ನವದೆಹಲಿ: ವಸಾಹತುಶಾಹಿ ಕಾಲದ ಕ್ರಿಮಿನಲ್ ಕಾನೂನುಗಳನ್ನು ಬದಲಾಯಿಸಲು ಮುಂದಾಗಿರುವುದಾಗಿ ಶುಕ್ರವಾರ (ಆಗಸ್ಟ್ 11) ಘೋಷಿಸಿರುವ ಕೇಂದ್ರ ಸರ್ಕಾರ, ಭಾರತೀಯ ಕ್ರಿಮಿನಲ್ ಕಾನೂನುಗಳಿಗೆ ತಿದ್ದುಪಡಿ ತಂದು ಮೂರು ಹೊಸ ಮಸೂದೆಯನ್ನು ಮಂಡಿಸಿದೆ.
ಇದನ್ನೂ ಓದಿ:Shoe ನೆಕ್ಕಲು ಒತ್ತಾಯಿಸಿದ ಆರೋಪ; ಕಾಂಗ್ರೆಸ್ ಶಾಸಕನ ವಿರುದ್ಧ ಎಫ್‌ಐಆರ್
ಲೋಕಸಭೆಯ ಮುಂಗಾರು ಅಧಿವೇಶನದ ಕೊನೆಯ ದಿನದ ಕಲಾಪದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಬ್ರಿಟಿಷ್ ಕಾಲದ ಕಾನೂನಿಗೆ ಬದಲಾಗಿ ನೂತನ ಮೂರು ಮಸೂದೆಗಳನ್ನು ಮಂಡಿಸಿದ್ದರು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023, ಭಾರತೀಯ ನ್ಯಾಯ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಮಸೂದೆ 2023 ಹೊಸ ಮಸೂದೆಯನ್ನು ಮಂಡಿಸಿದ್ದು, ಈ ಮಸೂದೆಯನ್ನು ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಶಿಫಾರಸು ಮಾಡಲಾಗುವುದು ಎಂದು ಶಾ ತಿಳಿಸಿದ್ದಾರೆ.
1860ರ ಭಾರತೀಯ ದಂಡ ಸಂಹಿತೆ (IPC) ಬದಲಾಗಿ ಭಾರತೀಯ ನ್ಯಾಯ ಸಂಹಿತೆ 2023ರ ಮಸೂದೆ ಮಂಡಿಸಲಾಗಿದೆ. ಅಪರಾಧ ದಂಡ ಸಂಹಿತೆ (ಕ್ರಿಮಿನಲ್ ಪ್ರೊಸಿಜರ್ ಕೋಡ್) ಬದಲಾಗಿ ನಾಗರಿಕ ಸುರಕ್ಷಾ ಮಸೂದೆ 2023 ಎಂದು ಬದಲಾಯಿಸಲಾಗಿದೆ. ಅದೇ ರೀತಿ ಇಂಡಿಯನ್ ಎವಿಡೆನ್ಸ್ ಆಕ್ಟ್ 1872ರ ಬದಲಾಗಿ ಭಾರತೀಯ ಸಾಕ್ಷ್ಯ ಮಸೂದೆ 2023 ಎಂದು ಮಸೂದೆ ಮಂಡಿಸಲಾಗಿದೆ.
ನೂತನ ಮಸೂದೆಯಲ್ಲಿ ದೇಶದ್ರೋಹ ಕಾಯ್ದೆಯನ್ನು ರದ್ದುಗೊಳಿಸಲಾಗಿದ್ದು, ಗುಂಪು ಥಳಿತ ಮತ್ತು ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಮರಣದಂಡನೆ ಶಿಕ್ಷೆಯನ್ನು ಪರಿಷ್ಕೃತ ಕಾನೂನಿನಲ್ಲಿ ಸೇರಿಸಲಾಗಿದೆ.