Advertisement
ವರ್ಷದ 365 ದಿನವೂ ಗಿಜಿಗಿಜಿ ಅನ್ನುವಂಥ ಊರು, ನಮ್ಮ ಬೆಂಗಳೂರು. ಈ ಊರಲ್ಲಿ 300ಕ್ಕೂ ಹೆಚ್ಚು ಕಲ್ಯಾಣಮಂಟಪಗಳಿವೆ. 200ಕ್ಕೂ ಹೆಚ್ಚು ಸಭಾಂಗಣಗಳಿವೆ. 50ಕ್ಕೂ ಮೀರಿದ ರಂಗಮಂದಿರಗಳಿವೆ. ಪ್ರತಿಯೊಂದು ಬಡಾವಣೆಯಲ್ಲೂ ಐದಕ್ಕೂ ಹೆಚ್ಚು ಬಯಲು ರಂಗಮಂದಿರಗಳಿವೆ. ಇವೆಲ್ಲಾ ವರ್ಷವಿಡೀ ಬ್ಯುಸಿಯಾಗಿರುತ್ತವೆ.
Related Articles
Advertisement
“ಪುಸ್ತಕ ಬರೆಯುವುದು, ಪ್ರಿಂಟ್ ಮಾಡಿಸುವುದು, ಮಕ್ಕಳಿಗೆ ಡ್ಯಾನ್ಸ್ ಕಲಿಸುವುದು, ನಾಟಕದ ನಿರ್ದೇಶನ ಮಾಡುವುದು…’ ಇವೆಲ್ಲಾ ಸುಲಭ. ಆದರೆ, ಕಾರ್ಯಕ್ರಮಕ್ಕೆ ಆಡಿಟೋರಿಯಂ ಹುಡುಕುವುದಿದೆಯಲ್ಲ, ಅದೇ ನಿಜವಾದ ಕಷ್ಟ ಎಂಬುದು ಎಲ್ಲರ ಮಾತಾಗಿತ್ತು. ಪ್ರತಿಯೊಂದು ಬಡಾವಣೆಯಲ್ಲೂ 20ರ ಸಂಖ್ಯೆಯಲ್ಲಿದ್ದ ಸಭಾಂಗಣಗಳು ವರ್ಷವಿಡೀ ಬ್ಯುಸಿಯಾಗಿರುತ್ತಿದ್ದವು. ಎಲ್ಲ ಸಭಾಂಗಣಗಳ ತಾಯಿಯಂತಿರುವ ರವೀಂದ್ರ ಕಲಾಕ್ಷೇತ್ರದಲ್ಲಂತೂ ಒಂದೇ ದಿನದಲ್ಲಿ ನಾಲ್ಕು ಕಾರ್ಯಕ್ರಮಗಳು ನಡೆದಿದ್ದೂ ಉಂಟು.
ಚಾಮರಾಜಪೇಟೆಯಲ್ಲಿರುವ ಸಾಹಿತ್ಯ ಪರಿಷತ್ ಸಭಾಂಗಣ, ಗಾಂಧಿಬಜಾರ್‌ನ ವಾಡಿಯಾ ಹಾಲ್, ಕೆ.ಆರ್.ರಸ್ತೆಯ ಗಾಯನ ಸಮಾಜ, ಮಲ್ಲೇಶ್ವರದ ಸೇವಾಸದನ, ಅನನ್ಯ ಸಭಾಂಗಣ, ಹನುಮಂತನಗರದ ಕಲಾಸೌಧ, ಜೆ.ಪಿ.ನಗರದ ರಂಗಶಂಕರ, ಬಸವೇಶ್ವರ ನಗರದ ಕೆಎಲ್‌ಇ ಕಲಾಪೂರ್ಣಿಮ, ವೈಯಾಲಿಕಾವಲ್‌ನ ಚೌಡಯ್ಯ ಹಾಲ್, ಜೆ.ಸಿ.ರಸ್ತೆಯ ಎಡಿಎ ರಂಗಮಂದಿರ, ಕೋರಮಂಗಲದ ಅಟ್ಟ ಗಲಾಟ, ಕೆಂಗೇರಿಯ ಬ್ರಾಹ್ಮಣ ಸಭಾ ಮಂದಿರ… ಇವೆಲ್ಲಾ “ಹೌಸ್‌ಫುಲ್’ ಬೋರ್ಡ್‌ನ ಜೊತೆಗೇ ಉಸಿರಾಡುತ್ತಿದ್ದ ತಾಣಗಳು.
ಟೌನ್‌ಹಾಲ್ ಮರೆಯುವುದುಂಟೆ?: ಸದಾ ಗಿಜಿಗಿಜಿ ಅನ್ನುತ್ತಲೇ ಇರುವ ತಾಣ ಅಂದುಕೊಂಡಾಗ ನೆನಪಾಗುವ ಇನ್ನೊಂದು ತಾಣ ಟೌನ್‌ಹಾಲ್. ಕಾರ್ಮಿಕರು, ನೌಕರರು, ಶೋಷಿತರು, ಶೋಷಕರು, ಪೋಷಕರು, ಬಾಲಕರು, ಹೋರಾಟಗಾರರು, ಹಾರಾಟಗಾರರು, ಮಾರಾಟಗಾರರು, ಪ್ರಗತಿಪರರು, ಅವರ ವಿರೋಧಿಗಳು, ರಾಜಕೀಯ ನಾಯಕರು, ಅವರ ಹಿಂಬಾಲಕರು, ಎಡ, ಬಲ, ಮಧ್ಯ, ನಡುಪಂಥದವರು- ಹೀಗೆ,
ಛಪ್ಪನ್ನೈವತ್ತಾರು ಬಗೆಯ ಜನರೆಲ್ಲ ತಮಗೆ ಅನ್ಯಾಯವೋ, ಅಸಮಾಧಾನವೋ ಆದಾಗ ಓಡೋಡಿ ಬಂದು ಮನದ ರೋಷವನ್ನೆಲ್ಲ ಹೇಳಿಕೊಳ್ಳುತ್ತಿದ್ದುದೇ ಟೌನ್‌ಹಾಲ್‌ನ ಕಲ್ಲುಗಳ ಮೇಲೆ ಕೂತು; ಟೌನ್‌ಹಾಲ್‌ನ ಮುಂದೆ ನಿಂತು! ಮೊನ್ನೆಮೊನ್ನೆಯವರೆಗೂ ವಾರಕ್ಕೆ ಎರಡಾದರೂ ಪ್ರತಿಭಟನೆಗಳಿಗೆ, ಧಿಕ್ಕಾರದ ಮಾತುಗಳಿಗೆ ಟೌನ್‌ಹಾಲ್‌ನ ಅಂಗಳ ಸಾಕ್ಷಿಯಾಗುತ್ತಿತ್ತು. “ಪ್ರತಿಭಟನೆಗಿದು ಜಾಗವಲ್ಲ’ ಎಂಬ ಹುಕುಂ ಹೊರಬಿದ್ದ ಮೇಲೆ- ಬಸ್ಸು, ಲಾರಿ, ಬೈಕು, ಕಾರುಗಳ ಹಾರನ್‌ಗಳು ಟೌನ್‌ಹಾಲ್‌ನ ಗೋಡೆಗೆ ಅಪ್ಪಳಿಸುತ್ತಿದ್ದವು.
ಈಗ ಕೊರೊನಾ ಕಾರಣಕ್ಕೆ ಒಂದಿಡೀ ವಾರ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ! ಇಷ್ಟು ದಿನ ಬೆಳಗ್ಗೆ, ಸಂಜೆ, ಮಧ್ಯಾಹ್ನ – ನಗರದ ಉದ್ದಗಲಕ್ಕೂ ಮಾತಿನ ಬಾಂಬು ಮತ್ತು ಒರಿಜಿನಲ್ ಆಟಂ ಬಾಂಬುಗಳು ಗಂಟೆಗೊಮ್ಮೆ ಸಿಡಿದಾಗಲೂ ಬೆಚ್ಚದಿದ್ದ ಬೆಂಗಳೂರು ಒಂದಿಡೀ ವಾರ ಮಾತಿಲ್ಲದೆ, ಹಾಡಿಲ್ಲದೆ, ರಂಗ ಸಂಗೀತದ ಜೋಗುಳವಿಲ್ಲದೆ, ಕೊಳಲಿನ ನಾದ ಕೇಳದೆ ಇರಬೇಕಲ್ಲ ಎಂಬ ಯೋಚನೆಗೇ ಬೆಚ್ಚುತ್ತಿದೆ…