ಶಿರಸಿ: ಸಂಸದ ಅನಂತಕುಮಾರ ಹೆಗಡೆ ಅವರ ನಡೆ ಇನ್ನೆರಡು ದಿನಗಳಲ್ಲಿ ಗೊತ್ತಾಗುತ್ತದೆ. ಅವರ ನಡೆ ನೋಡಿ ಕಾಂಗ್ರೆಸ್ ಚುನಾವಣಾ ತಂತ್ರ ಹಣೆಯಲಿದೆ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಆಯ್ಕೆ ಅವರ ಆಂತರಿಕ ಸಂಗತಿ. ಆದರೆ ಅನಂತಕುಮಾರ ಅವರ ನಡೆ ನೋಡಬೇಕು. ಕಾಂಗ್ರೆಸ್ ಮನೆಯಲ್ಲಿ ಒಗ್ಗಟ್ಟಿದೆ. ಯಾವುದೇ ಅಸಮಾಧಾನ ಇಲ್ಲ. ಎಲ್ಲರೂ ಒಂದಾಗಿ ಬರಲಿರುವ ಲೋಕಸಭಾ ಚುನಾವಣೆ ಎದುರಿಸಲು ಸಿದ್ಧ ಎಂದರು.
ಚುನಾವಣಾ ರೂಪುರೇಷೆ ಸಿದ್ದ ಮಾಡಲು ಕಾರ್ಯಕರ್ತರ, ಪ್ರಮುಖರ ಸಭೆ ಕರೆದಿದ್ದೇವೆ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರೂ ಓಡಾಟ ನಡೆಸಲಿದ್ದಾರೆ. ಗೆಲ್ತೇವೆ ಎಂಬ ವಿಶ್ವಾಸವಿದೆ. ಕಳೆದ ಸಲ ಸೋಲಿಗೆ ಬೇರೆ ಕಾರಣಗಳಿದ್ದವು. ಜೆಡಿಎಸ್ ಅಭ್ಯರ್ಥಿ ಹಾಕಿದ್ದೆವು ಎಂದರು.
ಕಿತ್ತೂರು ಸೇರಿ ಐದು ಶಾಸಕರು, ಸರಕಾರದ ಪಂಚ ಭಾಗ್ಯ ಯೋಜನೆಗಳು ನಮಗೆ ಕೈ ಹಿಡಿಯಲಿವೆ. ಎಐಸಿಸಿ ಪ್ರಣಾಳಿಕೆಯಲ್ಲೂ ಪಂಚ ನ್ಯಾಯ ಯೋಜನೆಗಳಿವೆ. ಸಿದ್ಧರಾಮಯ್ಯ ಅವರು ಅನೇಕ ಒಳ್ಳೆಯ ಯೋಜನೆ ನೀಡುತ್ತಿದ್ದಾರೆ. ಅಭಿವೃದ್ದಿ ವೇಗದಲ್ಲಿ ಆಗುತ್ತಿದೆ. ರಾಜ್ಯದ ಐದೂ ಭಾಗ್ಯಗಳಿಗೂ ಹಣವಿದೆ. ಪ್ರತಿಪಕ್ಷದವರು ವಿನಾಕಾರ, ಟೀಕೆ ಮಾಡಬಾರದು ಎಂದರು.
ಕೇಂದ್ರ ಸರಕಾರದ ನಿರುದ್ಯೋಗ, ಬೆಲೆ ಏರಿಕೆ ಜನ ಸಾಮಾನ್ಯರಿಗೆ ಕಷ್ಟವಾಗುವಂತಾಗಿದೆ. ಕಾಂಗ್ರೆಸ್ ಸರಕಾರದ ಅನೇಕ ಯೋಜನೆಗಳು ನಮ್ಮ ಪಕ್ಷಕ್ಕೆ ಮತಗಳನ್ನು ತಂದುಕೊಡಲಿವೆ ಎಂದರು.
ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್, ಶಾಸಕ ಭೀಮಣ್ಣ ನಾಯ್ಕ, ದೀಪಕ್ ದೊಡ್ಡೂರು, ವೆಂಕಟೇಶ ಹೊಸಬಾಳೆ ಇದ್ದರು.
ರವೀಂದ್ರ ನಾಯ್ಕ ಅವರ ಜೊತೆ ಮಾತನಾಡಿದ್ದೇನೆ. ಅವರೂ ಕಳೆದ ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಅವರು ಅಸಮಾಧಾನದ ಪ್ರಸ್ತಾಪ ಮಾಡಿಲ್ಲ.
-ಆರ್.ವಿ.ದೇಶಪಾಂಡೆ
ಕ್ಷೇತ್ರದ ಅಭಿವೃದ್ದಿ ನಮ್ಮ ಕನಸು. ರಾಜ್ಯ ಸರಕಾರದ ಯೋಜನೆಗಳು ಮತಗಳಾಗಿ ಬರಲಿವೆ. ಕಾರ್ಯಕರ್ತರ ಶ್ರಮದಿಂದ ಲೋಕಸಭೆಯಲ್ಲೂ ಪಕ್ಷ ಗೆಲ್ಲಲಿದೆ.
-ಡಾ. ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಅಭ್ಯರ್ಥಿ