ಅಫಜಲಪುರ: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜನಸಾಮಾನ್ಯರಿಗೆ ಓಡಾಡಲು ಅನುಕೂಲವಾಗಲಿ ಎಂದು ಪದಾಚಾರಿ ಮಾರ್ಗ ನಿರ್ಮಿಸಿದರೂ ಕೂಡ ಸಂಚಾರ ಸಮಸ್ಯೆಯಿಂದ ಮುಕ್ತಿ ಸಿಗುತ್ತಿಲ್ಲ.
ತಾಲೂಕಿನ ಚವಡಾಪುರ ಪ್ರಮುಖ ಸ್ಥಳಗಳಿಗೆ ಸಂಪರ್ಕ ಗ್ರಾಮವಾಗಿದೆ. ಇಲ್ಲಿಂದ ದತ್ತಾತ್ತೇಯ ಕ್ಷೇತ್ರವಾದ ದೇವಲ ಗಾಣಗಾಪುರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಹೋಗಿ ಬರುತ್ತಾರೆ.
ಅಲ್ಲದೆ ಚವಡಾಪುರ ಪ್ರಮುಖ ವ್ಯಾಪಾರಿ ಮತ್ತು ವೇಗವಾಗಿ ಬೆಳೆಯುತ್ತಿರುವ ಗ್ರಾಮವಾಗಿದೆ. ಚವಡಾಪುರದ ಮೂಲಕ ಹೆದ್ದಾರಿಗಳು ಹಾದು ಹೋಗುತ್ತವೆ. ಎರಡು ಹೆದ್ದಾರಿಗಳಿಗೂ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಆದರೆ ಇಲ್ಲಿನ ವ್ಯಾಪಾರಿಗಳು ಅದೇ ಪಾದಚಾರಿ ಮಾರ್ಗದ ಮೇಲೆ ತರಕಾರಿ, ದಿನಸಿ, ಗೂಡಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ಇದರಿಂದ ಜನಸಾಮಾನ್ಯರು ಮುಖ್ಯ ರಸ್ತೆ ಮೇಲೆ ಓಡಾಡುವಂತಾಗಿದೆ. ಹೀಗಾಗಿ ಇದರಿಂದ ಸಮಸ್ಯೆಯಾಗುತ್ತಿದೆ.
ಹೆದ್ದಾರಿ ಮೇಲೆ ನಿಲ್ಲುವ ಖಾಸಗಿ ವಾಹನಗಳು: ಇನ್ನೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಮೇಲೆ ಖಾಸಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಖಾಸಗಿ ವಾಹನಗಳ ನಿಲುಗಡೆಗೆ ಇಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ್ದರಿಂದ ಹೆದ್ದಾರಿ ಮೇಲೆ ನಿಲ್ಲಿಸಲಾಗುತ್ತಿದೆ. ಇದರಿಂದ ಹೆದ್ದಾರಿ ಮೇಲೆ ಓಡಾಡುವ ವಾಹನಗಳಿಗೆ ಭಾರಿ ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ ವಾಹನಗಳು ಅಪಘಾತಕ್ಕಿಡಾಗಿ ಜನಸಾಮಾನ್ಯರಿಗೆ ಮತ್ತು ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿದೆ.
ಎಚ್ಚೆತ್ತುಕ್ಕೊಳದ ಇಲಾಖೆಗಳು: ಸಂಬಂಧಿಸಿದ ಇಲಾಖೆಗಳು ಮತ್ತು ಸ್ಥಳೀಯ ಗ್ರಾಪಂ ನಿರ್ಲಕ್ಷ್ಯದಿಂದ ಚವಡಾಪುರದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತಿದೆ. ಅಲ್ಲದೆ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಸಂಬಂಧಿಸಿದ ಇಲಾಖೆಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಚವಡಾಪುರಕ್ಕೆ ಹೆಚ್ಚು ಸೌಲಭ್ಯ ಕಲ್ಪಿಸಿದರೆ ಕೆಲವೇ ದಿನಗಳಲ್ಲಿ ಚವಡಾಪುರ ಮಾದರಿ ಗ್ರಾಮವಾಗುತ್ತದೆ.
ಚವಡಾಪುರ ಭಾರಿ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಇಲ್ಲಿನ ವ್ಯಾಪಾರಸ್ಥರಿಗೆ ಮತ್ತು ಖಾಸಗಿ ವಾಹನಗಳ ನಿಲುಗಡೆಗೆ ಸಂಬಂಧಿಸಿದವರು ಸ್ಥಳಾವಕಾಶ ಕಲ್ಪಿಸಿ ಪಾದಾಚಾರಿಗಳ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಹೀಗಾದಲ್ಲಿ ಚವಡಾಪುರ ಇನ್ನಷ್ಟು ವೇಗವಾಗಿ ಅಭಿವೃದ್ಧಿಯಾಗಲಿದೆ.
ಚಂದ್ರಶಾ ಜಮಾದಾರ ಚವಡಾಪುರ ಹೊಟೇಲ್ ಮಾಲೀಕ
ಪಾದಚಾರಿ ಮಾರ್ಗದ ಮೇಲೆ ತರಕಾರಿ ಮಾರಾಟ ಮಾಡುವುದು, ಅಂಗಡಿಗಳನ್ನು ತೆರೆದಿದ್ದರ ಬಗ್ಗೆ ಗಮನಕ್ಕೆ ಬಂದಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಿ ಪಾದಚಾರಿ ಮಾರ್ಗದಲ್ಲಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.
ಸೈಯ್ಯದ ಪಟೇಲ್, ಅಭಿವೃದ್ಧಿ ಅಧಿಕಾರಿ ಚವಡಾಪುರ ಗ್ರಾಪಂ
ಚವಡಾಪುರದಲ್ಲಿನ ಸಂಚಾರ ಮತ್ತು ಪಾದಚಾರಿ ಮಾರ್ಗ ಸಮಸ್ಯೆ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಬಗೆಹರಿಸಲಾಗುವುದು. ಪಾದಚಾರಿ ಮಾರ್ಗದ ಮೇಲೆ ವ್ಯಾಪಾರ ಮಾಡುವವರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಈಗ ಪುನಃ ಅದೇ
ಮುಂದುವರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಎಸ್.ಎಸ್ ದೊಡಮನಿ, ಪಿಎಸ್‌ಐ ದೇವಲ ಗಾಣಗಾಪುರ
ಮಲ್ಲಿಕಾರ್ಜುನ ಹಿರೇಮಠ