ಭಾರತದ ಸಂಸತ್ ಮೇಲೆ ದಾಳಿ ನಡೆದು 22 ವರ್ಷಗಳಾಗಿರುವ ದಿನವೇ ಇಡೀ ದೇಶ ಬೆಚ್ಚಿ ಬೀಳುವ ಘಟನೆ ನಡೆದಿದೆ. ಹೊಸ ಸಂಸತ್ ಭವನದಲ್ಲಿ ಲೋಕಸಭೆ ಕಲಾಪ ನಡೆಯುತ್ತಿರಬೇಕಾದರೆ ಇಬ್ಬರು ದುಷ್ಕರ್ಮಿಗಳು ವೀಕ್ಷಣ ಗ್ಯಾಲರಿಯಿಂದ ಕಲಾಪ ನಡೆಯುವ ಸದನಕ್ಕೆ ಜಿಗಿದು ಸ್ಮೋಕ್ ಬಾಂಬ್ ಸಿಡಿಸಿ ರಾದ್ಧಾಂತ ಎಬ್ಬಿಸಿರುವುದು ಹಲವು ಪ್ತಶ್ನೆಗಳನ್ನು ಮುಂದಿಟ್ಟಿದೆ.
ಇದು ಸಾಮಾನ್ಯವಾದ ಘಟನೆಯಲ್ಲ. ಇಡೀ ದೇಶವನ್ನು ಪ್ರತಿನಿಧಿಸುತ್ತಿರುವ ಪ್ರಜಾಸತ್ತೆಯ ದೇವಳದೊಳಗೆ ನುಗ್ಗಿ ಇಂಥದ್ದೊಂದು ಅನಾಹುತ ನಡೆಸಬೇಕಾದರೆ ಇದು ಅತ್ಯಂತ ಪೂರ್ವ ನಿಯೋಜಿತ ಕೃತ್ಯ ಎನ್ನುವುದರಲ್ಲಿ ಅನುಮಾನವಿಲ್ಲ. ಈಗಷ್ಟೇ ನೂತನ ಸಂಸತ್ ಭವನದಲ್ಲಿ ಮೂರು ಸುತ್ತಿನ ಭದ್ರತಾ ಕ್ರಮಗಳನ್ನು ಕೈಗೊಂಡು ಹೊಸ ವ್ಯವಸ್ಥೆ ರೂಪಿಸಲಾಗಿದೆ. ಆದರೆ ಈ ಮೂರು ಸುತ್ತಿನ ಭದ್ರತಾ ವ್ಯವಸ್ಥೆಯನ್ನು ಮೀರಿ ಈ ಇಬ್ಬರು ದುಷ್ಕರ್ಮಿಗಳು ಶೂ ನೊಳಗೆ ಹೊಗೆಯ ಕ್ಯಾನಿಸ್ಟರ್‌ಗಳನ್ನು ಅವಿತಿಟ್ಟುಕೊಂಡು ನುಸುಳಿದ್ದಾರೆ ಎಂದರೆ ಇದು ಸಾಮಾನ್ಯವಾದ ಭದ್ರತಾ ಲೋಪ ಅಲ್ಲ. ಈ ಕುರಿತು ಸಮಗ್ರ ತನಿಖೆ ನಡೆದು ಸತ್ಯಾಂಶ ಹೊರಗೆ ಬರಲೇಬೇಕಾಗಿದೆ. ಇದರ ಹಿಂದೆ ಯಾವುದೇ ಸಂಘಟನೆಗಳಿರಲಿ ಅಥವಾ ಇನ್ನಾವುದೇ ಸೈದ್ಧಾಂತಿಕ ಮನಃಸ್ಥಿತಿಯೇ ಇರಲಿ ಆ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾಗಿದೆ.
ಈ ಘಟನೆಯ ಹಿಂದೆ ಇನ್ನೂ ನಾಲ್ವರು ಇದ್ದು ಒಟ್ಟು ಆರು ಮಂದಿ ಸಂಘಟಿತರಾಗಿ ಕಾರ್ಯಾಚರಣೆ ಮಾಡಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಎಲ್ಲರನ್ನು ಬಂಧಿಸಲಾಗಿದೆ. ಇನ್ನೊಬ್ಬನ ಹುಡುಕಾಟ ನಡೆಸಲಾಗುತ್ತಿದೆ. ಈ ಆರೂ ಮಂದಿ ಬೇರೆ ಬೇರೆ ರಾಜ್ಯದವರಾಗಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿತರಾಗಿದ್ದು, ಒಂದೆಡೆ ಸೇರಿ ಇಂಥದ್ದೊಂದು ಕುಕೃತ್ಯಕ್ಕೆ ಮುಂದಾಗಿರುವ ಬಗ್ಗೆ ಪ್ರಾಥಮಿಕ ಮಾಹಿತಿಗಳು ಬಂದಿವೆ.
ಭದ್ರತಾ ವ್ಯವಸ್ಥೆಯ ಲೋಪ ಮತ್ತು ಸಂಸದೀಯ ಸಿಬಂದಿಯ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದೆ ಎನ್ನುವುದರಲ್ಲಿ ಅನುಮಾನ ಇಲ್ಲ. ಈ ಇಬ್ಬರು ದುಷ್ಕರ್ಮಿಗಳು ಲೋಕಸಭಾ ಪ್ರೇಕ್ಷಕರ ಗ್ಯಾಲರಿಯಲ್ಲಿ 2 ಗಂಟೆಗಳ ಕಾಲ ಇದ್ದರು ಎನ್ನುವುದು ಆಘಾತಕಾರಿ. ಒಂದು ವೇಳೆ ಇವರ ಬಳಿ ವಿಷಕಾರಿ ಅನಿಲ ಅಥವಾ ಸ್ಫೋಟಕಗಳು ಇರುತ್ತಿದ್ದಿದ್ದರೆ ಪರಿಸ್ಥಿತಿ ಹೇಗಿರುತಿತ್ತು ಎಂದು ಊಹಿಸುವುದೂ ಕಷ್ಟಸಾಧ್ಯ. ಹೀಗಾಗಿ ಭದ್ರತಾ ವ್ಯವಸ್ಥೆ ಕುರಿತು ಮರುಪರಿಶೀಲನೆ ನಡೆಯಬೇಕಾದ ಅನಿವಾರ್ಯತೆ ಇದೆ.
ಹಾಗೆಯೇ ಪಾಸ್ ನೀಡಿಕೆ ವ್ಯವಸ್ಥೆಯಲ್ಲೂ ಮರುಪರಿಶೀಲನೆ ನಡೆಸಬೇಕಾಗಿರುವುದು ಈಗಿನ ತುರ್ತು. ನಮ್ಮ ಪ್ರಜಾಪ್ರಭುತ್ವದ ಪ್ರಮುಖ ಕೇಂದ್ರವಾದ ಸಂಸತ್ ಭವನಕ್ಕೆ ಪ್ರವೇಶ ನೀಡಲು ಸಂಸತ್ ಸದಸ್ಯರು ಅತ್ಯಂತ ಬಿಗಿಯಾದ ನಿಲುವನ್ನು ಹೊಂದಲೇಬೇಕಾಗಿದೆ.