Advertisement

ಸೇಡಿಯಾಪು ಪಳ್ಳಕ್ಕೆ ಕೆರೆ ರೂಪ: ಮೂರು ಗ್ರಾಮಕ್ಕೆ ಸಹಕಾರಿ

02:16 AM Apr 27, 2021 | Team Udayavani |

ಪುತ್ತೂರು: ಬನ್ನೂರು ಗ್ರಾಮದ ಸೇಡಿಯಾಪಿನ ಮದಕ (ಪಳ್ಳ)ಕ್ಕೆ ಕೆರೆ ರೂಪ ನೀಡಲಾಗಿದ್ದು, ಮೂರು ಗ್ರಾಮಗಳ 250 ಎಕ್ರೆ ಕೃಷಿ ಭೂಮಿಯಲ್ಲಿ ಅಂತರ್ಜಲ ವೃದ್ಧಿಗೆ ಮೂಲವಾಗಲಿದೆ.

Advertisement

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು-ನಮ್ಮ ಕೆರೆ ಯೋಜನೆಯಡಿ ಕೆರೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಕೆರೆ ಇದ್ದು ಭವಿಷ್ಯದಲ್ಲಿ ಮಾದರಿ ಕೆರೆಯಾಗಿ ರೂಪಿಸುವ ಯೋಜನೆ ಕೂಡ ಇಲ್ಲಿದೆ.

ಪಳ್ಳಕ್ಕೆ ಕೆರೆ ರೂಪ
ಕೆರೆ ನಿರ್ಮಾಣವಾಗಿರುವ ಸ್ಥಳ ಹಿಂದೆ ಪ್ರಾಣಿ, ಪಕ್ಷಿಗಳಿಗೆ ನೀರುಣಿಸುವ, ಬೇಸಗೆಯ ಬಿಸಿಗೆ ತಂಪನ್ನೀಯುವ ಪಳ್ಳವಾಗಿತ್ತು. ಈ ಸರಕಾರಿ ಜಾಗವನ್ನು 30 ವರ್ಷಗಳಿಗೆ ಸೇಡಿಯಾಪು ಜನಾರ್ದನ ಭಟ್‌ ಲೀಸ್‌ ಪಡೆದುಕೊಂಡು ಕಿರು ಡ್ಯಾಂ ನಿರ್ಮಿಸಿ ಕೃಷಿ ಮತ್ತು ಜನರಿಗೆ ನೀರಿನ ವ್ಯವಸ್ಥೆ ಒದಗಿಸಿದರು. ನಾಲ್ಕು ವರ್ಷಗಳ ಹಿಂದೆ ಅವಧಿ ಮುಗಿದ ಬಳಿಕ ಪುನಃ ಸರಕಾರಕ್ಕೆ ಹಸ್ತಾಂತರಿಸಲಾಯಿತು. ಇದೀಗ ಧ. ಗ್ರಾ. ಯೋಜನೆ ಮೂಲಕ 1.30 ಎಕ್ರೆ ಸ್ಥಳದಲ್ಲಿ ಕೆರೆ ನಿರ್ಮಿಸಲಾಗಿದ್ದು ಸದಾಶಿವ ತೀರ್ಥ ಕೆರೆ ಎಂಬ ಹೆಸರಿನಿಂದ ಗುರುತಿಸಿಕೊಳ್ಳಲಿದೆ.

4.12 ಲಕ್ಷ ರೂ.ವೆಚ್ಚ
ನಮ್ಮೂರು-ನಮ್ಮ ಕೆರೆ ಯೋಜನೆಯಡಿ ಶ್ರೀ ಧ. ಗ್ರಾ. ಯೋಜನೆಯು 4.12 ಲಕ್ಷ ರೂ.ಅನುದಾನ ಬಳಸಿ ಪಳ್ಳವನ್ನು ಕೆರೆಯಾಗಿ ಪರಿವರ್ತಿಸಿದೆ. 258 ಗಂಟೆ ಹಿಟಾಚಿ, 200 ಗಂಟೆ ಟಿಪ್ಪರ್‌ ಕೆಲಸ ನಿರ್ವಹಿಸಿದೆ. ಬನ್ನೂರು, ಪಟ್ನೂರು, ಕೋಡಿಂಬಾಡಿ ಮೂರು ಗ್ರಾಮಗಳ ವ್ಯಾಪ್ತಿಯ 250 ಎಕ್ರೆ ಕೃಷಿ ಭೂಮಿಯ ಅಂತರ್ಜಲ ವೃದ್ಧಿಗೆ ಈ ಕೆರೆ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಉದ್ಯಾನವನಕ್ಕೆ ಚಿಂತನೆ
ವಿವೇಕಾನಂದ ವಿದ್ಯಾವರ್ಧಕ ಸಂಘ, ಬನ್ನೂರು ಗ್ರಾ.ಪಂ., ಶಾಸಕರ ಸಹಕಾರ ದೊಂದಿಗೆ ಕೆರೆಯ ಮುಂದಿನ ಹಂತದ ಅಭಿವೃದ್ಧಿಗೆ ಚಿಂತನೆ ನಡೆದಿದೆ. ಕೆರೆ ಸುತ್ತ ವಾಕಿಂಗ್‌ ಪಾಥ್‌, ಉದ್ಯಾನವನ, ಔಷಧ ಗಿಗಡಗಳ ನಿರ್ಮಾಣ ಮೊದಲಾದಿ ಪರಿಸರ ಸ್ನೇಹಿ ಕಾರ್ಯಗಳ ಅನುಷ್ಠಾನದ ಯೋಚನೆ ಇಲ್ಲಿದೆ. ಅದಕ್ಕೆ ಪೂರಕವಾಗಿ ಧ. ಗ್ರಾ. ಯೋಜನೆ ಮೂಲಕ ಕೆರೆಯನ್ನು ನಿರ್ಮಿಸಿದ್ದು ಮುಂದಿನ ನಿರ್ವಹಣೆಗಾಗಿ ಗ್ರಾ.ಪಂ.ಗೆ ಹಸ್ತಾಂತರಿಸಲಿದೆ.

Advertisement

ಸಹಕಾರ ನೀಡಿದ್ದಾರೆ
ಶ್ರೀ ಧ. ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು-ನಮ್ಮ ಕೆರೆ ಯೋಜನೆಯಡಿ 4.12 ಲ.ರೂ.ವೆಚ್ಚದಲ್ಲಿ ಮದಕವನ್ನು ಕೆರೆಯಾಗಿ ಪರಿವರ್ತಿಸಲಾಗಿದೆ. ಕೆರೆಯಲ್ಲಿ ಸಂಗ್ರಹವಾದ ನೀರಿನಿಂದ ಮೂರು ಗ್ರಾಮಗಳ ಕೃಷಿ ಭೂಮಿಗೆ ಪ್ರಯೋಜನವಾಗಲಿದೆ. ಗ್ರಾಮಸ್ಥರು, ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ.

-ಉಮೇಶ್‌ ಬಿ, ಕೃಷಿ ಅಧಿಕಾರಿ,ಶ್ರೀ ಧರ್ಮಸ್ಥಳ ಗ್ರಾ. ಯೋಜನೆ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next