Advertisement

ಶತಮಾನದ ಶಾಲೆ ದುಸ್ಥಿತಿ ನೋಡಿ

11:25 AM Jun 05, 2018 | |

ವಿಜಯಪುರ: ಇನ್ನೇನು ಮೂರು ತಿಂಗಳು ಕಳೆದರೆ ಶತಮಾನೋತ್ಸವ ಸಂಭ್ರಮ ಆ ಶಾಲೆಗೆ. ಆದರೆ ಅಕ್ಷರ ಕಲಿಯಲು ಬರುವ ಶಾಲೆಯಲ್ಲಿ ದಿನವೂ ಮದ್ಯದ ಬಾಟಲಿಗಳು, ಗುಟ್ಕಾ ಚೀಟಿ ತುಂಡುಗಳು, ಮೊಂಟು ಬೀಡಿ-ಸಿಗರೇಟ್‌ ಇಸ್ಪೀಟ್‌ ಎಲೆಗಳು, ಕೋಣೆಯಲ್ಲೇ ಮಲ-ಮೂತ್ರ ದರ್ಶನ ಮಾಡಲೇಬೇಕು. ನೂರರ ಸಂಭ್ರಮದಲ್ಲಿರುವ ಆ ಶಾಲೆಯ ದುಸ್ಥಿತಿಯ ಕಾರಣ ಮಕ್ಕಳು, ಶಿಕ್ಷಕರು ನಿತ್ಯವೂ ನರಕ ದರ್ಶನ ಅನುಭವಿಸುತ್ತಿದ್ದಾರೆ.

Advertisement

ಇದು ವಿಜಯಪುರ-ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವಿಜಯಪುರ ತಾಲೂಕಿನ ಕಗ್ಗೊಡ ಎಂಬ ಗ್ರಾಮದಲ್ಲಿನ ಶತಮಾನದ ಸಂಭ್ರಮದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಶಾಲೆಯ ವಿಕೃತಿ ನೋಟ. 

ಹರಳಯ್ಯ ಶರಣರು ನಡೆದಾಡಿದ ಈ ಗ್ರಾಮ ಹಿರಿಮೆ ಹೇಳಿಕೊಳ್ಳುವ ಬದಲು ಪುಂಡ-ಪೋಕರಿಗಳ ಹಾವಳಿಯಿಂದ ಶೈಕ್ಷಣಿಕ ದುಸ್ಥಿತಿಯಿಂದ ಅಪಕೀರ್ತಿ ಅನುಭವಿಸುತ್ತಿದೆ. ನಮ್ಮೂರ ಮಾದರಿ ಶಾಲೆಗೆ ನೂರರ ಸಂಭ್ರಮ ಎಂದು ಮಾದರಿ ಆಗುವಂತಿರಬೇಕಾದ ಶಾಲೆ, ಇಲ್ಲಗಳ ಜೊತೆಗೆ ಹಲವು ಅಸಹ್ಯವನ್ನೂ ಮಡಿಲಲ್ಲಿ ತುಂಬಿಕೊಂಡು ಕಣ್ಣು-ಮೂಗು ಮುಚ್ಚಿಕೊಳ್ಳುವ ದುಸ್ಥಿತಿ ಎದುರಿಸುತ್ತಿದೆ.

ಶಾಲೆಗೆ 5 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ 14 ಕೋಣೆಗಳ ಈ ಶಾಲೆಯಲ್ಲಿ ಹಲವು ಕೋಣೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಬಳಕೆಗೆ ಯೋಗ್ಯ ಎಂದು ಭಾವಿಸುವ 7 ಕೋಣೆಗಳಲ್ಲೇ ಅರ್ಧ
ಸಂಖ್ಯೆಯ ಕೋಣೆಗಳಿಗೆ ಸೋರಿಕೆ, ಭಾರಿ ಬಿರುಕಿನ ಭಾಗ್ಯ. ಅಧಿಕ ಮಳೆ ಸುರಿದರೆ ಈ ಶಾಲೆಗಳ ಕುಸಿತವಾಗಿ ಮಕ್ಕಳು- ಶಿಕ್ಷಕರು ಅಪಾಯಕ್ಕೆ ಸಲಿಕುವ ದುಸ್ಥಿತಿ ಇದೆ.

ಹಲವು ಕೋಣೆಗಳ ಕಿಟಕಿ ಬಾಗಿಲುಗಳನ್ನು ಪುಂಡರು ಬಹುತೇಕ ಮುರಿದು ಹಾಕಿದ್ದಾರೆ. ಸಂಜೆಯಾದರೆ ಸಾಕು ಸಾರ್ವಜನಿಕ ಶಿಕ್ಷಣ ಇಲಾಖೆ ಒಡೆತನದ ಸರ್ಕಾರಿ ಶಾಲೆ ಸಾರ್ವಜನಿಕ ಅನೈತಿಕ ಕೇಂದ್ರವಾಗಿ ಮಾರ್ಪಡಿಸಿಕೊಳ್ಳುತ್ತಾರೆ. ಇಸ್ಟೀಟ್‌-ಜೂಜು, ಮದ್ಯದ ಬಾಟಿಲಗೂ ತೂರಾಡುತ್ತ, ಧೂಮಪಾಮನ ಅಮಲೇರುತ್ತದೆ. ಅಂತಿಮವಾಗಿ ಶಾಲಾ ಕೋಣೆಗಳೆಲ್ಲ ಮಲ-ಮೂತ್ರ ವಿಸರ್ಜನೆಯಿಂದ ಗಬ್ಬು ನಾರುವಂತಾಗುತ್ತದೆ.

Advertisement

1ರಿಂದ 7ನೇ ತರಗತಿ ಇರುವ ಈ ಶಾಲೆಯಲ್ಲಿ ಸುಮಾರು 175 ಮಕ್ಕಳು ಓದುತ್ತಿದ್ದಾರೆ. ಇನ್ನು ಮಕ್ಕಳ ಸಂಖ್ಯೆಗೆ ಇಲ್ಲಿ ಇನ್ನೂ ಮೂವರು ಶಿಕ್ಷಕರು ಬೇಕಿದ್ದರೂ ಇಲಾಖೆ ಸ್ಪಂದಿಸಿಲ್ಲ. ಮುಖ್ಯೋಪಾಧ್ಯಾಯ ಹುದ್ದೆ ತೆರವಾಗಿ ವರ್ಷವೇ ಗತಿಸಿದ್ದರೂ ಪ್ರಭಾರಿ ಭಾರ ತಗ್ಗಿಲ್ಲ. 

5 ಕಂಪ್ಯೂಟರ್‌ ಇದ್ದರೂ ಸಕ್ರಮ ವಿದ್ಯುತ್‌ ಇಲ್ಲದ ಕಾರಣ ಮುಖ್ಯೋಪಾಧ್ಯಾಯರ ಕೋಣೆ ಸೇರಿದಂತೆ ಮೂರು ಕೋಣೆಗಳಿಗೆ ಅಕ್ರಮ ವಿದ್ಯುತ್‌ ಸಂಪರ್ಕ ಪಡೆಯಲಾಗಿದೆ. ಎಕರೆ ವಿಸ್ತಾರದ ಈ ಶಾಲೆಯಲ್ಲಿ ಎರಡು ಕೊಳವೆ ಬಾವಿ ಕೊರೆಸಿದ್ದರೂ ವಿದ್ಯುತ್‌ ಸಂಪರ್ಕ ಇಲ್ಲದೇ ಮುಚ್ಚಲ್ಪಟ್ಟಿವೆ. ಬಿಸಿಯೂಟ ಕೇಂದ್ರಕ್ಕೆ ಗ್ರಾಪಂ ಕಲ್ಪಿಸಿರುವ ನಳದ ಪೈಪ್‌ ಕಿತ್ತು ಎಸೆದಿರುವ ಪರಿಣಾಮ ಮಕ್ಕಳು ಕುಡಿಯುವ ನೀರಿಗೂ ಪರದಾಡುವಂತಾಗಿದೆ.

ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಇದ್ದರೂ ಬಳಕೆಗೆ ಇಲ್ಲ. ಸ್ವತ್ಛ ಭಾರತದ ಕುರಿತು ಊರೆಲ್ಲ ತಿರುಗಿ ಪ್ರಚಾರ-ಜಾಗೃತಿ ಮಾಡಿದ ಮಕ್ಕಳೇ ಶಾಲಾ ಆವರಣದಲ್ಲಿ ಎಲ್ಲೆಂದರಲ್ಲಿ ಶೌಚ ಮಾಡುವ ಅನಿವಾರ್ಯ ಸ್ಥಿತಿ.
 
ವಿದ್ಯಾರ್ಥಿನಿಯರಿಗೆ ಬಯಲು ಶೌಚ ಅನಿವಾರ್ಯವಾಗಿದ್ದು, ಗೋಡೆ ಮರೆಯೇ ಗತಿ. ಶಾಲೆಯ ಕೌಂಪೌಂಡ್‌ ಗೋಡೆ ಒಡೆದು, ಕಬ್ಬಿಣದ ಗೇಟ್‌ ಕಿತ್ತು ಎಸೆಯಲಾಗಿದೆ. ಹೀಗಾಗಿ ಮಕ್ಕಳು, ಹಂದಿ, ನಾಯಿಗಳೂ ಒಟ್ಟುಗೂಡಿಯೇ ಬಿಸಿಯೂಟ ಸೇವಿಸುವ ಅಸಹ್ಯ ನೋಡಲೇಬೇಕು.

ನಾಲ್ಕು ವರ್ಷಗಳ ಹಿಂದೆ ಶಾಲೆಯ ಸೌಂದರ್ಯದೊಂದಿಗೆ ಪರಿಸರ ರಕ್ಷಣೆ ಶಿಕ್ಷಕರು ನೆಟ್ಟಿದ್ದ ಸುಮಾರು 5 ಗಿಡಗಳಲ್ಲಿ ಒಂದೂ ಜೀವಂತವಾಗಿಲ್ಲ. ಸಮಸ್ಯೆ ಹೇಳಿಕೊಳ್ಳಲು ಈ ಶಾಲೆಗೆ ನಾಲ್ಕು ವರ್ಷಗಳಿಂದ ಎಸ್‌ಡಿಎಂಸಿ ಸಮಿತಿ ರಚೆನೆಗೂ ಅವಕಾಶ ನೀಡದಷ್ಟು ಇಲ್ಲಿನ ರಾಜಕೀಯ ಮೇಲಾಟವಿದೆ. ದುಸ್ಥಿತಿಯಲ್ಲಿರುವ ಈ ಶಾಲೆ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಇಲಾಖೆಗೆ, ಗ್ರಾಪಂ ಹಾಗೂ ತಾಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ದೊರತಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಕರು ಕಷ್ಟ ಪಟ್ಟು ಪಡೆಯುವ ಸೌಲಭ್ಯ ಉಳಿಸಿಕೊಳ್ಳುವಲ್ಲಿ ಇಲ್ಲಿನ ಪುಂಡ-ಪೋಕರಿಗಳು ಬಿಡುತ್ತಿಲ್ಲ ಎಂಬುದೇ ಶಾಲೆಯ ದುಸ್ಥಿತಿಗೆ ಕಾರಣ. ಶಾಲೆ ನಮ್ಮೂರ ಹೆಮ್ಮೆ, ಭವಿಷ್ಯದ ಸಮುದಾಯ ಬದುಕು ರೂಪಿಸುವ ಸ್ವರ್ಗವನ್ನು ನರಕ ಮಾಡುವ ಕೃತ್ಯಕ್ಕೆ ಕಡಿವಾಣ ಹಾಕಬೇಕಿದೆ. ಊರ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು ಈತ್ತ ಚಿತ್ತ ನೆಡದಿದ್ದರೆ ಹರಳಯ್ಯ ಶರಣರ ತವರಿಗೆ ಅಪಕೀರ್ತಿ ತಪ್ಪಿದ್ದಲ್ಲ.

ಶಿಥಿಲಾವಸ್ಥೆಯಲ್ಲಿರುವ ಕೋಣೆಗಳು ಸೇರಿದಂತೆ ಶಾಲೆ ದುಸ್ಥಿತಿಯ ಕುರಿತು ಇಲಾಖೆ ಮೇಲಾಧಿಕಾರಿಗಳಿಗೆ ಹಲವು ಬಾರಿ ವರದಿ ನೀಡಿದ್ದೇವೆ. ಸ್ಥಳೀಯ ಆಡಳಿತಗಳಿಗೂ
ಮನವಿ ಮಾಡಿಕೊಂಡಿದ್ದರೂ ಮೂಲಭೂತ ಸೌಲಭ್ಯ ಸಿಕ್ಕಿಲ್ಲ. ಸಿಕ್ಕ ಸೌಲಭ್ಯಗಳನ್ನು ಸ್ಥಳೀಯರೇ ಹಾಳು ಮಾಡಿ, ಶಾಲೆಯನ್ನು ಅನೈತಿಕ ತಾಣ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯರಲ್ಲೇ ಈ ಬಗ್ಗೆ ಜಾಗೃತಿ ಮೂಡಬೇಕು. 
 ಈರಣ್ಣ ಕೆಂಭಾವಿ, ಪ್ರಭಾರಿ ಮುಖ್ಯೋಪಾಧ್ಯಾಯ ಸ.ಮಾ.ಹಿ.ಪ್ರಾ. ಕಗ್ಗೊಡ

ಚುನಾವಣೆ ಸಂದರ್ಭದಲ್ಲಿ ಕೆಲವು ಕೋಣೆಗಳ ಕಿಟಕಿ ದುರಸ್ತಿ ಮಾಡಿಸಲಾಗಿದೆ. ಶಾಲೆಯ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಕಾಂಪೌಂಡಗೂ ಕ್ರಿಯಾಯೋಜನೆ ರೂಪಿಸಿ ವಾರದಲ್ಲಿ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳುತ್ತೇವೆ. ಶತಮಾನೋತ್ಸವ ಸಂಭ್ರದಲ್ಲಿರುವ ಶಾಲೆ ಸದ್ಬಳಕೆಗೆ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
 ಡಿ.ಎಚ್‌. ಮುಜಾವರ, ಕಮಟಗಿ ಪಿಡಿಒ

ಶತಮಾನೋತ್ಸವದ ಸಂಭ್ರದಲ್ಲಿರುವ ಕಗ್ಗೊಡ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಮಗ್ರ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ. 14ನೇ ಹಣಕಾಸು ಯೋಜನೆಯಲ್ಲಿ ಶಾಲೆ ದುರಸ್ತಿಗೆ ಅಗತ್ಯ ಹಣ ಇದ್ದು, ಜೂನ ಮಾಸಾಂತ್ಯದೊಳಗೆ ದುರಸ್ತಿ ಮಾಡುತ್ತೇವೆ. ಡಿಡಿಪಿಐ, ಸಿಆರ್‌ಪಿ, ತಾಪಂ ಸಭೆಗಳಲ್ಲಿ ಚರ್ಚಿಸಿ ಶಾಲೆಯ ಮೂಲಭೂತ ಸೌಲಭ್ಯ ಕಲ್ಪಿಸುತ್ತೇವೆ.
 ಆರ್‌.ಎನ್‌. ಮುರಳಿ, ಬಿಇಒ, ವಿಜಯಪುರ ಗ್ರಾಮೀಣ

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next