹೋಬಳಿ ಸಂಚಾಲಕಿ ಗಂಗಾ, ತಾಲೂಕು ಸಂಚಾಲಕ ಎಚ್.ಎಸ್.ಸಿದ್ದಯ್ಯ, ಗ್ರಾಪಂ ಸದಸ್ಯ ಜಯರಾಮು, ಮಮತಾ, ಶಂಕರ್, ಗಂಗಾಧರ್, ಸಿದ್ದಯ್ಯ ಇತರರಿದ್ದರು.