ಉಪೇಂದ್ರ, ಅವರ ಶೈಲಿ, ಸಿನಿಮಾಗಳು ಅನೇಕ ಯುವ ನಿರ್ದೇಶಕರಿಗೆ ಪ್ರೇರಣೆಯಾಗಿವೆ. ಉಪ್ಪಿ ಸ್ಟೈಲ್‌ನಲ್ಲಿ ಸಿನಿಮಾ ಮಾಡಿದ್ದೇನೆ ಎನ್ನುತ್ತಾ ಅನೇಕರು ಗಾಂಧಿನಗರದಲ್ಲಿ ಓಡಾಡಿ ಹೋಗಿದ್ದಾರೆ. ಇನ್ನು ಕೆಲವರು ಉಪೇಂದ್ರ ಅವರ ಜೊತೆ ಸೇರಿಕೊಂಡು, ಅವರನ್ನು ಗುರುವಾಗಿ ಸ್ವೀಕರಿಸಿದ್ದಾರೆ. ಇದು ಕೂಡಾ ಉಪ್ಪಿ ಶಿಷ್ಯನ ಕಥೆ. ಉಪೇಂದ್ರ ಅವರ ಸಿನಿಮಾಗಳಿಂದ ಪ್ರೇರಣೆಗೊಂಡು, ಅವರ ಜೊತೆ ಸೇರಿ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ ವಿಜಯ್ ಸೂರ್ಯ ಈಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅದು “ಎ+’ ಸಿನಿಮಾ ಮೂಲಕ. “ಎ’ ಇಟ್ಟುಕೊಳ್ಳುವ ಮೂಲಕ ಗುರುವಿನ ಸಿನಿಮಾವನ್ನು ನೆನಪಿಸಿಕೊಂಡೇ ಸಿನಿಮಾ ಮಾಡುತ್ತಿದ್ದಾರೆ ವಿಜಯ್ ಸೂರ್ಯ. ಇತ್ತೀಚೆಗೆ ನಡೆದ ಚಿತ್ರದ ಟೀಸರ್ ಬಿಡುಗಡೆ ವೇಳೆ ನಿರ್ದೇಶಕ ವಿಜಯ್ ಸೂರ್ಯ, ತಮ್ಮ ಆರಂಭದ ದಿನಗಳನ್ನು, ಇವತ್ತು ವೇದಿಕೆ ಮೇಲೆ ನಿಲ್ಲಲು ಕಾರಣವಾದವರನ್ನು ನೆನಪಿಸಿಕೊಂಡು ಕೆಲ ಕ್ಷಣ ಭಾವುಕರಾದರು.
ಎಲ್ಲಾ ಓಕೆ, ಈ ಸಿನಿಮಾ ಮೂಲಕ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. “ಮನುಷ್ಯನಿಗೆ ಸಮಸ್ಯೆ ಬರೋದು ಸಹಜ. ಆ ಸಮಸ್ಯೆಗಳಿಗೆ ತಲೆಬಾಗದೇ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂಬ ವಿಷಯವನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ಚಿತ್ರದಲ್ಲಿ ನಾಯಕನಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಅವೆಲ್ಲವನ್ನೂ ಆತ ಹೇಗೆ ನಿಭಾಯಿಸುತ್ತಾನೆ ಎನ್ನುವುದನ್ನು ಈ ಸಿನಿಮಾದಲ್ಲಿ ಹೇಳುತ್ತಾ ಹೋಗಿದ್ದೇನೆ’ ಎಂದು ವಿವರ ಕೊಟ್ಟರು ವಿಜಯ್. ಮ್ಯಾಗಜೀನ್‌ವೊಂದರಲ್ಲಿ ಫೋಟೋ ನೋಡಿ ಹೀರೋನಾ ಆಯ್ಕೆ ಮಾಡಿದರೆ, ಫೇಸ್‌ಬುಕ್‌ನಲ್ಲಿನ ವಿಡಿಯೋ ನೋಡಿ ನಾಯಕಿಯನ್ನು ಆಯ್ಕೆ ಮಾಡಿದರಂತೆ. ಇನ್ನು, ನಿರ್ಮಾಪಕರು ಕೂಡಾ ಕಥೆ ಕೇಳಿ ಖುಷಿಪಟ್ಟು ಸಿನಿಮಾ ಮಾಡಲು ಮುಂದಾದರು ಎಂದು ಸಿನಿಮಾ ಆರಂಭವಾದ ಬಗ್ಗೆ ಹೇಳಿಕೊಂಡರು ವಿಜಯ್ ಸೂರ್ಯ.
ಚಿತ್ರದ ನಿರ್ಮಾಪಕ ಪ್ರಭು ಕುಮಾರ್ ಅವರಿಗೆ ಈ ಚಿತ್ರ ಕನ್ನಡಕ್ಕೊಂದು ಒಳ್ಳೆಯ ಸಿನಿಮಾವಾಗುವ ವಿಶ್ವಾಸವಿದೆ. ಪ್ರೇಕ್ಷಕ ಒಂದು ಕ್ಷಣವೂ ಕಣ್ಣು ಮುಚ್ಚದೇ ಈ ಸಿನಿಮಾವನ್ನು ಖುಷಿಯಿಂದ ನೋಡುತ್ತಾನೆ ಎನ್ನುವುದು ಅವರ ಮಾತು. ಹೊಸದಾಗಿ ಚಿತ್ರರಂಗಕ್ಕೆ ಬರುವ ನಿರ್ಮಾ ಪಕರಿಗೆ ಆಗುವಂತಹ ಯಾವುದೇ ತೊಂದರೆ ಇವರಿಗೆ ಆಗಿಲ್ಲವಂತೆ. ಇಡೀ ಯುನಿಟ್ ಪ್ರೀತಿಯಿಂದ ಕೆಲಸ ಮಾಡಿದೆ ಎಂದು ಖುಷಿಯಿಂದ ಹೇಳಿಕೊಂಡರು ಪ್ರಭು.
ನಾಯಕ ಸಿದ್ದು ಕನ್ನಡ ಚಿತ್ರರಂಗದಲ್ಲಿ ಸ್ಟೈಲಿಶ್ ವಿಲನ್ ಆಗಬೇಕೆಂಬ ಆಸೆ ಹೊತ್ತುಕೊಂಡು ಬಂದವರಂತೆ. ಆದರೆ, ವಿಜಯ್ ಸೂರ್ಯ ಅವರು ಹೀರೋ ಮಾಡಿದ್ದು, ಒಳ್ಳೆಯ ಅವಕಾಶ ಎಂದರು. ಇದೊಂದು ಪಕ್ಕಾ ಲವ್‌ಸ್ಟೋರಿಯಾಗಿದ್ದು, ವಿಭಿನ್ನ ನಿರೂಪಣೆ ಇದೆಯಂತೆ. ಚಿತ್ರದಲ್ಲಿ ಹಿರಿಯ ನಟ ಕೃಷ್ಣ ನಾಡಿಗ್ ಸೆನ್ಸಾರ್ ಆಫೀಸರ್ ಆಗಿ ನಟಿಸಿದ್ದಾರೆ.
ನಾಯಕಿ ಸಂಗೀತಾಗೆ ಇದು ಮೊದಲ ಸಿನಿಮಾ. ಈ ಚಿತ್ರೀಕರಣ ಮುಂಚೆ ವರ್ಕ್ ಶಾಪ್ ಮಾಡಿದ್ದರಿಂದ ಕ್ಯಾಮರಾ ಮುಂದೆ ನಟಿಸೋದು ಸುಲಭವಾಯಿತಂತೆ. ಚಿತ್ರಕ್ಕೆ ಭುಪೇಂದ್ರ ಸಿಂಗ್ ಛಾಯಾಗ್ರಹಣವಿದೆ.