Advertisement

ಹಾರುತಿದೆ ಡ್ರ್ಯಾಗನ್‌ ನೋಡಾ… 

01:46 PM Nov 10, 2018 | Team Udayavani |

ಡ್ರ್ಯಾಗನ್‌ ಎನ್ನುವ ಹಾರುವ ರಕ್ಕಸಾಕಾರದ ಜೀವಿ ಬೆಂಕಿಯನ್ನು ಉಗುಳುತ್ತದೆ ಎನ್ನುವ ಸಂಗತಿ ಅನೇಕರಿಗೆ ತಿಳಿದಿರಬಹುದು. ಆದರೆ ಇಲ್ಲಿಯವರೆಗೆ ಅದರ ಅಸ್ತಿತ್ವ ಬರೀ ಚಿತ್ರಗಳಿಗೆ, ಪುರಾಣ ಕತೆಗಳಿಗೆ ಮಾತ್ರ ಸೀಮಿತವಾಗಿ ಇರುವುದರಿಂದ, ಅದು ಇದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲಿಯವರೆಗೆ ದೊರಕದೇ ಇರುವುದರಿಂದ ಅದು ಕಾಲ್ಪನಿಕ ಜೀವಿ ಎಂದೇ ನಂಬಲಾಗಿದೆ. ಅದೇ ಹೆಸರನ್ನು ಹೊತ್ತ ಜೀವಿಯೊಂದು ದಕ್ಷಿಣಭಾರತದ ಕಾಡುಗಳಲ್ಲಿವೆ!

Advertisement

ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿ ಓದಿದವರಿಗೆ ಈ ಜೀವಿಯ ಪರಿಚಯ ಇದ್ದೇ ಇರುತ್ತದೆ. ಎಸ್‌… ಇದು ‘ಹಾರುವ ಡ್ರ್ಯಾಗನ್‌’ ಅಥವಾ ‘ಹಾರುವ ಹಲ್ಲಿ’ ಎಂದೇ ಹೆಸರುವಾಸಿ. ನಿಜ ಹೇಳಬೇಕೆಂದರೆ, ಇದಕ್ಕೆ ರೆಕ್ಕೆಗಳಿಲ್ಲ. ಆದರೆ, ಪಕ್ಕೆಲುಬಿನ ಜಾಗದಲ್ಲಿರುವ ಚರ್ಮ ರೆಕ್ಕೆಯಂತೆ ತೆರೆದುಕೊಳ್ಳಬಲ್ಲದು. ಇದು ಜೀವಿಯನ್ನು ಗಾಳಿಯಲ್ಲಿ ತೇಲಿಸುತ್ತದೆ. ಈ ರೆಕ್ಕೆ ರಚನೆಯ ಉಪಯೋಗಗಳು ತುಂಬಾ ಸೀಮಿತ. ಹಾರುವ ಹಲ್ಲಿಗೆ ಹಕ್ಕಿಗಳಂತೆ ನೆಲದಿಂದ ಆಗಸಕ್ಕೆ ನೆಗೆಯಲಾಗುವುದಿಲ್ಲ, ಆದ್ದರಿಂದಲೇ ಈ ಜೀವಿ ಮರದ ತುತ್ತ ತುದಿಗೆ ಏರಿ ಅಲ್ಲಿಂದ ಇನ್ನೊಂದು ಮರಕ್ಕೆ ಹಾರುತ್ತದೆ. 

ಹಾರುವ ಹಲ್ಲಿ ನೆಲದ ಮೇಲೆ ಕಾಲಿಡುವುದು ಒಂದೇ ಕಾರಣಕ್ಕೆ, ಅದು ಮೊಟ್ಟೆ ಇಡಲು ಎನ್ನುವುದು ಸಂಶೋಧಕರ ಅಭಿಪ್ರಾಯ. ಇದರ ಮೈಯ ಹಳದಿ, ಕಿತ್ತಳೆ ಮತ್ತು ಹಸುರು ಬಣ್ಣದ ವಿನ್ಯಾಸಗಳು ಹಿನ್ನೆಲೆಯ ಪರಿಸರದೊಂದಿಗೆ ತಾಳೆಯಾಗುವುದರಿಂದ ಇವು ಕಣ್ಣಿಗೆ ಬೀಳುವುದೇ ಇಲ್ಲ. ಕಣ್ಣಿಗೆ ಕಂಡದ್ದೆಲ್ಲವನ್ನೂ ತನ್ನ ಉಪಯೋಗಕ್ಕಾಗಿ ಸ್ವಾಧೀನ ಪಡಿಸಿಕೊಳ್ಳುವ ಮನುಷ್ಯನಿಗೆ ಇವು ಕಾಣದಿದ್ದರೇ ಒಳ್ಳೆಯದು. ಹಾರುವ ಹಲ್ಲಿಯ ರೂಪ- ರಚನೆ, ಅವುಗಳನ್ನು ಕಬಳಿಸಲೆತ್ನಿಸುವ ಜೀವಿಗಳಿಂದ ಮಾತ್ರವಲ್ಲ ಮನುಷ್ಯನಿಂದಲೂ ರಕ್ಷಣೆ ನೀಡಲಿ ಎಂದಷ್ಟೇ ಆಶಿಸೋಣ!

Advertisement

Udayavani is now on Telegram. Click here to join our channel and stay updated with the latest news.

Next